Tuesday, November 29, 2011

ಕೀಲಿಮಣೆಯಲಿ ಅಕ್ಷರ ಕಲಿತು ಹೃದಯದಲ್ಲಿ ಪ್ರೇಮಾಕ್ಷರ ಬರೆದವಳಿಗೆ...


ನನ್ನ ಆತ್ಮೀಯಳಿಗೆ,

ನಿನ್ನನ್ನು ಆತ್ಮೀಯಳು ಎನ್ನುವ ಬದಲು ಮೊದಲಿನ ಹಾಗೆ ಚಿನ್ನ... ಪುಟ್ಟ ಎಂದು ಕರೆಯುವ ಧೈರ್ಯ ನನಗಿಲ್ಲ. ನಾನು ಕರೆದರೆ ನಿನ್ನ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಊಹಿಸಲೂ ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ಆತ್ಮೀಯಳು ಎಂದಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಹೇಗಿದ್ದಿಯಾ? ನೀನು ಚೆನ್ನಾಗಿರುತ್ತಿ ಎಂದು ನನಗೆ ಗೊತ್ತು. ಆದರೂ ಕೇಳಬೇಕೆನ್ನಿಸಿತು. ನಾನು ಪ್ರೀತಿಸುವ, ಪ್ರೀತಿಸುತ್ತಿರುವ ಜೀವವಾದ್ದರಿಂದ ಕೇಳಿದೆ. ನಾನು ಯಾರು ಗೊತ್ತಾ ಒಂದು ಕಾಲದಲ್ಲಿ ನಿನ್ನ ಚಿನ್ನ, ಪುಟ್ಟ ಆಗಿದ್ದವನು. ನಿನ್ನೊಂದಿಗೆ ನೂರುಕಾಲವೂ ಜೊತೆಗಿದ್ದು ಜಗತ್ತನ್ನೇ ಮರೆಯಬೇಕೆಂದು ಹಪಹಪಿಸುತ್ತಿದ್ದವನು. ಈಗ ನನಗೆ ಸಿಕ್ಕಿರೋ ಹಣೆಪಟ್ಟಿ `ಭಗ್ನ ಪ್ರೇಮಿ'.

ಅದೇಕೋ ಗೊತ್ತಿಲ್ಲ. ಮೊದಲ ನೋಟ, ಮಾತಿನಲ್ಲೇ ನೀನು ನನ್ನ ಹೃದಯದ ಒಡತಿಯಾಗಿಬಿಟ್ಟಿದ್ದೆ. ಆದರೂ ನಿನ್ನ ಜೊತೆ ಹೇಳಲು ಏನೋ ಹಿಂಜರಿತ. ಕೊನೆಗೆ ಧೈರ್ಯ ಮಾಡಿ ಹೇಳಿದ್ದೆ. ಮನಸಲ್ಲಿಟ್ಟು ಕೊರಗುವುದಕ್ಕಿಂತ ಒಮ್ಮೆ ಹೇಳಿಬಿಡಬೇಕೆಂದು. ನೀನು ಮಾತ್ರ ಗೋಡೆಯ ಮೇಲೆ ದೀಪವಿಟ್ಟವರ ಹಾಗೆ ಆಡುತ್ತಿದ್ದೆ. ಕೊನೆಗೆ ಬಸ್ನಲ್ಲಿ ಒಂದೇ ಸೀಟ್ನಲ್ಲಿ ಕೂತಿದ್ದಾಗ 'ನೀನಂದ್ರೆ ನಂಗೆ ತುಂಬಾ ಇಷ್ಟ ಕಣೋ. ಆದ್ರೆ ಹೆದ್ರಿಕೆ ಆಗುತ್ತೆ. ಲವ್ ಯೂ. ಕೈ ಯಾವತ್ತೂ ಬಿಡಬೇಡ' ಎಂದು ನನ್ನ ಕೈ ಗಟ್ಟಿ ಹಿಡಿದು ಹೇಳಿದ್ದ ಮುಗ್ಧ ಹುಡುಗಿ ನೀನು. ನಾವು ಎಲ್ಲಿದ್ದರೂ ಜೊತೆಗೇ ಇರುತ್ತಿದ್ದವರು. ಕಾಲೇಜಿಗೆ ಬರುವಾಗಲೂ, ಹೋಗುವಾಗಲೂ. ಮಧ್ಯಾಹ್ನದ ಊಟವನ್ನು ಪರಸ್ಪರ ಕೈತುತ್ತು ನೀಡಿ ಉಣ್ಣುತ್ತಿದ್ದವರು. ಬಸ್ನಲ್ಲೂ ನಮ್ಮ ಸೀಟ್ ಒಂದೇ ಆಗಿರುತ್ತಿತ್ತು. 15 ಕಿ.ಮೀ. ಪ್ರಯಾಣದಲ್ಲಿ ಬಸ್ ಡ್ರೈವರ್ ಇಪ್ಪತ್ತು ನಿಮಿಷ ಮಾತ್ರ ತೆಗೆದುಕೊಳ್ಳುತ್ತಿದ್ದಾಗ ಅದೆಷ್ಟು ಬೇಗ ಬಂತು ಎಂದು ವಿದಾಯ ಗೀತೆ ಹಾಡುತ್ತಿದ್ದವು. ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಡುತ್ತಿದ್ದೆವು ಅಲ್ವಾ?

ರಾತ್ರಿ ಮಲಗುವಾಗ ನೀನು ಕಾಲ್ ಮಾಡಿ ಗುಡ್ನೈಟ್ ಚಿನ್ನಾ.. ನನ್ನ ಕನಸಿನಲ್ಲಿ ಬರುತ್ತಿ ಅಲ್ವಾ? ಒಂದು ಮುತ್ತು ಕೊಡು ಪ್ಲೀಸ್ ಅನ್ನುತ್ತಿದ್ದೆ. ಬೆಳಿಗ್ಗೆ ಕಾಲ್ ಮುಖಾಂತರ ನನ್ನನ್ನು ಬೆಡ್ನಿಂದ ಎಬ್ಬಿಸಿ ಗುಡ್ ಮಾರ್ನಿಂಗ್ ಚಿನ್ನಾ ಅನ್ನುತ್ತಿದ್ದೆ. ಮತ್ತೆ ಅದೇ ಕಾಲೇಜು ಕಾರಿಡಾರ್ ಸುತ್ತಾಟ, ಮಧ್ಯಾಹ್ನ ಜೊತೆಗಿನ ಊಟ. ಬಸ್ ಪ್ರಯಾಣ. ಇದೆಲ್ಲವನ್ನೂ ನಿನಗೇಕೆ ಈಗ ನೆನಪಿಸುತ್ತಿದ್ದೇನೆ ಎಂದು ಕೋಪ ಬರುತ್ತಿದೆಯಾ? ನಿನಗೆ ಮರೆತು ಹೋದದ್ದನ್ನು ನೆನಪಿಸುವ ಸಣ್ಣ ಪ್ರಯತ್ನ ಕಣೇ ನೀನು. ಕಾಲೇಜು ಕಾರಿಡಾರಿನುದ್ದಕ್ಕೂ ಪ್ರೇಮಿಗಳೆಂದರೆ ಅವರ ತರಹ ಇರಬೇಕು, ಅವರಿಬ್ಬರೂ ಮೇಡ್ ಫಾರ್ ಈಚ್ ಅದರ್ ಅಂತೆಲ್ಲಾ ಹೇಳುತ್ತಿದ್ದ ಮಾತು ನನ್ನ ಕಿವಿಗೆ ಬಿದ್ದಿತ್ತು. ಆದರೆ ಇಂದು!

ನಮ್ಮ ಮಕ್ಕಳು ಹೀಗೆ ಇರಬೇಕು, ಅವರನ್ನು ಹೀಗೆ ಸಾಕಬೇಕು, ನಾನು ನೀನು ಒಂದೇ ಆಫೀಸ್ನಲ್ಲಿ ಕೆಲಸ ಮಾಡಬೇಕು, ಜೊತೆಯಾಗೇ ಮನೆಗೆ ಬರಬೇಕು, ನಿನಗಿಷ್ಟವಾದ ಅಡುಗೆ ಮಾಡಿ ನಾನೇ ನಿನಗೆ ಕೈಯ್ಯಾರೆ ತಿನ್ನಿಸಬೇಕು, ನಿನ್ನ ಮಡಿಲಲ್ಲಿ ಮಗುವಿನಂತೆ ಮಲಗಬೇಕು, ನಿನ್ನೊಂದಿಗೆ ಬೈಕ್ನಲ್ಲಿ ಬಿಗಿದಪ್ಪಿ ಲಾಂಗ್ ಡ್ರೈವ್ ಮಾಡಬೇಕು ಎಂದೆಲ್ಲಾ ಕಂಡಿದ್ದ ಕನಸು ಇಂದು ನನ್ನೆದುರೇ ನುಚ್ಚು ನೂರಾಗಿದೆ!

