Tuesday, April 22, 2008

ಒಂದೇ ಒಂದು ಸಾರಿ ಕಣ್ಮುಂದೆ ಬಾರೋ...




ಬಾಲ್ಯದ ತುಂಟಾಟಗಳ ಸವಿ,ತುಟಿಯ ಮೇಲೆ ಆಗಿನ್ನೂ ಜಿನುಗುತ್ತಿದ್ದಂತಿತ್ತು.ವ್ಯಕ್ತಿತ್ವದ ಇನ್ನೊಂದು ಹಂತ ಮೈಮನಗಳೊಳಗೆ ಪ್ರವೇಶಿಸಲು ಹೊಂಚು ಹಾಕುತ್ತಿದೆ ಎಂದು ನನಗಾಗ ಗೊತ್ತೇ ಇರಲಿಲ್ಲ.ಮನದ ಮನೆಯೊಳಗೆ ಕಿರಿಕಿರಿ ಕೊಡುತ್ತಿದ್ದ ಕೆಲವು ಅರಿಯದ ಪ್ರಶ್ನೆಗಳು,ಅಂದು ಕಿವಿ ಹತ್ತಿರ ಬಂದು ಉತ್ತರವನ್ನು ತಾನೆ ಪಿಸುಗುಟ್ಟುತ್ತಿತ್ತು.
ವರ್ಣಿಸಲಸಾಧ್ಯವಾದ ಕಾಲ ಘಟ್ಟವದು.ಗೂಡಿನಿಂದ ಹಕ್ಕಿ ಮೊದಲ ಬಾರಿ ಹಾರಿದಾಗ ಆದಂತಹಾ ಅನುಭವವದು.ಕೋಗಿಲೆ ಕೊರಳಲ್ಲಿ ಬಂದ ಮೊದಲ ಸ್ವರವದು.ಆಗ ತನೆ ಅರಳಿದ ಹೂವಿನ ಸಂಭ್ರಮವದು.ಯಾವುದೋ ಅರಿಯದ ಲೋಕದೊಳಗೆ ಕಾಲಿಟ್ಟೆನೋ ಎಂಬಂತಿತ್ತು.ಪ್ರತಿಯೊಂದು ಹೆಣ್ಣು ಮರೆಯಲಾಗದ ನೆನಪುಗಳಲ್ಲೊಂದು.
ರಾತ್ರಿಯ ಕನಸು,ಕನವರಿಕೆಗಳು ಹಗಲಿಗೂ ವಿಸ್ತಾರವಾಗೋಕೆ ಶುರುವಾಯ್ತು.ಆ ಎಲ್ಲಾ ಸ್ವಪ್ನಗಳಲ್ಲೂ ಹೊಸತೊಂದು ಮುಖದ ಪರಿಚಯವಾಗತೊಡಗಿತು.ಆ ಕಲ್ಪನೆ,ಕನಸುಗಳಲ್ಲಿ ಕಂಡದ್ದು ಒಂದೇ ಮುಖ.ಅದೇ ಆ ನನ್ನ ಸಖ.ಅವನು ಭೇಟಿಯಾಗಿದ್ದು ಒಂದೇ ಬಾರಿ.ಆಗಲೇ ಮನಸೊಳಗೆ ಅಳಿಸದ ಪ್ರೇಮ ಮುದ್ರೆ ಒತ್ತಿದ ಆ ಚೋರನ ಮೊದಲ ಭೇಟಿ ನೆನಪಿಸಿಕೊಂಡರೆ ಕೆನ್ನೆಯಲ್ಲಿ ಈಗ್ಲೂ ಗುಳಿ ಬೀಳುತ್ತೆ.ಪ್ರಥಮ ಮುಖಾ-ಮುಖಿಯಲ್ಲಿ ಮಾತನಾಡದೆ ಸುಮ್ಮನಿದ್ದ ನನಗೆ “ಹೋಗಿ ಬರುವೆ” ಎಂದಷ್ಟೇ ಹೇಳಿದ ಆ ಭೂಪ,ಒಮ್ಮೆ ರಾಜಾರೋಷವಾಗಿ “ನನ್ನನ್ನು ಮದುವೆಯಾಗಲು ನಿಮಗೆ ಇಷ್ಟವಿದೆಯಾ?” ಎಂದು ಕೇಳಿಯೇ ಬಿಟ್ಟ !ಅಲ್ಲಿಯವರೆಗೆ ನನ್ನ ಕಣ್ಣೋಟಗಳಿಂದ ಅರಿತಿದ್ದ ಅವನು ಮೌನಂ ಸಮ್ಮತಿ ಲಕ್ಷಣಂ ಎಂದು ತಿಳಿದ!
