Friday, December 12, 2008

ಇವಳು ಗೆಳತಿಯಲ್ಲ...


ಇಂದು ನಿನ್ನ ಹುಟ್ಟಿದ ದಿನ.ಸ್ವೀಟ್ 18.wish you happy birthday.many many happy returns of the day.ನಿನಗೆ ನೆನಪಿದೆಯಾ? ನಿನಗೆ 18 ವರ್ಷ ತುಂಬಿದಾಗ ಏನೋ ಮಾಡ್ತೀನಿ ಅಂತ ನನ ಜೊತೆ ಪ್ರಾಮಿಸ್ ಮಾಡಿದ್ದೆ.ನಿನಗೆಲ್ಲಿ ನೆನಪಿರುತ್ತೆ ಬಿಡು.ನಾನೇ ನೆನಪಿಸುತ್ತೇನೆ.ನೀನಂದಿದ್ದೆ “ನನಗೆ 18 ವರ್ಷ ಆಗ್ಲಿ.ನಾನು ನಿನ್ನ ಜೊತೆ ಬರುತ್ತೇನೆ.ನಾನೂ ಯಾರಿಗೂ ಹೆದರುವುದಿಲ್ಲ.ನಾನಾಗ ಮೆಚುರ್ಡ್ ಆಗಿರುತ್ತೇನೆ”.ಆದರೆ ನೀನೆ ಅದನ್ನೆಲ್ಲಾ ಮರೆತುಬಿಟ್ಟೆ ಅಲ್ವಾ? you are really great! ನಾನು ನಿನಗೆ ಮಾಡಿದ ಅನ್ಯಾಯವಾದರೂ ಏನು? ನೀನಂದಿದ್ದನ್ನು ಕೇಳಿಕೊಂಡು ಸುಮ್ಮನಾಗಿದ್ದು? ನೀನು ಹೇಳಿದ್ದನ್ನೆಲ್ಲಾ ಮಾಡಿದ್ದು? ನಿನ್ನನ್ನು ಒಬ್ಬ ಸಿನ್ಸಿಯರ್ ಹುಡುಗನಾಗಿ ಪ್ರೀತಿಸಿದ್ದು? ನೀನು ಊರು ಬಿಅಡಲು ಹೇಳಿದಾಗ ದೂರದೂರಿನಲ್ಲಿ ಕಷ್ಟಪಟ್ಟಿದ್ದು? ನಿನ್ನ ಅಣ್ಣಂದಿರಂತೆ ಇದ್ದ ಹುಡುಗಿಯರನ್ನೆಲ್ಲಾ ಪ್ರೀತಿಯ ಹೆಸರು ಹೇಳಿ ಮಜಾ ಮಾಡದ್ದು? ನೀನು ಹೇಳಿದ ಹಾಗೆ ಕೇಳಿದ್ದು? ಕೇಳಲು ಪ್ರಶ್ನೆಗಳು ತುಂಬಾ ಇದೆ.ನೀನು ಹೇಳಿದ್ದನ್ನೆಲ್ಲಾ ಮಾಡಿದ್ದಕ್ಕೆ ನೀನು ಕೊಟ್ಟ ಬಹುಮಾನ ದೊಡ್ಡದು ಕಣೇ.ಬಹುದೊಡ್ಡದು.ಇರಲಿ ಬಿಡು.ನನ್ನದೊಂದು ನಿಯಮ ಇತ್ತು.ನನ್ನನ್ನು ಪ್ರೀತಿಸಿದ ಹುಡುಗಿಯನ್ನು ನಾನು ಪ್ರೀತಿಸಬೇಕೆಂದು.ನೀನು ನನಗೆ ಪ್ರೊಪೋಸ್ ಮಾಡಿದೆ.ನಾನು ತಿರಸ್ಕರಿಸಿದಾಗ ನಿನ್ನ ಹಟಕ್ಕೆ ಮಣಿದು,ಒಪ್ಪಿದೆ.ನೀನೇ ನನ್ನ ಜೀವಾ ಅಂದುಕೊಂಡಿದ್ದೆ.ಈ ಜಗತ್ತಿನಲ್ಲಿ ನನಗೆ ಮದುವೆ ಎನ್ನುವುದೇನಾದರೂ ಇದ್ದರೆ ಅದು ನಿನ್ನ ಜೊತೆ ಮಾತ್ರ ಎಂದು ಭಾವಿಸಿದ್ದೆ.ಆದರೆ ನೀನು ಅದಕ್ಕೆಲ್ಲಾ ಕಲ್ಲು ಹೊಡೆದುಬಿಟ್ಟೆ ಕಣೇ.ನಿಂಗೊಂದು ವಿಷಯ ಗೊತ್ತಾ? ನಾನು ನಿನಗೆ ಮಾಡಿದ ಪ್ರಾಮಿಸ್ ನ ಉಳಿಸಿಕೊಂಡಿದ್ದೆ.ಕೊಟ್ಟ ಮಾತಿಗೆ ತಪ್ಪದೇ ನಡೆದಿದ್ದೆ.ನಿನ್ನ ಅಣ್ಣಂದಿರು ಊರಿಡೀ ನನ್ನ ಹೆಸರನ್ನು ಹಾಳು ಮಾಡಿದಾಗ “ನಾನೇ ಅವಳನ್ನು ಪ್ರೀತಿಸಿದ್ದು” ಎಂದಿದ್ದೆ! ಆದರೆ ನೀನು ಅದನ್ನೆಲ್ಲಾ ಬಂಡವಾಳ ಮಾಡಿಕೊಂಡುಬಿಟ್ಟೆ ಅಲ್ವಾ? ನಾನವತ್ತು ಬೈಕ್ ನಲ್ಲಿ ನಿನ್ನೆದುರಿಗೆ ಬಂದಾಗ ತಲೆ ತಗ್ಗಿಸಿದೆ.ಯಾಕೆ? ನಾನೇನಾದರೂ ನಿನಗೆ ಮೋಸ ಮಾಡಿದ್ನಾ? ‘love is sweet poison’ ಅಂತಾರೆ.ಅದು ನಿಜ ಕಣೇ.ಈ ಜಗತ್ತಿನಲ್ಲಿ ಎಲ್ಲಾ ಹುಡ್ಗೀರು ನಿಂತರಾನೆ ಇರುತ್ತಾರೆ ಅಂದುಕೊಂಡಿದ್ದೆ.ಆದರೂ ಕೆಲವು ಒಳ್ಳೆಯವರನ್ನು ಕಂಡೆ,ಬಿಡು.