ಇಂದಿಗೂ ನಾವಿಬ್ಬರೂ ಅದೇ ಬಸ್ನಲ್ಲಿ ಓಡಾಡುತ್ತೇವೆ. ಆದರೆ ನಮ್ಮಿಬ್ಬರ ಸೀಟ್ ಮಾತ್ರ ಬೇರೆ ಬೇರೆ. ಏನು ವಿಚಿತ್ರ ಅಲ್ವಾ? ನೀನಂದ್ರೆ ನನಗಿಷ್ಟ ಕಣೋ. ಆದ್ರೆ ಹೆದ್ರಿಕೆ ಆಗುತ್ತೆ. ಲವ್ ಯೂ ಪುಟ್ಟಾ ಎಂದು ಕೈ ಗಟ್ಟ್ತಿ ಹಿಡಿದಿದ್ದ ಸ್ಥಳ ಬಂದಾಗ ಪ್ರತೀ ದಿನ ನಿನ್ನ ಮುಖ ನೋಡುತ್ತೇನೆ. ನನ್ನ ಹಾಗೆ ನಿನ್ನ ಕಣ್ಣಲ್ಲಿ ಹನಿಗಳೇನಾದರೂ ಜಿನುಗುತ್ತಿದೆಯಾ ಅಥವಾ ನನ್ ಕಡೆ ತಿರುಗಿ ನೋಡುತ್ತಿಯಾ ಎಂದು. ಆದರೆ ನಾನು ನಿನ್ನ ಬರ್ತ್ ಡೇಗೆ ಗಿಫ್ಟ್ ಕೊಟ್ಟ ಮೊಬೈಲ್ನಲ್ಲಿ ಇನ್ನಾರ ಜೊತೆಗೋ ಮಾತಾಡ್ತಾ ಇರ್ತೀ ಅಲ್ವಾ? ಏನೋ ಒಂಥರಾ ನೋವು ಕಣೇ.. ನನಗೀಗಲೂ ನೀನು ನನ್ನನ್ನು ಒಪ್ಪಿಕೊಂಡ ತಿರುವಿನ ರಸ್ತೆ ಬಂದಾಗ ಏನೋ ಒಂಥರಾ ಭಾವನೆ ಬರುತ್ತೆ ಗೊತ್ತಾ?

ನಿನಗೆ ನನ್ನ ಲ್ಯಾಪ್ ಟಾಪ್ ನಲ್ಲಿ ಕನ್ನಡ ಟೈಪಿಂಗ್ ಕಲಿಸಿದ್ದು ನೆನಪಿದೆಯಾ? ಸಣ್ಣ ಮಕ್ಕಳಿಗೆ ಕಲಿಸಿದ ಹಾಗೆ! ನಿನ್ನ ಕೈ ಹಿಡಿದುಕೊಂಡು, ಒಂದೊಂದು ಬೆರಳನ್ನು ಒಂದೊಂದೇ ಕೀಲಿಮಣೆ ಮೇಲೆ ಒತ್ತಿ ಒತ್ತಿ 'ಅರ್ಕ ಒತ್ತು ಕೊಡಲು ಇದು ಒತ್ತಬೇಕು ಚಿನ್ನಾ, ಮಹಾ ಪ್ರಾಣಾಕ್ಷರಕ್ಕೆ ಶಿಫ್ಟ್ ಒತ್ತಿ ಅಕ್ಷರ ಒತ್ತಬೇಕು ಪುಟ್ಟ' ಎಂದು. ನಿನ್ನ ಬೆನ್ನ ಹಿಂದೆ ನಾನು ಕೂತು ನಿನ್ನ ಮಡಿಲಲ್ಲಿ ಲ್ಯಾಪ್ ಟಾಪ್ ನಲ್ಲಿ ಇಟ್ಟು ನಿನಗೆ ಕನ್ನಡ ಟೈಪಿಂಗ್ ಕಲಿಸಿದ್ದು ಈಗಲೂ ನೆನಪಿಸಿಕೊಂಡರೆ ಮರುಭೂಮಿಯಲ್ಲಿರುವ ಓಯಸಿಸ್ನಂತೆ ನನ್ನ ತುಟಿಯಂಚಿನಲ್ಲಿ ನಗು ಮೂಡುತ್ತದೆ. ನನ್ನ ಪ್ರಯತ್ನದಂತೆ ನೀನು ಕನ್ನಡ ಟೈಪಿಂಗ್ ಕಲಿತಾಗ 'ನನಗೆ ಟೈಪಿಂಗ್ ಕಲಿಸಿದ ಕೈಗಳಿಗೆ ಮುತ್ತು ಕೊಡಬೇಕು' ಎಂದು ಹೇಳಿ ನನ್ನ ಕೈಗಳಿಗೆ ಮುತ್ತಿಕ್ಕಿದ್ದು ನೆನಪಿಸಿಕೊಂಡರೆ ಕಣ್ಣು ತೇವವಾಗುತ್ತದೆ ಕಣೇ. ಅದು ನೆನಪಾದಾಗ ಒಮ್ಮೆ ನಿನ್ನನ್ನು ನೆನಪಿಸಿಕೊಂಡು ಕೈಗಳನ್ನು ಎದೆಯ ಮೇಲೊತ್ತಿ ಕಣ್ಮುಚ್ಚಿಕೊಳ್ಳುತ್ತೇನೆ. ಸರ್ಪ್ರೈಸ್ ಆಗಿ ನಿನ್ನ ಹಣೆಗೆ ಮುತ್ತಿಟ್ಟು ನಿನಗೆ ಶಾಕ್ ನೀಡಿದ್ದು ನೆನಪಿಸಿಕೊಂಡರೆ...

ಅವತ್ತು ನಾವು ಬಸ್ಸ್ಟಾಂಡ್ಗೆ ಹೋಗುತ್ತಿದ್ದಾಗ ನಿನ್ನ ಕಾಲಿನ ಚಪ್ಪಲಿ ಕಿತ್ತು ಹೋಗಿತ್ತು. ನಡೆಯಲಾಗದೇ ನೀನು ಕುಂಟುತ್ತಿದ್ದೆ. ಕೂಡಲೇ ನಾನು ನಿನ್ನ ಚಪ್ಪಲಿ ಕೊಂಡು ಹೋಗಿ ಸ್ಟಿಚ್ ಮಾಡಿಸಿ ತಂದಿದ್ದು ನೆನಪಿದೆಯಾ? ಇತ್ತೀಚಿಗೆ ನನ್ನ ಸ್ನೇಹಿತೆಯರಲ್ಲೊಬ್ಬಳ ಚಪ್ಪಲಿ ಕಿತ್ತು ಹೋದಾಗ ಆಕೆ ನಾನು ನಿನ್ನ ಚಪ್ಪಲಿ ಹೊಲಿಸಿದ ವಿಚಾರ ನೆನಪಿಸಿ ನನ್ನ ಕಣ್ಣೀರ ಕಟ್ಟೆ ಒಡೆದಿದ್ದಳು. ಅವತ್ತು ಅಳಬೇಕು ಎಂದೆನಿಸಿದರೂ ಕಣ್ಣಲ್ಲಿ ಅಳುವುದಕ್ಕೆ ನೀರಿರಲಿಲ್ಲ.

ನಾವಿಬ್ಬರೂ ಬಸ್ಸ್ಟಾಂಡ್ನತ್ತ ಜೊತೆಗೇ ನಡೆದುಕೊಂಡು ಹೋಗುತ್ತಿದ್ದಾಗ ನಾನೊಂದು ಹಜ್ಜೆ ಮುಂದಿಟ್ಟರೆ ನನ್ನನ್ನು ಬಿಟ್ಟು ಹೋದಿ ಅಂತಾ ಸಣ್ಣ ಮಕ್ಕಳ ಹಾಗೆ ಅಲ್ಲೇ ನಿಂತು ಅಳುತ್ತಿದ್ದ ನೀನು ಇಂದು ನಾನಿಲ್ಲದೇ ಹೇಗೆ ಮುಂದೆ ಹೆಜ್ಜೆ ಇಡುತ್ತೀಯೋ... ನಾನು ನಿನ್ನ ಜೊತೆಗಿಲ್ಲದಿದ್ದರೂ ನನ್ನ ಮನಸ್ಸಿನ ಕಾಳಜಿ ಸದಾ ನಿನ್ನ ಜೊತೆ ಇರುತ್ತದೆ ಕಣೇ...

ಅಲ್ವೇ, ನಾನು ಮಾಡಿದ ತಪ್ಪಾದರೂ ಏನು? ನನಗಿಂದಿಗೂ ನಿಲುಕದ ಯಕ್ಷಪ್ರಶ್ನೆ ಅದು. ನಿನ್ನಲ್ಲಿ ಕೇಳುವ ಧೈರ್ಯ ಮಾತ್ರ ನನಗಿಲ್ಲ. ಕೇಳಿದರೂ ನೀನು ಉತ್ತರಿಸುತ್ತೀ ಎಂದು ನಾನು ಆಶಾಭಾವನೆಯೂ ಸತ್ತು ಹೋಗಿದೆ. ಆದರೆ ಏಕೋ ಮತ್ತೆ ಕೇಳಬೇಕೆನ್ನಿಸಿತು. ಈಗ ಕೇಳುತ್ತಿದ್ದೇನೆ. ನಿನ್ನಿಂದ ಉತ್ತರ ಸಿಗಬಹುದೆಂಬ ನಿರೀಕ್ಷೆಯಿಂದ. ಪ್ಲೀಸ್ ಹೇಳಿ ಹೋಗು ಕಾರಣ. ಅದರಿಂದ ನನಗೆ ಸ್ವಲ್ಪವಾದ್ರೂ ನೆಮ್ಮದಿ ಸಿಗಲಿ.