ನನ್ನನ್ನೊಮ್ಮೆಯೂ ಏಕವಚನದಲ್ಲಿ ಕರೆಯದ ಆತ ನನ್ನ ಕಣ್ಣಿಗೆ ಇತರ ಎಲ್ಲಾ ಹುಡುಗರಿಗಿಂತಲೂ ವಿಭಿನ್ನ.ನನಗಿಲ್ಲದ ತಾಳ್ಮೆ,ಅವನಲ್ಲಿ ಮನೆಮಾಡಿದೆ.ಸಣ್ಣ-ಸಣ್ಣ ವಿಷಯಕ್ಕೂ ಕೋಪಗೊಳ್ಳುವ ನಾನು ಅದೇಕೋ ಅವನ ಮುಂದೆ ಬೇಗ ಕರಗಿ ಬಿಡುವೆ.ಅವನ ಮಿಂಚಿನಂಥ ಮಾತಿನ ಮುಂದೆ ನಾನಿನ್ನೂ ಮೂಕಿಯಾಗಿದ್ದೀನಿ.ಅವನಮ್ಮ ಅವನನ್ನು ಪ್ರೀತಿಯಿಂದ ‘ಪಾಪು’ ಅಂತ ಕರೆಯೋದನ್ನ ನಾನದೆಷ್ಟೋ ಬಾರಿ ಅಣಕಿಸಿದ್ದೆ.ಆದರೆ ನಿಜ ಹೇಳಬೇಕಂದ್ರೆ ಬಾಲ್ಯದ ಆ ಕಳೆಯನ್ನು ಅವನ ಮುಖದಲ್ಲಿ ನೋಡೋಕೆ ನನಗೂ ಸಹ ತುಂಬಾ ಇಷ್ಟ.ಸಣ್ಣ ಮಗುವನ್ನು ಮುದ್ದಾಡೋ ಹಾಗೆ ಈ ದೊಡ್ಡ ಪಾಪೂನ ಮುಡ್ಡಾಡೋಣ ಅನಿಸುತ್ತೆ.
ಇಷ್ಟೆಲ್ಲಾ ಸುಮಧುರ ಭಾವನೆಗಳನ್ನು ಹುಟ್ಟಿಸಿದ,ಭವಿಷ್ಯದ ಸುಂದರ ಲೋಕವನ್ನು ನನ್ನ ಮನದಲ್ಲಿ ಚಿತ್ರಿಸಿದ ಅವನು,ಇತ್ತೀಚಿಗೇಕೋ ಮೌನಗೀತೆ ಹಾಡುತ್ತಿದ್ದಾನೆ.ಅವನು ನನ್ನೊಂದಿಗೆ ಕೊನೆಯ ಬಾರಿ ಆಡಿದ ಮಾತುಗಳು,ಹೃದಯವನ್ನಿನ್ನೂ ಹಿಂಡುತ್ತಿದೆ.ನನ್ನಿಂದೇನಾದರೂ ತಪ್ಪಾಯಿತಾ ಎಂಬ ಪ್ರಶ್ನೆಯು ಒಮ್ಮೊಮ್ಮೆ ತಲೆಯಲ್ಲಿ ಬರುವುದುಂಟು.ಆತನೇ ಪೋಷಿಸಿದ ಪ್ರೀತಿಯ ಸಸ್ಯವನ್ನು ಎಲ್ಲಿ ಚಿವುಟಿ ಹಾಕುವನೋ ಎಂಬ ಭಯವೂ ನನ್ನ ಬೆನ್ನೇರಿದೆ.
ಅವನ ಪರಿಚಯವಾಗಿ ಈಗ ಐದು ವರ್ಷ ಕಳೆದಿದೆ.ಮೊದ ಮೊದಲು ಅವನ ಜೊತೆ ಮಾತಾಡೋಕೆ,ಅವನ ಜೊತೆ ಕೂರೋಕೆ ಭಯವಾಗುತ್ತಿತ್ತು.ಆದರೆ ಈಗಲೂ ಭಯವಾಗುತ್ತೆ,ಆತ ಎಲ್ಲಿ ನನ್ನಿಂದ ದೂರವಾಗುತ್ತಾನೋ ಎಂದು ?ಎಷ್ಟೋ ಸಲ ನನ್ನೊಳಗಿರುವಾ ಅವನಿಗೆ ಹೇಳಿದ್ದುಂಟು.“ಪ್ಲೀಸ್ ಕಣೋ..ನೀನು ನನ್ನ ಮೊದಲ ‘ಸುಧೀ..”ಯಾಗೂ ಎಂದು.ಆದರೆ ಅದು ಅವನಿಗೇಕೋ ಇನ್ನೂ ಕೇಳ್ತಾನೇ ಇಲ್ಲ.ಆದು ಏನೇ ಇರಲಿ.ನನ್ನ ಒಡಲ ಭಾವನೆಗಳು ಇನ್ನೂ ಹಸಿರಾಗಿಯೇ ಇವೆ.ನನ್ನಾತ್ಮ ಈ ದೇಹವನ್ನು ಅಗಲುವವರೆಗೂ,ನಿನಗಾಗಿಯೇ ಕಾಯುತಿರುವೆ ಗೆಳೆಯ,ನೀ ಮರಳಿ ಬರುವೆಯಾ ಈ ಸಖಿಯ ಸನಿಹ ?