ಒಂದುಮಾತ್ರ ನೆನಪಿಟ್ಟುಕೋ.ಈ ಜಗತ್ತಿನಲ್ಲಿ ನಾನು ನಿನ್ನನ್ನು ಪ್ರೀತಿಸಿದಷ್ಟು ನಿನ್ನನ್ನು ಪ್ರೀತಿಸುವವರು,ಇಷ್ಟಪಡುವವರು ಯಾರೂ ಇಲ್ಲ.ನಾನು ಎಲ್ಲರಂತೆ ಸುಂದರವಾಗಿಲ್ಲ್ಲ ಕಣೇ.ನೀನು ಪ್ರೊಪೋಸ್ ಮಾಡಿದಾಗಲೇ ಇದನ್ನು ಹೇಳಿದ್ದೆ.ಆದರೆ ನೀನು ಮಾತ್ರ “ನಾನು ಹಾಗೆಲ್ಲಾ ನೋಡಿ ಪ್ರೀತಿಸಲ್ಲ” ಎಂದು 'ಸುಳ್ಳು' ಹೇಳೀದ್ದೆ.ಆದರೆ ಇಂದು ನನ್ನನ್ನು ಮರೆತು ಹಾಯಾಗಿದ್ದಿಯಾ ಅಲ್ವಾ? ನಿಂಗೊಂದು ಮಾತು ನೆನಪಿರಲಿ.ಒಬ್ಬ ಹುಡುಗಿ,ಒಬ್ಬ ಹುಡುಗನನ್ನು ತನ್ನ ಕೈ ಬೆರಳನ್ನಾದರೂ ಮುಟ್ಟಲು ಬಿಡಬೇಕಾದರೆ ಆಕೆ ಆತನನ್ನು ತನ್ನ ಗಂಡನಾಗುವವ ಎಂದು ಭಾವಿಸಿರಬೇಕಂತೆ.ಆದರೆ ನೀನು? ನಂಜೊತೆ ಆಡಿದ ಸ್ವೀಟ್ memoriesಗಳನ್ನೇಲ್ಲಾ ಮರೆತು ಬಿಟ್ಟೆಯಾ? ಇರಲಿ ಬಿಡು.ಒಬ್ಬ ಹುಡುಗ ಯಾರನ್ನು ಬೇಕಾದರೂ ಪ್ರೀತಿಸಿ ಮರೆತು ಬಿಡಬಹುದು.ಹುಡುಗಿ ಹಾಗೆಲ್ಲಾ ಮಾಡಲಾಗುವುದಿಲ್ಲ ಎನ್ನುತ್ತಾರೆ.ಆದರೆ ನೀನು? ‘ಅದನ್ನೆಲ್ಲಾ’ ಬಹುಬೇಗನೇ ಮರೆತು ಬಿಟ್ಟೆಯಾ? ನೀನು ನನ್ನನ್ನು ಮರೆತು ಎರಡು ವರ್ಷಗಳೇ ಕಳೆದಿದೆ.ಆದರೂ ನನ್ನ ಹಳೆಯ ಆ ಮೊಬೈಲ್ ನಂಬರನ್ನೇ ಉಪಯೋಗಿಸುತ್ತಿದ್ದೇನೆ.ಆದರೂ ನೀನು ಯಾವತ್ತಾದರೂ ಒಂದು ಮಿಸ್ ಕಾಲ್ ಆದರೂ ಕೊಟ್ಟಿದ್ದಿಯಾ ಕಣೇ? ಇಲ್ಲ.ನಿನಗೆ ನನಗಿಂತ ಒಳ್ಳೆಯವರು ಸಿಕ್ಕಿರುವಾಗ ನನ್ನ ನೆನಪಾದರೂ ಬರುವುದು ಹೇಗೆ? ಕೊನೆಯದಾಗಿ ಒಂದು ಮಾತು.ನಾನು ನನ್ನ ನಿನ್ನ ಪ್ರೀತಿಯ ಬಗ್ಗೆ ಲೇಖನ ಬರೆದಾಗ ನಿನ್ನ ‘ಘನವೆತ್ತ’ ಅಣ್ಣಂದಿರು ನನಗೆ ಕೊಲೆ ಬೆದರಿಕೆ ಹಾಕಿದ್ದರು.ನಾನಾಗ ಮೊಬೈಲ್ ನಲ್ಲಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದೆ.ಅದು ಮತ್ತು ನಂಬರ್ ನನ್ನ ಜೊತೆಗಿದೆ.ನನಗಿರುವ ತಾಕತ್ತುಗಳನ್ನೆಲ್ಲ ಉಪಯೋಗಿಸಿಕೊಂಡು ಅವರನ್ನು ಜೀವನವಿಡೀ ಕಂಬಿ ಎಣಿಸುವಂತೆ ಮಾಡಬಹುದು.ಆದರೆ ನಾನು ಹಾಗೆ ಮಾಡಲ್ಲ.ಕಾರಣ ಅವರ ಮೇಲಿನ ಕೋಪಕ್ಕೆ ನಿನ್ನನ್ನು ಪ್ರೀತಿಸಿದ್ದ ನೆನಪುಗಳು ಅಡ್ಡಬರುತ್ತದೆ.ಕಾರಣ ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸಿದ್ದೆ.ನೀನು ಕೊಟ್ಟ ಪ್ರೇಮ ಪತ್ರ,ನಿನ್ನ ಫೊಟೊ ಎಲ್ಲವನ್ನೂ ಹಿಂದಿರುಗಿಸುತ್ತಿದ್ದೇನೆ.ನನ್ನವಳಲ್ಲದವಳದ್ದೇನೂ ನನಗೆ ಬೇಡ.ಇರಲಿ ಹಿಡ್ಕೋ.ಒಮ್ಮೆ ನೀನು ಕೊಟ್ಟ ಪತ್ರಗಳನ್ನೆಲ್ಲಾ ಓದು.ನನ್ನ ಒಂದೇ ಒಂದು request.ನನ್ನ ಜೀವನದಲ್ಲಿ ಆಟ ಆಡಿದ ಹಾಗೆ ಇನ್ನು ಯಾರ ಜೀವನದಲ್ಲಿಯೂ ಆಟ ಆಡಬೇಡ.ಎಲ್ಲರೂ ನನ್ನಂತೆ ಸಾಧುಗಳಲ್ಲ.ಗುಡ್ ಬಾಯ್.