ನಿನಗೊಂದು ಮಾತು ಹೇಳಬೇಕು ಎಂದೆನಿಸುತ್ತದೆ. ಬಹುಶಃ ನಿನಗೆ ನನಗಿಂತ ರಿಚ್ ಲೈಫ್ ಪಾರ್ಟ್ ನರ್ ಸಿಗಬಹುದು. ಆದರೆ ನನ್ನಂತೆ ನೀನು ಎಂದು ಭಾವಿಸುವವನು, ನಿನ್ನನ್ನು ನನ್ನಷ್ಟು ಪ್ರೀತಿಸುವವನು ಸಿಗುವುದು ಕಷ್ಟ ಕಣೇ. ನೀನು ಇಂದು ಬಂದರೂ ನಿನ್ನನ್ನು ಅವತ್ತಿನಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇನೆ. ಅಂದಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಬಿಗಿದಪ್ಪಿ ಮುದ್ದಾಡುತ್ತೇನೆ. ಬರುತ್ತಿಯಾ? ನಿನ್ನ ಆಗಮನದ ನಿರೀಕ್ಷೆಯಲ್ಲಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದೇನೆ. ನೀನು ಎಲ್ಲೇ ಇದ್ದರೂ ನನ್ನೆದೆಯಲ್ಲಿ ಹಸಿರಾಗಿರುತ್ತಿ. ನೀನು ಸಿಗದಿದ್ದರೂ ಕೊನೆಯವರೆಗೂ ನಿನ್ನ ನೆನಪಲ್ಲೇ ಕಾಲ ಕಳೀಬೇಕು ಎಂದು ತೀರ್ಮಾನಿಸಿದ್ದೇನೆ. ಇನ್ನೂ ಬರೆಯಬೇಕು ಎಂದೆನಿಸುತ್ತಿದ್ದರೂ ಬರೆಯಲಾಗುತ್ತಿಲ್ಲ. ಅತ್ತೂ ಅತ್ತು ಕಣ್ಣುಗಳು ಮಂಜಾಗಿ ಬಿಟ್ಟಿವೆ. ಅಕ್ಷರಗಳೇ ಕಾಣುತ್ತಿಲ್ಲ. ಒಂದು ಸಾರಿ ನಿನ್ನನ್ನು ನನ್ ಪುಟ್ಟಾ ನನ್ನ ಚಿನ್ನ ಅಂತ ಕರೀಲಾ?

ಬರ್ಲಾ...

ಇಂದಿಗೂ, ಎಂದೆಂದೂ ನಿನ್ನನ್ನೇ ಪ್ರೀತಿಸುವ ನಿನ್ನ ಚಿನ್ನ, ಪುಟ್ಟ



Monday, October 31, 2011

ನನ್ನವಳ ಸಿಹಿ ಮುತ್ತು...


ಇತ್ತೀಚಿಗೆ ನನ್ನವಳನ್ನು ಭೇಟಿಯಾದಾಗ ನಿನ್ನ ನೆನಪಿಗಾಗಿ ಏನಾದರೂ ಕೊಡು ಎಂದು ಕೇಳಿದಾಗ ಆಕೆ ಕೊಟ್ಟ ಮರೆಯಲಾಗದ ನೆನಪಿನ ಕಾಣಿಕೆ ಇದು. ಅದನ್ನು ನೋಡುತ್ತಲೇ ಇರಬೇಕು ಎಂದೆನಿಸುತ್ತದೆ. ಪ್ರತೀ ದಿನ ನನ್ನೆದೆಯ ಮೇಲೆ ಆ ಸಿಹಿ ಮುತ್ತುಗಳನ್ನಿಟ್ಟು ಅಪ್ಪಿಕೊಳ್ಳುತ್ತೇನೆ. ಅದು ಕೊಡುವ ಸುಖವೇ ಬೇರೆ. ಅವಳ ತುಟಿ ಮುದ್ರೆಯ ಮುಂದೆ ನನ್ನ ಬರಹಗಳೇನಿದ್ದರೂ ಜುಜುಬಿಯೇ. ಭಾವನೆಗಳು ತೀವ್ರವಾದಾಗ ಅದನ್ನು ಪದಗಳಲ್ಲಿ ಹಂಚಿಕೊಳ್ಳುವುದು ಬಲು ಕಷ್ಟವಂತೆ. ಭಾವನೆಯ ಲೋಕದೊಳು ಹೋಗುತ್ತಿದ್ದೇನೆ. ಬರಲಾ... ಆ ಸಿಹಿಮುತ್ತನ್ನು ಅನುಭವಿಸುತ್ತಲೇ ಇರುತ್ತೇನೆ. ಕೊನೆ ಉಸಿರಿರುವವರೆಗೂ...

Friday, December 3, 2010

ಎಷ್ಟು ದಿನ ಕಾಯ್ಬೇಕು ಪುಟ್ಟಾ?


ಹಾಯ್ ಸ್ವೀಟ್ ಹಾರ್ಟ್,
ಹೀಗೆ ಕರೆದ್ರೆ ನಿಂಗೆ ಕೋಪ ಬರುತ್ತೆ ಅನ್ನೋದು ನಂಗೆ ಗೊತ್ತು. ಅದೇ ಕೋಪದಲ್ಲಿ ಕಣ್ಣು ದೊಡ್ಡದು ಮಾಡಿ ನನ್ನತ್ತ ತಿರುಗಿ ನೋಡಿ ಮನಸ್ಸಲ್ಲೆ ನಗುತ್ತಿ ಅಲ್ವಾ ಅವಾಗ ನೀನು ಚಂದ ಕಾಣ್ತಿ ಕಣೆ. ಅದಕ್ಕೆ ಕರೆದೆ ಸ್ವೀಟ್ ಹಾಹಾರ್ಟ್ ಅಂತ. ಪುಟ್ಟ ಮತ್ತೆ ಹೇಗಿದ್ದಿಯಾ? ಮೊನ್ನೆ ನಿನ್ ಮನೆಗೆ ನನ್ನ ಕರೆದಿದ್ದೆ ಅಲ್ವಾ? ಅದೇ ಫಂಕ್ಷನ್ ಗೆ. ಖುಷಿಯಿಂದ ಬಂದಿದ್ದೆ ಕಣೆ ನಿನ್ನ ನೋಡಲು. ಜೊತೆಗೆ ಪುಟ್ಟ ಕಾಣಿಕೆಯನ್ನೂ ತಂದಿದ್ದೆ. ಸಿಂಗಲ್ ಆಗಿ ಬೈಕ್ ರೈಡ್ ಮಾಡಿಕೊಂಡು ಅಷ್ಟು ದೂರ ಬರುವಾಗ ಸುಸ್ತಾಗಿ ಹೋಗಿತ್ತು. ಆದರೂ ನಿನ್ನ ನೋಡುವ ತವಕಕ್ಕೆ ಮನಸ್ಸು ತುದಿಗಾಲಲ್ಲಿ ನಿಂತಿತ್ತು. ಆದರೂ ನೀನು, ನಿನ್ನ ಮನೆ ಸದಸ್ಯರು ಎಲ್ಲ ನನ್ಜೊತೆ ಮಾತಾಡ್ತಾರಾ ಅಂತ ಅಂಜಿಕೆಯೂ ಇತ್ತು.
ಮನೆಗೆ ಬಂದು ನಿನ್ನ ಅಣ್ಣನ್ ಕೈಯ್ಯಲ್ಲಿ ಗಿಫ್ಟ್ ಕೊಟ್ಟು ಸೋಫಾದಲ್ಲಿ ಕುಳಿತುಕೊಂಡೆ ನೋಡು. ಆವಾಗ್ಲೆ ಹುಡುಕುತ್ತಿತ್ತು ನನ್ನ ಕಣ್ಣುಗಳು ನಿನ್ನನ್ನು. ನಿನ್ನ ಅಣ್ಣ, ಮಾವ ಎಲ್ಲರೂ ನನ್ ಜೊತೆ ಮಾತಾಡುತ್ತದ್ದರೆ ಪರ್ಡಾ ಹಾಕಿದ ಬಾಗಿಲನ್ನೂ ದಾಟಿ ನನ್ನ ಕಣ್ಣುಗಳು ನಿನ್ನನ್ನು ಅರಸುತ್ತಿದ್ದವು. ಆಗ್ಲೆ ಬಂದೆ ನೋಡು ನೀನಲ್ಲಿ. ನಿನ್ನ ಆ ಖುಷಿಯ ತುಂಟ ನಗೆ ನೋಡಿ ಅದೆಷ್ಟು ಖುಷಿಯಾಯ್ತು ಗೊತ್ತಾ? ಅವತ್ತು ನಿನ್ನ ಜೋರಾಗಿ ಅಪ್ಪಿಕೊಂಡಾಗ ಆದಷ್ಟು ಖುಷಿಯಾಗಿತ್ತು ನೋಡು. ನಿನ್ನನ್ನು ಹಾಗೇ ನೋಡ್ತಾ ಇರಬೇಕು ಎಂದೆನಿಸಿತ್ತು. ಆದರೂ ಮನದಲ್ಲೇಕೋ ಒಂದು ತಳಮಳ ನೀನು ನನ್ನ ಬಾಳ ಸಂಗಾತಿ ಆಗ್ತಿಯಾ ಇಲ್ವಾ ಅಂತ.
ನೀನು ಇದು ನನ್ ಅಮ್ಮ, ಅತ್ತೆ, ಅಜ್ಜಿ ಎಂದು ಎಲ್ಲರನ್ನೂ ಪರಿಚಯಿಸಿದಾಗ ನಿಜ್ವಾಗ್ಲೂ ಖುಷಿಯಾಗಿತ್ತು. ನಿನ್ ತಂಗಿ ಬಂದು ಹಾಯ್ ಹೇಳಿದಾಗ ನಾದಿನಿ ಬಲು ಚೂಟಿ ಅಂದ್ಕೊಂಡೆ. ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಟ್ಟು ಮನೆ ಕಡೆ ಪ್ರಯಾಣ ಬೆಳೆಸಿದಾಗ ಮನಸ್ಸು ಭಾರವಾಗಿತ್ತು. ಹಾಗೆ ಬರುತ್ತಿರುವಾಗ ನನ್ ಮೊಬೈಲ್ ರಿಂಗೆಣಿಸಿದ್ದು ಕೇಳಿತು. ನೋಡಿದರೆ ನಿನ್ ತಂಗಿ ನಂಬರ್. ಹೇ... ನಿಂಗೊಂದು ಹುಡುಗಿ ನೋಡಿದ್ದಾರೆ ಕಣೋ ನಮ್ ಅತ್ತೆಯರು ಎಂದು ಮಾತು ಶುರು ಮಾಡಿದ್ದಳು. ಹೌದಾ ಯಾರು ಆ ಹುಡುಗಿ ಎಂದೆ. ಅದೇ ನನ್ ದೀದಿ ಎಂದಾಗ, ನನ್ನ ತುಟಿಯಂಚಿನಲ್ಲಿ ನಗುವಿತ್ತು. ಅದೆಷ್ಟು ಖುಷಿಪಟ್ಟೆ ಎಂದರೆ ಬೈಕ್ ನಿಲ್ಲಿಸಿ ಅಲ್ಲೇ ಕುಣಿಯಬೇಕು ಎನಿಸಿತು. ಆದರೂ ಹೌದಾ ಎಂದು ಮಾತ್ರ ಅವಳಲ್ಲಿ ಹೇಳಿ ಫೋನಿಟ್ಟೆ.
ಪುಟ್ಟಾ ಅವಳು ನಿಜಕ್ಕೂ ಹೇಳಿದ್ದಾ ಅಥವಾ ನಿನ್ ಅತ್ತೆಯರು ತಮಾಷೆ ಮಾಡಿದ್ದ ಅದೆಲ್ಲಾ ನನಗೆ ಗೊತ್ತಿಲ್ಲ. ಆದರೆ ಅದು ನಿಜವಾಗ್ಲಿ ಅಂತ ಮಾತ್ರ ಆಶಿಸ್ತೇನೆ. ನಿನ್ ಜೊತೆ ನನ್ ಇಡೀ ಜೀವನ ಕಳೆಯುವುದಕ್ಕಿಂತ ದೊಡ್ಡ ಖುಷಿ ನನಗೆ ಬೇರೆ ಯಾವುದೂ ಇಲ್ಲ. ನಿನ್ ತೊಡೆ ಮೇಲೆ ತಲೆಯಿಟ್ಟು ಮಲಗಬೇಕು. ನಿನ್ ತುಟಿಗೆ ತುಟಿಯಿಟ್ಟು ಈ ಜಗವನ್ನೇ ಮರಿಬೇಕು ಕಣೇ. ಪ್ರತೀ ದಿನ ನಾವಿಬ್ಬರೂ ಲೈವ್ ಎಟ್ ಫಸ್ಟ್ ಸೈಟ್ ಆದವರಂತಿರಬೇಕು ಕಣೇ. ಪ್ಲೀಸ್ ಬಾ ನನ್ನ ಜೀವನ ಸಂಗಾತಿಯಾಗಿ. ನಿನಗಾಗಿ ಕಾಯುತ್ತಿರುತ್ತೇನೆ. ಆ ದಿನ ಬೇಗ ಬರಲಿ. ಬರ್ತಿ ಅಲ್ವಾ ಪುಟ್ಟಾ? ಬರ್ಲಾ...
ಇತೀ ನಿನ್ನ ಪ್ರೀತಿಯ,
ಹುಚ್ಚು ಹುಡುಗ

Saturday, May 8, 2010

ನೀ ಬರುವ ದಾರಿಯಲಿ....

ಪ್ರೀತಿ ಏಕೆ ಭೂಮಿ ಮೇಲಿದೆ? ಇದು ನನ್ನವಳು ನನ್ನನ್ನು ಮೊದಲ ಬಾರಿ ಭೇಟಿಯಾದಾಗ ಕೇಳಿದ ಪ್ರಶ್ನೆ. ಬಹುಷಃ ನಾನವಳನ್ನು ಪ್ರೀತಿಸುವುದಕ್ಕಾಗಿಯೇ ಪ್ರೀತಿ ಈ ಭೂಮಿ ಮೇಲಿರಬಹುದು.
ಮಲೆನಾಡು ಕಾಫಿಗೆ ಹೆಸರುವಾಸಿ. ಜೊತೆಗೆ ಮಲೆನಾಡ ಚಳಿ ಎಂದರೆ ಬೆಚ್ಚಗಿನ ಭಾವ ಮನದಲ್ಲಿ ಮೂಡುತ್ತದೆ. ಚಳಿ ಜೊತೆಗೆ ಬೆಚ್ಚಗಿನ ಕಾಫಿ ಹೀರೋದೆಂದರೆ ನನಗೆ ಪಂಚಪ್ರಾಣ. ನನ್ನವಳೂ ಮಲೆನಾಡಿವಳು. ಮಲೆನಾಡಿನ ಮಳೆ ಬೀಡಿನ ಆಕೆ ನನ್ನ ಮನದಲ್ಲಿ ಮನೆ ಮಾಡಿ ನಾಲ್ಕು ವರ್ಷಗಳೇ ಕಳೆದಿದೆ. ನನ್ನ ಈ ಬ್ಯೂಸಿ ಲೈಫ್ನಲ್ಲಿ ಆಕೆ ಜೊತೆಗೆ ಗಂಟೆಗಟ್ಟಲೇ ಫೋನ್ನಲ್ಲೆ ಪ್ರೇಮ ನಿವೇದನೆ ಮಾಡುತ್ತೇನಾದರೂ ಆಕೆಯೊಂದಿಗೆ ಬೆರೆಯುವ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಖುಲ್ಲಾಂ ಖುಲ್ಲಾಂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿರುವ ನಮ್ಮಂತಹಾ ಪ್ರೇಮಿಗಳ ಪರಿಸ್ಥಿತಿಯೂ ಇದೆ.
ಅಂದು ನನಗೆ ರಜಾ ದಿನ. ವೀಕೆಂಡ್ ಬೇರೆ. ನಾಳೆ ನಮ್ಮಿಬ್ಬರ ಭೇಟಿ ಎಂದು ಮೇಘ ಸಂದೇಶವೂ ನನ್ನ 'ನಿಶಾ'ಚರಿಯಿಂದ ಬಂದಿತ್ತು. ಮುಂಚಿನ ದಿನ ಆಫೀಸಿಂದ ಬಂದವನೇ ನಾಳೆಗಾಗಿ ತಯಾರಾಗತೊಡಗಿದೆ. ಬೆಳಿಗ್ಗೆ 8 ಗಂಟೆಯಾದರೂ ಬೆಡ್ನಿಂದ ಏಳದ ನಾನು ಅಂದು ಮಾತ್ರ 4 ಗಂಟೆಗೆ ಎದ್ದು ಕುಳಿತಿದ್ದೆ. ನನ್ನ ಮನದೊಡತಿಯನ್ನು ಭೇಟಿಯಾಗುವ ತವಕದಿಂದ ಮುಂಜಾವಿನಲ್ಲೇ ನನ್ನ ಪ್ರೀತಿಯ ಬೈಕ್ ಏರಿ ಪ್ರೇಮಯಾನದ ಮೊದಲ ಹೆಜ್ಜೆ ಇಟ್ಟೆ. ಚಾರ್ಮಾಡಿ ಘಾಟ್ ನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಾ ಮೊದಲ ಬಾರಿಗೆ ಸೂರ್ಯೋಡ್ಯ ಕಂಡೆ! ನಾನು ಮಲೆನಾಡ ಗಡಿ ತಲುಪಿದಾಗ ಮಂಜು ಈಗಷ್ಟೆ ತಿಳಿಯಾಗುತ್ತಿತ್ತು.
ರತ್ನಗಿರಿ ಬೋರೆಗೆ ಹೋಗಿ ನನ್ನವಳವಳ ಗುಂಗಿನಲ್ಲೆ ಸಮಯ ಕಳೆಯತೊಡಗಿದೆ. ಜೀವನದಲ್ಲಿ ಯಾವ ಕ್ಷಣ ಗಳಿಗೆಗೆ ಬೇಕಾದ್ರೂ ಕಾಯಬಹುದು. ಆದರೆ ಪ್ರೀಯತಮೆಗಾಗಿ ಒಂದು ನಿಮಿಷ ಕಾಯುವುದು ಎಂದರೆ ಅಬ್ಬಬ್ಬಾ ಬಹಳ ಕಷ್ಟ. ಒಂದು ನಿಮಿಷವೂ ಒಂದು ದಿನದ ರೀತಿ ಆಗುವಾಗ ಅದು ಸಹಜ.
ನೀರಿನಲ್ಲಿ ಮೀನು ಮೇಲೆ ಬರುವುದನ್ನೇ ಕಾದು ಕುಳಿತ ಪಕ್ಷಿಯಂತಾಗಿತ್ತು ನನ್ನ ಸ್ಥಿತಿ. ಅತ್ತಿತ್ತ ಕಣ್ಣಾಡಿಸುತ್ತಾ ಅವಳನ್ನು ಹುಡುಕತೊಡಗಿದೆ. ಅಂತೂ ಬಂದೇ ಬಿಟ್ಟಳು ನನ್ನವಳು. ಅವಳಿಗಾಗಿ ಕಾದಿದ್ದ ಆಯಾಸವೆಲ್ಲಾ ಅವಳ ಮೊಗದಲ್ಲಿ ಮೂಡಿದ ಸಂತಸದ ನಗುವಿನಿಂದ ಮಾಯವಾಗಿ ಹೋಯ್ತು. ಆಕೆ ತೊಟ್ಟಿದ್ದ ಗುಲಾಬಿ ಬಣ್ಣದ ಉಡುಪು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿತು. ತಭ್ಬಿಕೊಳ್ಳೋ ಮನಸಾಯಿತು. ಆದರೆ ಇದು ಪಾರ್ಕ್ ಎಂದು ಮನದಲ್ಲಿ ಎಚ್ಚರಿಕೆ ಮೂಡಿದ್ದರಿಂದ ಸುಮ್ಮನಾದೆ. ಆಕೆಯ ಕೈ ಹಿಡಿದು ಸಪ್ತಪದಿ ತುಳಿದಂತೆ ಆ ಉದ್ಯಾನವನದೊಳಗೆ ಸುತ್ತಾಡಿದೆ. ಅವಳು ಗಟ್ಟಿಯಾಗಿ ಕೈ ಹಿಡಿದಿದ್ದು ಜೀವನಪೂರ್ತಿ ನಿಂಜೊತೆಗೇನೇ ಹೀಗೇ ಹೆಜ್ಜೆ ಹಾಕುತ್ತೇನೆ ಎಂಬಂತಿತ್ತು.
ಅಲ್ಲೇ ಸುತ್ತಾಡುತ್ತಾ ಮನಸಿನ ಪಿಸು ಮಾತುಗಳನ್ನು ಹಂಚಿಕೊಳ್ಳುತ್ತಿದ್ದ ನಮಗೆ ಸಮಯದ ಪರಿವೇ ಇರಲಿಲ್ಲ. ಆಕೆ ನನ್ನಲ್ಲೊಂದು ಮಾತು ಕೇಳಿದಳು. ನನಗೆ ನಿನ್ನ ಜೊತೆ ಬೈಕ್ ನಲ್ಲಿ ತಬ್ಬಿಕೊಂಡು ಒಂದು ರೈಡ್ ಹೋಗಬೇಕು ಎಂದು ಆಕೆ ಹೇಳಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಆಕೆ ನನ್ನಲ್ಲಿ ಕೇಳಿದ್ದೇ ಪ್ರಥಮ ಬಾರಿಯಾದ್ದರಿಂದ ಇಲ್ಲವೆನ್ನಲು ಮನಸೊಪ್ಪಲಿಲ್ಲ. ಆ ಚಳಿಯ ವಾತಾವರಣದಲ್ಲಿ ಆಕೆಯ ಬೆಚ್ಚಗಿನ ಅಪ್ಪುಗೆಯ್ ಜೊತೆ ರೌಂಡ್ ಹೊರಟ ನನಗೆ ಭೂಮಿಯಲ್ಲಿದ್ದೇನೆ ಎಂದೆನಿಸಲೇ ಇಲ್ಲ. ಬಾಬಾ ಬುಡಾನ್ ಗಿರಿ ತಿರುವಿನಲ್ಲಿ ಆಕೆಯ ಅಪ್ಪುಗೆಯ ಸವಿಯೊಂದಿಗೆ ರೈಡ್ ಮಾಡಿದ್ದು ನಾನೆಂದೂ ಮರೆಯಲು ಸಾಧ್ಯವಿಲ್ಲ.
ಸಮಯ ನಮ್ಮನ್ನು ಬಿಟ್ಟು ದೂರ ಹೋಗಿತ್ತು. ಸೂರ್ಯ ಆಗ ನೆತ್ತಿಯ ಮೇಲಿದ್ದ. ನಮ್ಮಿಬ್ಬರ ವಿರಹದ ವಿದಾಯದ ಸಮಯ ಬಂದಿತ್ತು. ಯಾಕೋ ಮನಸ್ಸು ಭಾರವಾಯಿತು. ಇನ್ನೂ ಸ್ವಲ್ಪ ಹೊತ್ತು ಇರೋಣವೆಂದರೆ ಕಷ್ಟ. ಆಕೆಯನ್ನು ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟು ನನ್ನೂರ ದಾರಿ ಹಿಡಿಯುವುದು ಅನಿವಾರ್ಯವಾಯ್ತು. ಆಕೆಯಿಂದ ಬೀಳ್ಕೊಟ್ಟು ಮುಂದಿನ ಭೇಟಿಗಾಗಿ ಕಾಯುತ್ತಿದ್ದೇನೆ. ಮನೆಗೆ ಬಂದಾಗ ನನ್ನ ಭೇಟಿಯ ವಿಚಾರ ಅಮ್ಮನಿಗೆ ನನ್ನ ಆಪ್ತಮಿತ್ರನಿಂದ ತಿಳಿದಿತ್ತು. ಮನಸ್ಸಿಗೇಕೋ ದುಗುಡವೆನಿಸಿತು. ಆದರೆ ಈ ಬಾರಿ ಮಾತ್ರ ನಾನು ಗೆದ್ದಿದ್ದೆ. ನನ್ನ ಅಮ್ಮ ಗ್ರೀನ್ ಸಿಗ್ನಲ್ ನೀಡಿದ್ದರು. ನನ್ನ ಸೊಸೆಯನ್ನು ಕ್ರ್ಕೊಂಡು ಬಾರೋ ನನಗೆ ಮಾತಾಡ್ಬೇಕು ಎಂದಾಗ ಇದು ನಿಜಾನ ಎಂದು ಒಮ್ಮೆ ಕೈಯನ್ನು ಚಿವುಟಿ ನೋಡಿದೆ! ಈಗ ಏನಿದ್ದರೂ ನನ್ನವಳು ಮನೆಗೆ ಬರುವುದು ಮಾತ್ರ ಬಾಕಿ. ಆಕೆಗಾಗಿ ಜೀವನ ಪೂರ್ತಿ ಬೇಕಾದರೂ ಕಾಯುತ್ತಾ ಒಂಟಿ ಕಾಲಿನಲ್ಲಿ ನಿಂತು ಕಾಯಲು ನಾನು ಸಿದ್ಧ. ಆಕೆ ಬರುವ ಹಾದಿ ತುಂಬಾ ಹೂದಳ ಹರಿಸಿ ಕಾಯುತ್ತಿದ್ದೇನೆ...