Friday, August 22, 2008

ಕಾಲ ಮಿಂಚಿ ಹೋದಾಗ

ಇತ್ತೀಚಿಗೆ ನನ್ನ ಮೊಬೈಲ್ ಗೊಂದು ಎಸ್ ಎಂ ಎಸ್ ಬಂದಿತ್ತು.ಅದು ಹೀಗಿತ್ತು.ಒಬ್ಬ ಹುಡುಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ.ವೈದ್ಯರ ಪ್ರಕಾರ ಆತ ಇನ್ನು ಕೇವಲ ಒಂದು ತಿಂಗಳ ಕಾಲ ಬದುಕುವವನಿದ್ದ.ಮನೆ ಪಕ್ಕದ ಸಿ ಡಿ ಸೆಂಟರ್ ನಲ್ಲಿದ್ದ ಹುಡುಗಿಯೋರ್ವಳನ್ನು ತುಂಬಾ ಇಷ್ಟಪಟ್ಟಿದ್ದ.ಆದರೆ ತನ್ನ ಪ್ರೀತಿಯನ್ನು ಆಕೆಯೊಂದಿಗೆ ಹೇಳಿಕೊಳ್ಳಲಾಗದೆ ಕೊರಗುತ್ತಿದ್ದ.ಪ್ರತಿ ದಿನ ಆಕೆಯೊಂದಿಗೆ ಮಾತನಾಡುವ ಸಲುವಾಗಿ ಆಕೆ ಕೆಲಸ ಮಾಡುವ ಸಿ ಡಿ ಸೆಂಟರ್ ಗೆ ಹೋಗುತ್ತಿದ್ದ.ಹೀಗೆ ಒಂದು ತಿಂಗಳ ನಂತರ ಆತ ಇಹಲೋಕ ತ್ಯಜಿಸಿದ.ಪ್ರತಿ ದಿನ ಬರುತ್ತಿದ್ದ ಹುಡುಗ ಇತ್ತೀಚಿಗೇಕೆ ಕಾಣುತ್ತಿಲ್ಲ ಎಂಬ ಚಿಂತೆಯಿಂದ ಈ ಹುಡುಗಿ ಆತನ ಮನೆಗೆ ಹೋದಳು.
ಅವನ ತಾಯಿಯಲ್ಲಿ ವಿಚಾರಿಸಿದಾಗ ಸಾವಿನ ಸುದ್ದಿ ತಿಳಿಯಿತು.ಈಕೆಯನ್ನೇಕೋ ಕಂಡು ಮರುಗಿದ ಅವನಮ್ಮ ಆತನ ರೂಮಿಗೆ ಕರೆದೊಯ್ದಳು.ಈ ಹುಡುಗಿ ಪ್ಯಾಕೇಟು ಒಡೆಯದೇ ಇಟ್ಟಿದ್ದ ಸಿ ಡಿ ಪ್ಯಾಕುಗಳನ್ನು ನೋಡಿ ಜೋರಾಗಿ ಅಳತೊಡಗಿದಳು.ಯಾಕೆ ಗೊತ್ತಾ ? ಅವಳು ಕೂಡ ಆತನನ್ನು ಗಾಡವಾಗಿ ಪ್ರೀತಿಸುತ್ತಿದ್ದಳು.ತನ್ನ ಪ್ರೇಮ ನಿವೇದನೆಯನ್ನು ಆತನೊಂದಿಗೆ ಪತ್ರದ ಮೂಲಕ ಹೇಳುವ ಸಲುವಾಗಿ ಪ್ರೇಮ ಪತ್ರಗಳನ್ನೆಲ್ಲಾ ಆ ಸಿ ಡಿ ಕವರ್ ನೊಳಗಿಟ್ಟು ಆತನಿಗೆ ಕೊಡುತ್ತಿದ್ದಳು ! ಆದರೆ ಆತ ಮಾತ್ರ ಆ ಕವರ್ ಗಳನ್ನು ತೆರೆದು ನೋಡಿಯೇ ಇರಲಿಲ್ಲ !
ಯಾಕೋ ಈ ಎಸ್ ಎಂ ಎಸ್ ನನ್ನ ಹೃದಯಕ್ಕೆ ಬಹಳಾ ಹತ್ತಿರವಾಗಿ ಬಿಟ್ಟಿತು. ಹೌದಲ್ಲಾ ಸ್ನೇಹಿತರೇ, ನಮ್ಮ ಜೀವನದಲ್ಲಿ ನಾವು ಕೂಡ ಹೀಗೇನೇ ಎಷ್ಟೋಂದು ಜನರನ್ನು ಇಷ್ಟಪಟ್ಟಿರ್ತೀವಿ.ನಮ್ಮನ್ನು ಅವರೂ ಕೂಡ.ಆದ್ರೆ ಅದನ್ನು ಅವರೊಂದಿಗೆ ಹೇಳಲಾರದೇ ನಾವು ಪಟ್ಟಿರುವ ಕಷ್ಟಗಳೆಷ್ಟು ? ನಮ್ಮ ಸಂಕೋಚಾನೇ ನಮ್ಮಿಬ್ಬರ ನಡುವಿನ ಆ ಆತ್ಮೀಯ ಬಂದನವನ್ನು ತೆಗೆದು ಹಾಕಿರುತ್ತೆ. ಇನ್ನೇನು ಹೇಳಬೇಕು ಎನ್ನುವಷ್ಟರಲ್ಲಿ ಇನ್ನೇನೋ ನಡೆದಿರುತ್ತೆ! ವಿಶಾಲವಾಗಿರೋ ಈ ಜಗತ್ತಿನಲ್ಲಿ ಇನ್ನೆಲ್ಲೋ ನಾವವರನ್ನು ಭೇಟಿಯಾದಾಗ ಹೃದಯದಲ್ಲಿರೋ ಆ ಪ್ರಿತಿಯ ದೊಡ್ಡ ಭಾರವನ್ನು ಹೇಳಿ ಹಗುರವಾಗಿಸಬೇಕೆಂದು ಹಂಚಿಕೊಂಡಾಗ ಕಳೆದು ಹೋದ ಕಾಲವೆಲ್ಲಾ ನೆನಪಾಗಿ ಬಿಡುತ್ತೆ.ಆದರೆ ಕಾಲ ಮಿಂಚಿರುತ್ತೆ !