Saturday, January 16, 2010

I Love You ಅಂತ ಹೇಳೋ....


ಹಾಯ್ ಚಿನ್ನಾ....
ನನ್ ಮೇಲೆ ಕೋಪಾನ? ನನ್ನ ನಂಗೇ ಅರ್ಥ ಮಾಡ್ಕೋಳ್ಳೋಕೆ ಆಗಿಲ್ಲ. ಇನ್ನು ನೀನು ಹೇಗೆ ಅರ್ಥ ಮಾಡ್ಕೋತಿಯ? ನನ್ನ ವರ್ತನೆ ನಂಗೇ ಇಷ್ಟ ಆಗ್ಲಿಲ್ಲ ಕಣೋ... ಆದ್ರೆ ಏನ್ ಮಾಡ್ಲೋ ಸಂದರ್ಭಕ್ಕೆ ತಕ್ಕಂತೆ ವರ್ತಿಸೋಕೆ ನಂಗೆ ಬರಲ್ಲ. Please ಚಿನ್ನ, ನನ್ ಮೇಲೆ ಕೋಪ ಮಾಡ್ಕೋಬೇಡ. I really love you darling...
ನೀನು ನನ್ನ ಎಷ್ಟು ಬೇಕಾದ್ರೂ ತಮಾಷೆ ಮಾಡು. ಆದ್ರೆ ಬೇರೆಯವರ ಮುಂದೆ ಮಾತ್ರ ತಮಾಷೆ ಮಾಡ್ಬೇಡ Please. ನಿಂಗೆ ತುಂಬಾ ಬೇಜಾರಾಗಿದೆ ಅಂತ ನಂಗೊತ್ತು. ಆದ್ರೆ ನಾನು ಒಂದು ಮಾತು ಹೇಳ್ಳಾ? ನಂಗೆ ಯಾರಿಗೂ ಹೊರೆಯಾಗೋಕೆ / ಕಷ್ಟ ಕೊಡೋಕೆ ಇಷ್ಟ ಇಲ್ಲ. ನನ್ ಜೊತೆ ಬಾಳೋದು ತುಂಬಾ ಕಷ್ಟ ಇದೆ ಅಂದೆಯಲ್ಲಾ? ಅದು ನೀನು ತಮಾಷೆಗೆ ಅಂದಿರಬಹುದು. ಆದರೆ ಆ ಮಾತು ನಿಜವಾಗ್ಲೂ ನಂಗೆ ತುಂಬಾನೇ hurt ಮಾಡಿದೆ. ಅದಕ್ಕೆ ನಾನು ನಿಂಗೆ ಹೇಳದೇ ಕೋಪಿಸಿಕೊಂಡು ಬಂದಿದ್ದು. Sorry......
ಕೋಪ ಮಾಡ್ಕೊಂಡು ಬಂದಿದ್ದೇನೋ ನಿಜ. ಆದ್ರೆ ಬರಬೇಕಾದ್ರೆ ನನ್ ಮನಸ್ಸು, ನೀನು ನಂಜೊತೆ ಬಂದ್ರೆ ಸಾಕು ಅಂತ ಹೇಳುತ್ತಿತ್ತು. ನನ್ನ ಹಿಂದೆ ನೀನಿರೋದನ್ನು ನೋಡಿ ಎಷ್ಟು ಖುಷಿಯಾಯ್ತು ಗೊತ್ತ? ಓಡ್ ಬಂದು ನಿನ್ನ ತಬ್ಕೋಬೇಕು ಅಂತ ಅನಿಸ್ತು. ಆದ್ರೂ ನಾನು ನಿನ್ನ ಜೊತೆ ಮಾತಾಡಲ್ಲ ಅಂದೆ. ನಿಜ ಹೇಳ್ಳ? ನಂಗೆ ನಿನ್ನ ನೋಯಿಸ್ಬೇಕು ಅನ್ನೋ ಉದ್ದೇಶ ಇಲ್ಲ ಕಣೋ... ಆದ್ರೆ ಏನ್ ಮಾಡ್ಲಿ? ನಿನ್ನ ವರ್ತನೆ, ಮಾತು, ನಂಗೇ ಒಂದೊಂದು ಸಾರಿ ಕೋಪ ತರಿಸುತ್ತೆ.
Sorry...... Sorry...... Sorry...... ಇನ್ನು ಮುಂದೆ ನನ್ನ ನಾನೇ ತಿದ್ದಿಕೊಳ್ಳೋಕೆ try ಮಾಡ್ತೇನೆ. ಒಂದು ಮಾತು ಹೇಳ್ಳ? ನಿನಗೆ ನನ್ನ ಮೇಲೆ ಕೋಪ ಬಂದ್ರೆ Please ಬೈದುಬಿಡು. ಆಗ ನನ್ನ ತಪ್ಪೇನು ಎಂದು ನನಗೆ ಅರ್ಥ ಆಗುತ್ತೆ. ಅದು ಬಿಟ್ಟು ನಾನು ಏನ್ ಮಾಡಿದ್ರೂ ನೀನೇ ಸೋಲ್ತಿದ್ರೆ ಏನು ಚಂದ ಹೇಳು? ನನ್ನೂ ಸೋಲೋಕೆ ಬಿಡು. ಆಗ ಸೋಲು ಎಂದರೇನು ಎಂದು ನನಗೂ ಅರ್ಥ ಆಗುತ್ತೆ.
ನಂಗೊತ್ತು ಕಣೋ ನನ್ನಿಂದ ನೀನು ತುಂಬಾನೇ ಕಷ್ಟ ಅನುಭವಿಸುತ್ತಿದ್ದಿಯ ಅಂತ. ಈಗ ಹೇಳ್ತಿದ್ದೀನಿ ಕೇಳು ನೀನು ನಿಂಗೆ ಹೇಗ್ ಬೇಕೋ ಹಾಗಿರು. ನಾನು ನಿನ್ನವಳಾಗುವ ಮುಂಚೆ ಯಾವ ತರ ಸ್ನೇಹಿತರ ಜೊತೆ ಬೆರೆಯುತ್ತಿದ್ದಿಯೋ ಹಾಗೇ ಬೆರೆಯುತ್ತಿರು. ನಾನ್ಯಾವತ್ತೂ ನನ್ ಜೊತೆ ಮಾತ್ನಾಡಿಲ್ಲ ಅಂತಾಗಲಿ, ನನ್ನ neglect ಮಾಡ್ತಿದ್ದಿಯಾ ಅಂತಾಗ್ಲಿ ನಿನ್ ಜೊತೆ ಕೋಪ ಮಾಡ್ಕೊಳೋಲ್ಲ. ಸರೀನಾ?
ನಿಂಗೇನು ಇಷ್ಟಾಂತ ನೀನು ಯಾವತ್ತೂ ನನ್ನಲ್ಲಿ ಕೇಳುತ್ತಿರುತ್ತೀ ಅಲ್ವಾ? ಈಗ ಹೇಳುತ್ತಿದ್ದೇನೆ ಕೇಳು. ಯಾವಾಗ್ಲೂ ನಾವಿಬ್ಬರೂ I Love You ಹೇಳ್ತಾನೇ ಇರ್ಬೇಕು. ನಾನು ಬೆಳಿಗ್ಗೆ ಎದ್ದ ಕೂಡ್ಲೇ ನಿನ್ನ ಮುಖ ನೋಡಿ ನಿಂಗೊತ್ತು ಸಿಹಿ ಮುತ್ತು ಕೊಡ್ಬೇಕು. ನಿನ್ನ ಎಬ್ಬಿಸಿ ಬ್ರೆಶ್ ಮಾಡೋಕೆ ಕಳಿಸ್ಬೇಕು. ನಾನೇ ನಿನ್ನ ಮುಖ ತೊಳಿಬೇಕು. ನಿನ್ನಿಷ್ಟದ ಬ್ರೇಕ್ಫಾಸ್ಟ್ ಮಾಡಿ ನನ್ನ ಕೈಯ್ಯಾರೆ ನಿನಗೆ ತಿನ್ನಿಸಬೇಕು. ನಿನ್ನ ಕೈಯಿಂದ ನಾನು ತಿನ್ಬೇಕು. ನಾವಿಬ್ರೂ ಒಟ್ಟಿಗೆ ಆಫೀಸ್ ಗೆ ಹೋಗ್ಬೇಕು. ಪ್ರತಿ ದಿನ, ಪ್ರತಿ ಕ್ಷಣ ಒಳ್ಳೆ ಸ್ನೇಹಿತರಂತೆ, ಹೊಸ ಪ್ರೇಮಿಗಳಂತೆ ಇರಬೇಕು. ಕೆಲಸ ಮುಗಿಸಿ ಜೊತೆಯಾಗಿಯೇ ಮನೆಗೆ ಬರಬೇಕು. ಯಾವತ್ತೂ ನಾನು ನಿನಗಿಷ್ಟವಾದ ಅಡುಗೆಯನ್ನೇ ಮಾಡೋದು. ನಾನು ಯಾವತ್ತೂ ನಿನ್ನ ಬಾಹುಗಳಲ್ಲಿ ಬಂಧಿಯಾಗಿರಬೇಕು. ನಮ್ಮಿಬ್ಬರ ಮಧ್ಯೆ ಗಾಳಿ ಹೋಗೋಕೂ ಜಾಗ ಇರ್ಬಾರ್ದು.. ಆ ಥರ ನಿನ್ನ ತಬ್ಕೋಬೇಕು. ನಿನ್ನ ಎದೆ ಮೇಲೆ ನಾನು ಮಲಗ್ಬೇಕು ಕಣೋ. ನೀನು ಏನು ಬೇಕಾದ್ರೂ ಮಾಡು. ಆದ್ರೆ ನಿನ್ನ ಪ್ರೀತಿ ಮಾತ್ರ ಯಾವತ್ತೂ ಬದಲಾಗಬಾರದು. ನಿನ್ನ ಪ್ರೀತೀಲಿ ನಾನೆಲ್ಲಾ ನೋವುಗಳನ್ನೂ ಮರಿಬೇಕು ಕಣೋ.
ಅಯ್ಯೋ ಎಲ್ಲೆಲ್ಲಿಗೋ ಹೋದೆ ಅನ್ಸುತ್ತೆ. ಎಲ್ಲಾನೂ ಈಗ್ಲೇ ಹೇಳಿದ್ರೆ ನಿಂಗೆ ಮುಂದೆ ಬೋರಾಗುತ್ತೆ! ನಾನು ಮುಂದೆ ಏನು ಮಾಡ್ತೇನೆ ಅನ್ನೋದನ್ನು wait and see chinna.
ಪುನಃ ಹೇಳುತ್ತಿದ್ದೇನೆ. ನನ್ನಿಂದ ನಿನಗೆ ತುಂಬಾ ಬೇಜಾರಾಗಿದ್ರೆ Please ಬೈದುಬಿಡು. ಅದು ಬಿಟ್ಟು ನನ್ನನ್ನೇ support ಮಾಡ್ಬೇಡ. ನೀನಾಗಿ ಸೋಲ್ಬೇಡ. ನನ್ನೂ ಸೋಲೋಕೆ ಬಿಡು. ಇಲ್ಲೀವರೆಗೆ ನಾನು ಮಾಡಿದ ಬೇಸರಗಳನ್ನೆಲ್ಲಾ ಬದಿಗೊತ್ತಿ ನನ್ನನ್ನು ಮನಸಾರೆ ಕ್ಷಮಿಸಿ I Love You ಅಂತ ಹೇಳೋ....
Your sweet heart

Saturday, May 16, 2009

ಮಳೆ ನಿಂತು ಹೋದ ಮೇಲೆ...