Sunday, June 8, 2008

ಹಣೆಯಲಿ ಬರೆಯದ ನಿನ್ನ ಹೆಸರ...

ಹೌದು ಕಣೇ, ನೀನು ನನ್ನನ್ನು ಮರೆತು ಒಂದು ವರ್ಷ ತುಂಬುತ್ತಾ ಬಂತು.ನೀನೇ ನನ್ನಲ್ಲಿ ಮಾಡಿದ್ದ ಯಾವುದೇ ಪ್ರಾಮಿಸ್ ಗಳೂ ನಿನಗೇ ನೆನಪಿಲ್ಲ! ನನ್ನನ್ನು ಎಲ್ಲಿಯಾದರೂ ಕಂಡರೆ ‘ಅಪರಿಚಿತ’ ಎಂಬಂತೆ ವರ್ತಿಸುತ್ತಿ ಅಲ್ವಾ! ನೀನೇ ಉಣಿಸಿದ ಮುತ್ತಿನ ರಸಡೌತಣಗಳನ್ನೇ ಮರೆತಿದ್ದೀ ಅಲ್ವಾ ? ನಂಗ್ಯಾಕೋ ನಿನ್ನನ್ನು ಮರೀಲಿಕ್ಕೇ ಆಗ್ತಿಲ್ಲಾ ಕಣೇ, ಎಷ್ಟೇ ಕಷ್ಟಪಟ್ರೂನೂ ಕೂಡ!
ನಿನ್ನನ್ನು ಮರೀಬೇಕೂಂತ ಏನೆಲ್ಲಾ ಮಾಡಿದೆ.ಆದರೆ ಅದೆಲ್ಲಾ ‘ನೀರಿನ ಮೇಲಿಟ್ಟ ಹೋಮ’ದಂತೆ ವ್ಯರ್ಥವಾಯ್ತು.ನಿನ್ನನ್ನು ದ್ವೇಷಿಸೋಣಾಂತ ‘ಕಷ್ಟಪಟ್ಟು’ ದ್ವೇಷಪಟ್ರೂ, ನಿನ್ನ ಪ್ರೀತೀನ ನಂಜೊತೆ ಹಂಚಿಕೊಳ್ಳಲು ಪಟ್ಟ ಕಷ್ಟ ನೆನಪಾಗಿ ಕಠೋರವಾಗಿರೋ ನನ್ನ ಹೃದಯ ಕರಗಿ ಕೆನ್ನೆಯಲ್ಲಿ ಗುಳಿ ಬೀಳುತ್ತೆ ! ಸುಮ್-ಸುಮ್ನೆ ಕೂತ್ಕೊಂಡಿರುವಾಗ ಬೇಡ ಅಂದರೂ ನಿಂಜೊತೆ ಆಡುತ್ತಿದ್ದ ಪ್ರೀತಿಯ ಚೆಲ್ಲಾಟ ನೆನಪಾಗುತ್ತೆ.ನೀನು ನನ್ನ ಕೈ ಹಿಡಿದುಕೊಂಡು ಬಿಸಿಯಪ್ಪುಗೆ ನೀಡುತ್ತಿದ್ದ ‘ಆ ದಿನಗಳು’ ನೆನಪಾಗಿ ಕಣ್ಣು ಮಂದವಾಗುತ್ತೆ.
ನನ್ನನ್ನು ಮರೀಬೇಡಾಂತ ನಿವೇದಿಸುತ್ತಿದ್ದ ನೀನೇ, ನನ್ನ ಮರೆತು ಬಿಟ್ಟಿ ಅಲ್ವಾಂತ ಮನಸ್ಸು ಚುಚ್ಚುತ್ತೆ!
ಒಂದು ಮಾತ್ರ ನೆನಪಿಟ್ಕೋ... ನಾನು ನಿನ್ನನ್ನು ಪ್ರೀತಿಸಿದಷ್ಟು ಈ ಜಗತ್ತಿನಲ್ಲಿ ನಿನ್ನ ಪ್ರೀತಿಸುವವರು ಯಾರೂ ಇಲ್ಲಾ ಕಣೇ.ನಾನು ಸತ್ತರೂ ನಿನ್ನ ಮೇಲಿರೋ ನನ್ನ ಪ್ರೀತಿ ಸಾಯಲ್ಲಾ ಕಣೇ! ಅದೆಂದಿಗೂ ಅಮರ,ಶಾಶ್ವತ.ನನ್ನ ಹಣೆಯಲಿ ಬರೆಯದ ನಿನ್ನ ಹೆಸರನ್ನು ಹೃದಯದಲ್ಲಿ ನಾನೇ ಕೊರೆದಿದ್ದೇನೆ.ನನ್ನ ಹೃದಯದಲ್ಲಿ ನಿನಗೆ ಮೀಸಲಾಗಿರೋ ಜಾಗದಲ್ಲಿ ಮತ್ತೋರ್ವಳಿಗೆ ಅವಕಾಶವಿಲ್ಲ.ನೀನೇ ನೆಟ್ಟಿರೋ ಪ್ರೀತಿಯೆಂಬ ಸಸ್ಯವನ್ನು ಕಿತ್ತೊಗೆಯಬೇಡ.ಅದೀಗಾಗಲೇ ಪ್ರೌಡಾವಸ್ಥೆಯಲ್ಲಿದೆ.ಪ್ಲೀಸ್.. ನಿನ್ನ ಮನಸ್ಸನ್ನು ಬದಲಾಯಿಸ್ಕೋ...
ಇತೀ,
ನಿನ್ನವನು

Tuesday, April 22, 2008

ಒಂದೇ ಒಂದು ಸಾರಿ ಕಣ್ಮುಂದೆ ಬಾರೋ...




ಬಾಲ್ಯದ ತುಂಟಾಟಗಳ ಸವಿ,ತುಟಿಯ ಮೇಲೆ ಆಗಿನ್ನೂ ಜಿನುಗುತ್ತಿದ್ದಂತಿತ್ತು.ವ್ಯಕ್ತಿತ್ವದ ಇನ್ನೊಂದು ಹಂತ ಮೈಮನಗಳೊಳಗೆ ಪ್ರವೇಶಿಸಲು ಹೊಂಚು ಹಾಕುತ್ತಿದೆ ಎಂದು ನನಗಾಗ ಗೊತ್ತೇ ಇರಲಿಲ್ಲ.ಮನದ ಮನೆಯೊಳಗೆ ಕಿರಿಕಿರಿ ಕೊಡುತ್ತಿದ್ದ ಕೆಲವು ಅರಿಯದ ಪ್ರಶ್ನೆಗಳು,ಅಂದು ಕಿವಿ ಹತ್ತಿರ ಬಂದು ಉತ್ತರವನ್ನು ತಾನೆ ಪಿಸುಗುಟ್ಟುತ್ತಿತ್ತು.
ವರ್ಣಿಸಲಸಾಧ್ಯವಾದ ಕಾಲ ಘಟ್ಟವದು.ಗೂಡಿನಿಂದ ಹಕ್ಕಿ ಮೊದಲ ಬಾರಿ ಹಾರಿದಾಗ ಆದಂತಹಾ ಅನುಭವವದು.ಕೋಗಿಲೆ ಕೊರಳಲ್ಲಿ ಬಂದ ಮೊದಲ ಸ್ವರವದು.ಆಗ ತನೆ ಅರಳಿದ ಹೂವಿನ ಸಂಭ್ರಮವದು.ಯಾವುದೋ ಅರಿಯದ ಲೋಕದೊಳಗೆ ಕಾಲಿಟ್ಟೆನೋ ಎಂಬಂತಿತ್ತು.ಪ್ರತಿಯೊಂದು ಹೆಣ್ಣು ಮರೆಯಲಾಗದ ನೆನಪುಗಳಲ್ಲೊಂದು.
ರಾತ್ರಿಯ ಕನಸು,ಕನವರಿಕೆಗಳು ಹಗಲಿಗೂ ವಿಸ್ತಾರವಾಗೋಕೆ ಶುರುವಾಯ್ತು.ಆ ಎಲ್ಲಾ ಸ್ವಪ್ನಗಳಲ್ಲೂ ಹೊಸತೊಂದು ಮುಖದ ಪರಿಚಯವಾಗತೊಡಗಿತು.ಆ ಕಲ್ಪನೆ,ಕನಸುಗಳಲ್ಲಿ ಕಂಡದ್ದು ಒಂದೇ ಮುಖ.ಅದೇ ಆ ನನ್ನ ಸಖ.ಅವನು ಭೇಟಿಯಾಗಿದ್ದು ಒಂದೇ ಬಾರಿ.ಆಗಲೇ ಮನಸೊಳಗೆ ಅಳಿಸದ ಪ್ರೇಮ ಮುದ್ರೆ ಒತ್ತಿದ ಆ ಚೋರನ ಮೊದಲ ಭೇಟಿ ನೆನಪಿಸಿಕೊಂಡರೆ ಕೆನ್ನೆಯಲ್ಲಿ ಈಗ್ಲೂ ಗುಳಿ ಬೀಳುತ್ತೆ.ಪ್ರಥಮ ಮುಖಾ-ಮುಖಿಯಲ್ಲಿ ಮಾತನಾಡದೆ ಸುಮ್ಮನಿದ್ದ ನನಗೆ “ಹೋಗಿ ಬರುವೆ” ಎಂದಷ್ಟೇ ಹೇಳಿದ ಆ ಭೂಪ,ಒಮ್ಮೆ ರಾಜಾರೋಷವಾಗಿ “ನನ್ನನ್ನು ಮದುವೆಯಾಗಲು ನಿಮಗೆ ಇಷ್ಟವಿದೆಯಾ?” ಎಂದು ಕೇಳಿಯೇ ಬಿಟ್ಟ !ಅಲ್ಲಿಯವರೆಗೆ ನನ್ನ ಕಣ್ಣೋಟಗಳಿಂದ ಅರಿತಿದ್ದ ಅವನು ಮೌನಂ ಸಮ್ಮತಿ ಲಕ್ಷಣಂ ಎಂದು ತಿಳಿದ!
ನನ್ನನ್ನೊಮ್ಮೆಯೂ ಏಕವಚನದಲ್ಲಿ ಕರೆಯದ ಆತ ನನ್ನ ಕಣ್ಣಿಗೆ ಇತರ ಎಲ್ಲಾ ಹುಡುಗರಿಗಿಂತಲೂ ವಿಭಿನ್ನ.ನನಗಿಲ್ಲದ ತಾಳ್ಮೆ,ಅವನಲ್ಲಿ ಮನೆಮಾಡಿದೆ.ಸಣ್ಣ-ಸಣ್ಣ ವಿಷಯಕ್ಕೂ ಕೋಪಗೊಳ್ಳುವ ನಾನು ಅದೇಕೋ ಅವನ ಮುಂದೆ ಬೇಗ ಕರಗಿ ಬಿಡುವೆ.ಅವನ ಮಿಂಚಿನಂಥ ಮಾತಿನ ಮುಂದೆ ನಾನಿನ್ನೂ ಮೂಕಿಯಾಗಿದ್ದೀನಿ.ಅವನಮ್ಮ ಅವನನ್ನು ಪ್ರೀತಿಯಿಂದ ‘ಪಾಪು’ ಅಂತ ಕರೆಯೋದನ್ನ ನಾನದೆಷ್ಟೋ ಬಾರಿ ಅಣಕಿಸಿದ್ದೆ.ಆದರೆ ನಿಜ ಹೇಳಬೇಕಂದ್ರೆ ಬಾಲ್ಯದ ಆ ಕಳೆಯನ್ನು ಅವನ ಮುಖದಲ್ಲಿ ನೋಡೋಕೆ ನನಗೂ ಸಹ ತುಂಬಾ ಇಷ್ಟ.ಸಣ್ಣ ಮಗುವನ್ನು ಮುದ್ದಾಡೋ ಹಾಗೆ ಈ ದೊಡ್ಡ ಪಾಪೂನ ಮುಡ್ಡಾಡೋಣ ಅನಿಸುತ್ತೆ.
ಇಷ್ಟೆಲ್ಲಾ ಸುಮಧುರ ಭಾವನೆಗಳನ್ನು ಹುಟ್ಟಿಸಿದ,ಭವಿಷ್ಯದ ಸುಂದರ ಲೋಕವನ್ನು ನನ್ನ ಮನದಲ್ಲಿ ಚಿತ್ರಿಸಿದ ಅವನು,ಇತ್ತೀಚಿಗೇಕೋ ಮೌನಗೀತೆ ಹಾಡುತ್ತಿದ್ದಾನೆ.ಅವನು ನನ್ನೊಂದಿಗೆ ಕೊನೆಯ ಬಾರಿ ಆಡಿದ ಮಾತುಗಳು,ಹೃದಯವನ್ನಿನ್ನೂ ಹಿಂಡುತ್ತಿದೆ.ನನ್ನಿಂದೇನಾದರೂ ತಪ್ಪಾಯಿತಾ ಎಂಬ ಪ್ರಶ್ನೆಯು ಒಮ್ಮೊಮ್ಮೆ ತಲೆಯಲ್ಲಿ ಬರುವುದುಂಟು.ಆತನೇ ಪೋಷಿಸಿದ ಪ್ರೀತಿಯ ಸಸ್ಯವನ್ನು ಎಲ್ಲಿ ಚಿವುಟಿ ಹಾಕುವನೋ ಎಂಬ ಭಯವೂ ನನ್ನ ಬೆನ್ನೇರಿದೆ.
ಅವನ ಪರಿಚಯವಾಗಿ ಈಗ ಐದು ವರ್ಷ ಕಳೆದಿದೆ.ಮೊದ ಮೊದಲು ಅವನ ಜೊತೆ ಮಾತಾಡೋಕೆ,ಅವನ ಜೊತೆ ಕೂರೋಕೆ ಭಯವಾಗುತ್ತಿತ್ತು.ಆದರೆ ಈಗಲೂ ಭಯವಾಗುತ್ತೆ,ಆತ ಎಲ್ಲಿ ನನ್ನಿಂದ ದೂರವಾಗುತ್ತಾನೋ ಎಂದು ?ಎಷ್ಟೋ ಸಲ ನನ್ನೊಳಗಿರುವಾ ಅವನಿಗೆ ಹೇಳಿದ್ದುಂಟು.“ಪ್ಲೀಸ್ ಕಣೋ..ನೀನು ನನ್ನ ಮೊದಲ ‘ಸುಧೀ..”ಯಾಗೂ ಎಂದು.ಆದರೆ ಅದು ಅವನಿಗೇಕೋ ಇನ್ನೂ ಕೇಳ್ತಾನೇ ಇಲ್ಲ.ಆದು ಏನೇ ಇರಲಿ.ನನ್ನ ಒಡಲ ಭಾವನೆಗಳು ಇನ್ನೂ ಹಸಿರಾಗಿಯೇ ಇವೆ.ನನ್ನಾತ್ಮ ಈ ದೇಹವನ್ನು ಅಗಲುವವರೆಗೂ,ನಿನಗಾಗಿಯೇ ಕಾಯುತಿರುವೆ ಗೆಳೆಯ,ನೀ ಮರಳಿ ಬರುವೆಯಾ ಈ ಸಖಿಯ ಸನಿಹ ?