ಯಾಕೋ ಗೊತ್ತಿಲ್ಲ ಇವತ್ತು ಆಫೀಸ್ ನಲ್ಲಿ ತುಂಬಾ ಬುಸಿ ಇದ್ದೆ. ಅದೇ ಹೊತ್ತಿಗ ನನ್ನ ಮೊಬೈಲ್ ನಲ್ಲಿ ನಿನ್ನ ಹೆಸರೊಮ್ಮೆ ಮಿಂಚಿ ಮರೆಯಾಯ್ತು. ಯಕೋ ನಾನು ಆ ದಿನಗಳಿಗೆ ಜಾರಿ ಬಿದ್ದೆ.
ಕಾಲೇಜಿನಲ್ಲಿ ನಿನ್ನನ್ನು ನೋಡಿದ ಮೊದಲ ದಿನಗಳು. ನಿನ್ನ ಕಣ್ಣಿನ ನೋಟಕ್ಕೆ ಮನಸೋತ ನಾನೇಕೊ ನಿನ್ನನು ತುಂಬ ಹಚ್ಚಿಕೊಂಡಿದ್ದೆ. ಆದರೆ ಅದು ಪ್ರೀತಿಯೆಂದು ತಿಳಿದಾಗ ಮಾತ್ರ ಬೇಸರಪಟ್ಟಿದ್ದೆ. ನೀನು ಕಾಲೇಜಿನಲ್ಲಿ ಎಲ್ಲರೆದುರಲ್ಲಿ ನನ್ನನ್ನು ಬೆಸ್ಟ್ ಫ್ರೆಂಡ್ ಎಂದಾಗ ಖುಷಿ ಪಟ್ಟಿದ್ದೆ. ಕಾಲೇಜು ದಿನಗಳಲ್ಲಿ ನಿನ್ನ ಗೆಳೆಯನಾಗಿದ್ದವನು ನಿನ್ನ ಜೀವನದ ಗೆಳೆಯನಾಗಬೇಕೂ ಎಂದು ಕನಸು ಕಂಡಿದ್ದೆ.ಒಳ್ಳೆಯ ಹುಡುಗನಾಗಿ ನಿನ್ನ ಮನಸ್ಸು ಗೆಲ್ಲಬೇಕು ಎಂದು ತಿರುಕನ ಕನಸು ಕಂಡಿದ್ದೆ. ನನ್ನ ಒಳ್ಳೆಯತನವನ್ನು ನೀನು ಮನ ಬಿಚ್ಚಿ ಮೆಚ್ಚಿದಾಗ ನಿನ್ನಲ್ಲಿ ನನ್ನ ಪ್ರೀತಿಯನ್ನು ಹೇಳ್ಕೊಳ್ಳಬೇಕು ಎಂದು ನಿನ್ನ ಬಳಿ ಬಂದೆ. ಆದರೆ ಹೇಳಲು ಮನಸ್ಸೊಪ್ಪಲಿಲ್ಲ. ನಿನ್ನ ಕಷ್ಟ ಸುಖಗಳಿಗೆ ನಾನು ಕಿವಿಯಾದೆ. ಸ್ನೇಹಿತನಾಗಿ ಎಲ್ಲವನ್ನೂ ಎದುರಿಸಲು ನಿನಗೆ ಸ್ಪೂರ್ತಿಯಾದೆ. ಆದರೂ ನಿನ್ನನ್ನು ಬಾಳ ಸಂಗಾತಿಯಾಗಬೇಕೆಂದು ಬಯಸಿದ್ದನ್ನು ಹೇಳದೇ ಸುಮ್ಮನಾದೆ. ಅವತ್ತೊಮ್ಮೆ ನಿನ್ನಲ್ಲಿ ನನ್ನ ಮನದ ಬಯಕೆಯನ್ನು ಹೇಳಲು ಬಂದಾಗ ನೀನೇಕೋ ಬಹಳ ಖುಷಿಯಲ್ಲಿ ನನ್ನನ್ನು ಹುಡುಕುತ್ತಿದ್ದನ್ನು ಕಂಡಿದ್ದೆ. ಮೊದಲು ನೀನು ಏನೋ ಹೇಳ್ಬೇಕೆಂದಿದ್ದನ್ನು ಹೇಳು ಎಂದು ಆಯ್ಕೆಯ ಸ್ವಾತಂತ್ರ ನಿನಗೇ ನೀಡಿದ್ದೆ. 'ನಾನೊಬ್ಬರನ್ನು ಪ್ರೀತಿಸ್ತಿದ್ದೇನೆ ಕಣೋ. ಅವ್ರು ಈಗ ಅಮೇರಿಕಾದಲ್ಲಿದ್ದಾರೆ. ಕೆಲ ಸಮಯ ಬಿಟ್ಟು ಮದುವೆ' ಎಂದಾಗ ನನ್ನ ಕಿವಿ ಕುರುಡಾಗಿ ಹೋಗಿತ್ತು! ನೀನು, ನಾನು ಹೇಳಬೇಕಾದ್ದನ್ನು ಹೇಳೆಂದಾಗ ಏನೋನೆ ತೊದಲಿದ್ದೆ. ನಾನು ಆಳುತ್ತಿರುವುದು ನಿನಗೇ ಗೊತ್ತಾಗದಿರಲಿ ಎಂದು ಮುಖ ತೊಳೆಯುವ ನಾಟಕವಾಡಿದ್ದೆ. ಆ ದಿನ ರಾತ್ರಿ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಈ ವಿಷಯ ನಿನ್ನಲ್ಲಿ ಹೇಳ್ಬೇಕು ಎಂದು ಬಯಸಿದ್ದೆ. ಆದರೆ ಈಗಾಗಲೇ ಮುಳುಗುತ್ತಿರುವ ದೋಣಿಯಲ್ಲಿ ನಿನ್ನನ್ನೂ ಕರತರುವ ವಿಚಾರ ಬೇಡವೆಂದು ಅಲ್ಲಿಗೇ ಬಿಟ್ಟೆ. ಕಾಲೇಜು ದಿನಗಳು ಮುಗಿಯುತ್ತಾ ಬಂದಾಗ ನಿನ್ನನ್ನು ಅಗಲುವ ಸಂದರ್ಭ ಬಂತೆಂದು ಬಹಳ ಬೇಸರಿಸಿದ್ದೆ.
ಬಳಿಕ ನಾನೊಂದು ತೀರ ನೀನೊಂದು ತೀರವಾಗಿ ಬಿಟ್ಟೆವು. ನನ್ನ ಕೆಲಸದಲ್ಲಿ ನಾನು ಬ್ಯುಸಿ ಆದಾಗ ನನ್ನ ನಂಬರ್ ಬದಲಿಸಬೇಕಾಗಿ ಬಂತು. ನಿನ್ನ ನೆನಪುಗಳನ್ನು ನನ್ನಿಂದ ದೂರ ಮಾಡಿದೆ. ಆದರೆ ಇತ್ತೀಚಿಗೆ ನೀನು ನನ್ನ ನಂಬರ್ ಕಷ್ಟಪಟ್ಟು ಹುಡುಕಿ ಮದುವೆಗೆ ಕರೆದಿದ್ದೆ. ನಿನ್ನ ಮದುವೆಗೆ ಬರಬಾರದು ಎಂದುಕೊಂಡಿದ್ದವ, ನಿನ್ನ ಒತ್ತಾಯಕ್ಕೆ ಮಣಿದು ಬಂದಿದ್ದೆ. ಆದರೆ ನನ್ನ ಪ್ರೇಮಿಯನ್ನು ಮದುವೆಯಾದ ಬಳಿಕ ನೋಡಲಾಗದೇ ಅಲ್ಲಿಂದ ಹಿಂದೆ ತೆರಳಿದೆ. ನಿನ್ನ ವೈವಾಹಿಕ ದಿನಗಳು ಸುಖಕರವೇಗಿರಲಿ ಎಂದು ಹಾರೈಸುತ್ತೇನೆ.

ನಿನ್ನೇ ಪ್ರೀತಿಸುವೆ....

Thursday, February 5, 2009

‘ವಾನರ ಸೇನೆ’ಯಿಂದ ಸಿಂಪಲಾಗಿ ‘ಮದುವೆಯಾಗೋಣ ಬಾ…’