Wednesday, March 26, 2008

ನಿನಗಾಗಿಯೇ ಕಾಯುತಿರುವೆ ಗೆಳೆಯ


ಹಾಯ್...
ನನ್ನಿನಿಯಾ ಹೇಗಿದ್ದಿಯಾ ಕಣೋ? ಎಲ್ಲಿದ್ದಿಯಾ? ನಾನು ಯಾರೂಂತ ತಿಳಿತಾ? ನಾನು ಕಣೋ ನಿನ್ನ ಪ್ರೀತಿಯ ಹುಡುಗಿ.ನಿನ್ನನ್ನು ನೋಡಿ 6 ತಿಂಗಳುಗಳೇ ಕಳೆಯಿತು.ಒಂದೊಂದು ದಿನಾನೂ ಒಂದೊಂದು ವರ್ಷದ ಹಾಗಾಗ್ತಿದೆ.ನನ್ನ ಮನಸ್ಸಿನಲ್ಲಿರೋ ನಿನ್ನ ಫೊಟೋ ಅಸ್ಪಷ್ಟವಾಗತೊಡಗಿದ್ದರಿಂದ ಬೇಸರವಾಗ್ತಿದೆ.ಇದಕ್ಕೆಲ್ಲಾ ಕಾರಣವಾಗಿರೋ ನನ್ನ ಅಣ್ಣಂದಿರನ್ನು ಕಂಡರೆ ಅಸಹ್ಯವಾಗುತ್ತದೆ.ನಿನ್ನಿಂದ ಉಪಕಾರ ಪಡೆದುಕೊಂಡು ನಿನಗೆ ಕೃತಘ್ನತೆ ತೋರಿಸಿದ ಅವರಿಗೆ ಮನುಷ್ಯತ್ವಾನೇ ಇಲ್ಲಾ.ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಅನ್ನೋ ಜಾಯಮಾನ ಅವರದು.

ನೀನು ತುಂಬಾ ಒಳ್ಳೆಯವನು ಕಣೋ. ಮಕ್ಕಳ ಮನಸ್ಸಿನಂತಹಾ ಮುಗ್ದ ಮನಸ್ಸು ನಿನ್ನದು.ಯಾರನ್ನೂ ಬೇಗನೇ ನಂಬಿ ಬಿಡುತ್ತಿಯಾ ನೀನು.ಆದರೆ ಅವರು ಮಾತ್ರ ಕುತಂತ್ರಿಗಳಾಗುತ್ತಾರೆ ಅಲ್ವಾ ? ನಿನ್ನ ಈ ಗುಣಗಳೇ ನನಗೆ ಹಿಡಿಸಿದ್ದು. ನೀನು ಕಾಲೇಜಿನಲ್ಲಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದೆ. ಆಡಂಬರಕ್ಕೆ ಟಾಟಾ ಹೇಳಿದ್ದೆ.ಸರಳತೆ ನಿನ್ನಲ್ಲಿ ಎದ್ದು ಕಾಣುತ್ತಿತ್ತು.ಯಾವ ಹುಡ್ಗೀರನ್ನೂ ತಲೆ ಎತ್ತಿ ನೋಡುತ್ತಿರಲಿಲ್ಲ.
‘ಓ ಗುಣವಂತಾ ನೀ ನನಗಂತಾ ಬರೆದಾಯ್ತು ಭಗವಂತಾ’
ನಾನು ನಿನ್ನನ್ನು ಪ್ರೀತಿಸತೊಡಗಿದ್ದೆ.ನೀನು ನನ್ನ ಅಣ್ಣನ ಚಡ್ಡಿ ದೋಸ್ತು ಆಗಿದ್ದರಿಂದ ನಮ್ಮ ಮನೆಗೆ ಬರುತ್ತಿದ್ದೆ.ನಮ್ಮ ಮನೆಯ ಸದಸ್ಯನೆಂಬಂತಿದ್ದೆ.ಅಣ್ಣ-ನಾನೂ-ನೀನು ಒಂಥರಾ ಆತ್ಮೀಯರಾಗಿ ‘ತ್ರಿಮೂರ್ತಿ’ಗಳಂತಿದ್ದೆವು.ನೀನು ನನ್ನಲ್ಲಿ ಆತ್ಮೀಯವಾಗಿ ನಿನ್ನ ಸುಖ-ದುಃಖಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ.
ನನ್ನ ಪ್ರೀತೀನ ನಿನ್ಜೊತೆ ಹೇಳಿಕೊಳ್ಳಲು ಭಯವಾಗುತ್ತಿತ್ತು.ಆದರೂ,ನೀನು ನನ್ನ ಕಣ್ಣೋಟಗಳಿಗೊಂದು ಅರ್ಥ ಹುಡುಕಿ ನನ್ನ ಪ್ರೀತಿಯನ್ನು ಅರ್ಥೈಸಿಕೊಂಡಿದ್ದೆ.ಆಗಲೇ,‘ನಾನು ಉಂಡ ಮನೆಗೆ ಖನ್ನ ಹಾಕುವವನಲ್ಲಾ’ ಎಂದು ನನಗೆ ಬುದ್ದಿವಾದ ಹೇಳಿದ್ದೆ.ಆದರೂ ಸ್ವಾರ್ಥಿಯಾದ ನಾನು ನಿನ್ನಂತಹವನು ನನಗೆ ಬಿಟ್ಟು ಬೇರೆ ಯಾರಿಗೂ ಸಿಗಬಾರದೆಂದು ಹಠ ಹಿಡಿದು ನಿನ್ನ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದೆ.ದಿನಗರುಳಿದಂತೆ ನೀನು ಸಾಗರವೆಂಬ ಜೀವನದ ಪ್ರೀತಿಯೆಂಬ ದೋಣಿಯಲ್ಲಿ ಪಯಣಿಗನಾಗಿ ನನಗೆ ‘ಸಾಥ್’ ನೀಡಿದ್ದೆ.