ಹಲೋ ಹಾಯ್ ಹೇಗಿದ್ದಿಯಾ? ಶೀರ್ಷಿಕೆ ನೋಡ್ಬಿಟ್ಟು ಶಾಕಾಯ್ತಾ? ಪ್ರೇಮಿಗಳ ದಿನ ಹತ್ತಿರ ಬಂತು, ಅದಿಕ್ಕೆ ವಿಶ್ ಮಾಡೋದು ಬಿಟ್ಟು ಏನಿವ್ನ ಹುಚ್ಚಾಟ ಅನ್ಕೊಂಡ್ಯಾ? ಆರಾಮವಾಗಿ ಜೋಡಿ ಹಕ್ಕಿಗಳಾಗಿ ವಿಹರಿಸೋಣ ಎಂದಿದ್ದ ಸಂದರ್ಭದಲ್ಲಿ ಕುತ್ತಿಗೆಗೆ 3 ಗಂಟು ಬಿಗಿದು ‘ಗಂಟು’ ಮೊರೆ ಜೀವನ ಈಗ್ಲೇ ಶುರು ಮಾಡೋಕೆ ಹೊರಟ್ನಲ್ಲಾ? ಎಂದೇನಾದರೂ ಯೋಚಿಸಿದಿಯಾ? ಅದೇನೋ ಜೋಕ್ ಇದೆಯಲ್ಲಾ ಫೆಬ್ರವರಿ 14 ಪ್ರೇಮಿಗಳ ದಿನ ಬಂದು ಸರಿಯಾಗಿ ಒಂಬತ್ತು ತಿಂಗಳ ಬಳಿಕ ನವೆಂಬರ್ 14 ‘ಮಕ್ಕಳ ದಿನ’ ಬರತ್ತೆ ಅಂತ.ಅದಕ್ಕೇನಾದರೂ ‘ಫ್ಯಾಮಿಲಿ ಪ್ಲಾನಿಂಗ್’ ಸ್ಕೆಚ್ ಹಾಕಿದ್ನಾ ಅಂತ ಚಿಂತಿಸಿದಿಯಾ?
ಇಲ್ಲಾ ಕಣೆ ಹಾಗೇನೂ ಇಲ್ಲ. ಆದರೂ ನಾನು ನಿನ್ನನ್ನು ಪ್ರೇಮಿಗಳ ದಿನ ಮದುವೆಯಾಗ್ಬೇಕು ಅಂತ ತೀರ್ಮಾನಿಸಿದ್ದೀನಿ. ಅಯ್ಯೋ ಯಾಕಷ್ಟು ಬೇಸರ ಮಾಡ್ಕೋತಿಯಾ, ನಾವಿಬ್ಬರೂ ನಂತ್ರಾನೂ ಜೋಡಿ ಹಕ್ಕಿಗಳಾಗಿಯೇ ವಿಹರಿಸಬಹುದು. ನಾನು ನಿನಗೆ ಕೊಟ್ಟ ಮಾತಿನಂತೆ ತಪ್ಪದೇ ನಡ್ಕೋತೇನೆ ಕಣೇ. ಹೆದರಬೇಡ. ಸುಂದರವಾದ ಪ್ರೇಮ ಜೀವನ ಜೀವಿಸೋಣ. ನಿನ್ನ ಕೈ ಹಿಡಿದು ಏಳು ಜನ್ಮಗಳಲ್ಲಿಯೂ ನಿನ್ನ ಪತಿಯಾಗಿರ್ತೀನಿ. ಆದಿರಲಿ ಯಾಕಿಷ್ಟೊಂದು ಅರ್ಜೆಂಟ್, ಕಾಲೇಜು ಲೈಫೇ ಮುಗಿಲಿಲ್ಲ. ಅದರ ಮಧ್ಯೆ ಇದೊಂದೇನಪ್ಪಾ, ಇವ್ನು ಬೇರೆ ನಾನು ಜೀವನದಲ್ಲಿ ಅದು ಸಾಧಿಸ್ತೀನಿ ಇದು ಸಾಧಿಸ್ತೀನಿ, ಆ ಮೇಲೆ ನನ್ನ ಮದುವೆಯಾಗ್ತೀನಿ ಅಂತಿದ್ದಾ. ಈಗ ಏಕಾ ಏಕಿ ನಿರ್ಧಾರಕ್ಕೆ ಕಾರಣವೇನು? ಮೊದ್ಲೆ ಅಪ್ಪ ಅಮ್ಮ ಅಂತ ಹೆಸ್ರು ಕೇಳಿದ್ರೆ ನನ್ನ ಎದುರಲ್ಲಿ ಹುಲಿಯಾಗಿದ್ದವನು ಇಲಿಯಾಗಿಬಿಡುತ್ತಿದ್ದ. ಹೇಗಪ್ಪ ಇವ್ನಿಗಿಷ್ಟು ಧೈರ್ಯ ಬಂತು ಅಂತ ಗೊಂದಲವಾಯ್ತಾ? ಇಷ್ಟೆಲ್ಲಾ ಧೈರ್ಯಕ್ಕೆ ಕಾರಣವೇನು ಗೊತ್ತಾ?
‘ವಾನರ ಸೇನೆ’ ಗೊತ್ತಾ ನಿನಗೆ? ಮೊನ್ನೆ ಮಂಗಳೂರಿನಲ್ಲಿ ಪಬ್ ಗಳ ಮೇಲೆ ದಾಳಿ ಮಾಡಿದವರು. ಅದೇ ಅಲ್ಲಿ ಕುಡಿದು ಕುಣಿಯುತ್ತಿದ್ದ ಯುವಕ ಯುವತಿಯರ ಮೇಲೆ ಅಧಿಕಾರ ಚಲಾಯಿಸಿದ ‘ವಾನರ ಸೇನೆ’! ಮಾವನ ಮನೆಗೆ ಹೋದಂತೆ ಜೈಲಿಗೆ ಹೋಗಿ ಬರುವ ಅದರ ಮುಖಂಡ ಪ್ರಮೋದ್ ಮುತಾಲಿಕ್ ಇದ್ದಾರಲ್ಲ, ಅವ್ರು ನಿನ್ನೆ ಪ್ರೇಮಿಗಳಿಗೆ ಒಂದು ‘ಆಶ್ವಾಸನೆ’ ನೀಡಿದ್ದಾರೆ. ಅದೇನಂದರೆ ಫೆಬ್ರವರಿ 14 ಪ್ರೇಮಿಗಳ ದಿನ ಯಾರಾದರೂ ಪ್ರೇಮಿಗಳು ಪಾರ್ಕುಗಳಲ್ಲಿ ಕಂಡರೆ ಅವರಿಗೆ ಮದುವೆ ಮಾಡಿಬಿಡ್ತಾರಂತೆ! ಎಂತಹಾ ಒಳ್ಳೆ ಕೆಲ್ಸ ಅಲ್ವ. ಇದುವರೆಗೂ ನಾವು ಕೇವಲ ಆದಿನ ಕಬ್ಬನ್ ಪಾರ್ಕು, ಲಾಲ್ ಬಾಗೂ ಅಂತ ಕೈ ಕೈ ಹಿಡಿದು ‘ಸಪ್ತ ಪದಿ’ ತುಳಿಯುತ್ತಿದ್ದೆವು. ಆದರೆ ದಾಂಪತ್ಯದ ಪಥ ತುಳಿದಿರಲಿಲ್ಲ. ಅದಿಕ್ಕೆ ಅವ್ರಿಗೆ ಬೇಸರ್ವಾಗಿರಬೇಕು ಪಾಪ. ನಮಗೆ ಮದುವೆ ಮಾಡಿಸ್ತಾರಂತೆ. ಮತ್ತೂ ಒಂದು ವಿಶೇಷ ಗೊತ್ತ. ನಿನ್ನನ್ನು ನಾನೇ ಖುದ್ದಾಗಿ ಮದುವೆ ಮಾಡ್ಕೋಬೇಕೂಂತಿದ್ರೆ ಮಂಗಳ ಸೂತ್ರ, ಅರ್ಚಕರು ಅಂತೆಲ್ಲಾ ಒಡಾಡ್ಬೇಕಾಗುತ್ತಲ್ವ. ಆದರೆ ಅವ್ರು ಮಂಗಳ ಸೂತ್ರದ ಜೊತೆ ಅರ್ಚಕರನ್ನು ಕರ್ಕೊಂಡು ಬಂದು ನಮ್ಮ ಮದುವೆ ಮಾಡಿಸ್ತಾರಂತೆ. ಅದೂ ಫ್ರೀಯಾಗಿ. ‘ವಾನರ ಸೇನೆ’ಯವರೆಲ್ಲಾ ಅಲ್ಲಿದ್ದುಕೊಂಡು ಅಕ್ಷತೆ ಹಾಕಿ ಹರಸ್ತಾರಂತೆ! 'ಮಾಂಗಲ್ಯಂ ತಂತು ನಾನೇನಾ? ನಿಮ್ಮ ಜೀವನ ಎಷ್ಟು ದಿನ?' ಅಂತಾರಂತೆ! ಮೊನ್ನೆ ಝಮೀರ್ ಖಾನ್ ಕೊಟ್ಟ ಹಾಗೆ ಫ್ರೀಯಾಗಿ ‘ಹನಿಮೂನ್’ ಟಿಕೇಟು ಕೊಡ್ತಾರೋ ಅಂತ ಗೊತ್ತಿಲ್ಲ.ಅದೂ ಕೊಟ್ರೆ ಚೆನ್ನಾಗಿರ್ತಿತ್ತಲ್ವಾ? ಪ್ರೇಮಿಗಳ ಬಗ್ಗೆ ಕಾಳಜಿ ತೋರಿಸುವವವರು ಅಂದ್ರೆ ಹೀಗಿರ್ಬೇಕು ಅಲ್ವಾ? ಅದೂ ಇದು ಅಂತ ಆಶ್ವಾಸನೆ ಕೊಡೋದನ್ನು ಬಿಟ್ಟು ಇಂತಹಾ ‘ಘನ’ ಕಾರ್ಯ ಮಾಡಿ ನಮ್ಮಂಥವರನ್ನೆಲ್ಲಾ ಒಂದಾಗಿಸಬೇಕು.ಏನಂತಿಯಾ?
ನಮ್ಮ ‘ವಾನರ ಸೇನೆ’ಯ ಮುಖಂಡರಿದ್ದಾರಲ್ಲ.ಅವ್ರು ‘ಬ್ರಹ್ಮ ಚಾರಿ’ ಕಣೇ. ಪಾಪ. ಅವ್ರು ಯಾರಿಗೂ ಕಾಳು ಹಾಕಿಲ್ಲ ಅಂತೆ. ಮುಂದಿನ ಜನ್ಮದಲ್ಲಾದರೂ ಇಂತಹಾ ‘ಒಳ್ಳೆಯ ಕೆಲಸ’ ಮಾಡಿದ್ದಕ್ಕೆ ಅವ್ರಿಗೆ ಯಾರಾದ್ರು ಕಾಳು ಹಾಕ್ಲಿ ಅಲ್ವಾ? ಅದೆಲ್ಲಾ ಇರಲಿ. ಅವ್ರು ಸೀರೆ ಎಲ್ಲಾ ಕೊಡಲ್ಲ ಅಂತೆ. ಅದಿಕ್ಕೆ ನಂದೊಂದು ಐಡಿಯಾ. ನೀನು ಚೆನ್ನಾಗಿ ಸಿಂಗರಿಸಿಕೊಂಡು ಮದುವಣಗಿತ್ತಿಯಂತೆ ಸೀರೆ ಉಟ್ಕೊಂಡು ಬಾ. ಮನೆಯಲ್ಲಿ ಯಾರಾದ್ರೂ ಕೇಳಿದ್ರೆ ‘ಕಾಲೇಜಿನಲ್ಲಿ ಇವತ್ತು ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಇದೆ’ ಅನ್ನು! ಆಯ್ತಾ.
ನಮ್ಮಿಬ್ಬರ ಪ್ರೀತಿಗೆ ಇನ್ನ್ನು ಯಾರಕಡೆಯಿಂದಲೂ ಅಡಚಣೆಗಳಿಲ್ಲ ಅಲ್ಲಾ. ನಂಗೂ ತುಂಬಾ ಭಯ ಆಗಿತ್ತು ಅಪ್ಪನನ್ನು ಎದುರು ಹಾಕಿಕೊಳ್ಳೋದು ಹೇಗೆ ಅಂತ. ನನ್ನ ಚಿಂತೆಯನ್ನು ಅವ್ರೆಲ್ಲಾ ಸೇರಿ ದೂರ ಮಾಡಿದ್ರು. ಇರಲಿ ಬಿಡು. ಪತ್ರ ದೀರ್ಘ ಆಯ್ತು ಅಂತ ಕಾಣುತ್ತೆ. ಆ ದಿನ ಕಬ್ಬನ್ ಪಾರ್ಕಿನಲ್ಲಿ ಮೀಟ್ ಮಾಡೋಣ ಅಥವಾ ಲಾಲ್ ಬಾಗ್ ನಲ್ಲಿ ಮೀಟ್ ಮಾಡೋಣ ಅಂತ ತಿಳಿಸು. ಸಾಧ್ಯವಾದರೆ ನಾನು ಜೋತಿಷಿಗಳನ್ನೊಮ್ಮೆ ಭೇಟಿಯಾಗಿ ಎರಡೂ ಸ್ಥಳಗಳ 'ಮಹಿಮೆ' ತಿಳಿದುಕೊಳ್ಳುತ್ತೇನೆ. ಆ ದಿನ ಮರಿಬೇಡಾ ತಪ್ಪದೇ ಬಾ. ‘ವಾನರ ಸೇನೆ’ಯಿಂದ ಸಿಂಪಲ್ ಆಗಿ ಮದುವೆಯಾಗೋಣ.ನಿನ್ನ ಪತ್ರದ ನಿರೀಕ್ಷೆಯಲ್ಲಿದ್ದೇನೆ.
ಇತೀ ನಿನ್ನ ಪ್ರೀತಿಯ
‘ಭಾವೀ’ ಪತಿ