ಒಬ್ಬರನ್ನೊಬ್ಬರು ನೋಡದಿದ್ದರೆ ಏನನ್ನೋ ಕಳಕೊಂಡಂತೆ ಚಡಪಡಿಸುವ ಸ್ಥಿತಿ ನಮ್ಮದಾಗಿತ್ತು.ನೀನು ನನ್ನನ್ನು ನೋಡಲಿಕ್ಕಾಗಿಯೇ ಅಣ್ಣನಲ್ಲಿ ಮಾತನಾಡುವ ನೆಪವೊಡ್ಡಿ ನಿನ್ನ ಬೈಕ್ ನಲ್ಲಿ ಸೂಪರ್ರಾಗಿ ಡ್ರೆಸ್ ಮಾಡಿಕೊಂಡು ನಮ್ಮನೆಗೆ ಬರುತ್ತಿದ್ದೆ.ನೀನು ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದೆ.
ನಿನ್ನನ್ನು ನೋಡಿದ ಕೂಡಲೇ ಮನಸ್ಸಿಗೆ ಖುಷಿಯಾಗಿ ಅಪ್ಪಿಕೊಂಡು ಮುತ್ತಿಕ್ಕೋಣಾಂತ ಅನಿಸುತ್ತಿತ್ತು.ಆದರೆ ಯಾರಾದ್ರೂ ನೋಡಿದ್ರೆ? ಭಯವಾಗುತ್ತಿತ್ತು.ನೀನು ಎಲ್ಲರ ಕಣ್ಣು ತಪ್ಪಿಸಿ ನನಗೆ ಕೊಡುತ್ತಿದ್ದ ಚಾಕಲೇಟ್ ಮದುರವಾಗಿರುತ್ತಿತ್ತು.ನೀನು ಮನೆಗೆ ಬಂದಾಗ ನನ್ನ ಅಣ್ಣಂದಿರು ನಿನ್ನ ಬೈಕ್ ನಲ್ಲಿ ಸುತ್ತಾಡುತ್ತಾ ಪೆಟ್ರೊಲ್ ಖಾಲಿ ಮಾಡಿ ಬಿಡುತ್ತಿದ್ದರು.ನಿನ್ನ ಮೊಬೈಲ್ ನಲ್ಲಿ ಕರೆನ್ಸಿ ಇದ್ದರೆ ಅದೂ ಖಾಲಿಯಾಗುತ್ತಿತ್ತು! ಆದರೂ ನೀನು ಎನೂ ಮಾತನಾಡುತ್ತಿರಲಿಲ್ಲ.ಅದೆಲ್ಲಾ ನನಗಾಗಿಯೇ ಅಲ್ಲವೇ?
ನಾನು ಎಸ್ ಎಸ್ ಎಲ್ ಸಿ ಪಾಸ್ ಮಾಡಿದ ನಂತರ ಕಾಲೇಜಿಗೆ ಕಳುಹಿಸಲ್ಲಾಂತ ಮನೆಯಲ್ಲಿ ಹೇಳಿದ್ದಕ್ಕೆ ನಾನು ಅತ್ತಿದ್ದೆ.ಇದರಿಂದ ಬೇಸರಗೊಂಡ ನೀನು ನನ್ನ ಅಪ್ಪ-ಅಮ್ಮನಲ್ಲಿ ಮಾತನಾಡಿ ಕಾಲೇಜಿನಿಂದ ಅಪ್ಲಿಕೇಶನ್ ತಂದು, ನನ್ನನ್ನು ಅಡ್ಮಿಶನ್ ಮಾಡಿಸಿ ಕಾಲೇಜಿನ ಫೀಸನ್ನೂ ಭರಿಸಿ, ಪುಸ್ತಕ,ಬ್ಯಾಗ್ ಎಲ್ಲಾ ತಂದು ಕೊಟ್ಟು ಕಾಲೇಜಿಗೆ ಕಳುಹಿಸಿದ್ದೆ.ಕಾಲೇಜಿಗೆ ಹೋಗುವಾಗ ಅಪರೂಪಕ್ಕೊಮ್ಮೆ ಬೈಕ್ ನಲ್ಲಿ ಬರುತ್ತಿದ್ದ ಬೀನು ಡ್ರಾಪ್ ಕೊಡುತ್ತೇನೆಂದು ನಿಲ್ಲಿಸುತ್ತಿದ್ದಾಗ ನಾನು ಬೇಡವೆಂದಾಗ ನೀನು ಹೊರಟರೆ ನಾನು ಅಳುತ್ತಾ ನಿಲ್ಲಿಸುತ್ತಿದ್ದೆ.
ನನ್ನ ಹುಟ್ಟು ಹಬ್ಬಾನ ಕೇಕ್ ಆರ್ಡರ್ ಮಾಡಿಸಿ, ನಿನ್ನ ಸ್ನೇಹಿತನ ಮನೆಯಲ್ಲಿ ನನ್ನಿಂದಲೇ ಕೇಕ್ ಕತ್ತರಿಸಿ ಆಚರಿಸಿದ್ದೆ.ಅದೇ ಮೊದಲಾಗಿ ನನ್ನ ಹುಟ್ಟು ಹಬ್ಬ ಆಚರಿಸಿದ್ದು.ನೀನವತ್ತು ಅಪ್ಪಿಕೊಂಡು ಕೂಟ್ಟಿದ್ದ ಮುತ್ತನ್ನು ಈಗಲೂ ನೆನಪಿಸಿಕೊಂಡರೆ ಸಮಯ ಕಳೆಯುವುದು ತಿಳಿಯೋದೇ ಇಲ್ಲಾ ! ನಿನ್ನ ಮೊಬೈಲ್ ಗೆ ನನಗೆ ನೀನು ಕರೆ ಮಾಡುವ ವರೆಗೆ ಮಿಸ್ಡ್ ಕಾಲ್ ಕೊಡುತ್ತಿದ್ದೆ.ಕಡೇ ಪಕ್ಷ ದಿನಕ್ಕೆ ಅರ್ದ ಗಂಟೆಯಾದರೂ ಮಾತನಾಡುತ್ತಿದ್ದೆ.ರಾತ್ರಿ ನಿನ್ನನ್ನು ನೆನಪಿಸದೇ ಮಲಗಿದ್ರೆ ನಿದ್ದೇನೇ ಬರುತ್ತಿರಲಿಲ್ಲ.

ಹೀಗೆ ನಿನ್ನ ಪ್ರೀತಿಯ ದೋಣಿಯಲಿ ತೇಲುತ್ತಿರುವಾಗ ‘ಖಳನಾಯಕ’ನೆಂಬಂತೆ ಪ್ರವೇಶಿಸಿದ್ದ ನನ್ನ ದೊಡ್ಡ ಅಣ್ಣ.ಆತ ನನ್ನ ನಿನ್ನ ಪ್ರೀತೀನ ತಪ್ಪಾಗಿ ಅರ್ಥೈಸಿಕೊಂಡು ರಾದ್ದಾಂತಾನೇ ಮಾಡಿದ್ದ.ನಿನ್ನನ್ನು ಅಪರಾಧಿಯೆಂಬಂತೆ ವಿಚಾರಣೆಯೂ ನಡೆಸಿದ್ದ.

ನನಗೆ ಕೊಟ್ಟ ಮಾತನ್ನು ನೀನುಳಿಸಿಕೊಂಡಿದ್ದೆ.ನೀನೇ ನನ್ನನ್ನು ಪ್ರಿತಿಸಿದ್ದೆಂದು ಹೇಳಿ ನನ್ನನ್ನು ಬಚಾವ್ ಮಾಡಿದ್ದೆ.ನಂತರದ ದಿನಗಳಲ್ಲಿ ಧರ್ಮ ಸಂಕಟದಲ್ಲಿ ಸಿಲುಕಿದ್ದರಿಂದ ನನ್ನನ್ನು ಸಂಪರ್ಕಿಸದೇ ದೂರವಾದೆ.ನನ್ನನ್ನು ಬಿಟ್ಟು ಬೇಯಾರನ್ನೂ ಮದುವೆಯಾಗಲ್ಲಾ ಎಂಬ ಮಾತನ್ನೂ ಕೊಟ್ಟಿದ್ದೆ.ಮೊದಲು ಕೊಟ್ಟಿದ್ದ ಮಾತನ್ನು ಉಳಿಸಿಕೊಂಡದ್ದರಿಂದ ಇದನ್ನೂ ಉಳಿಸಿಕೊಳ್ಳುವಿಯೆಂಬ ನಂಬಿಕೆಯಿಂದ ನಾನಿನ್ನೂ ಬದುಕಿದ್ದೇನೆ.ನಿನ್ನ ಮೇಲಿನ ಪ್ರೀತಿ ಕಡಿಮೆಯಾಗದೇ ಹೆಚ್ಚಾಗಿದೆ.ವಿರಹ ವೇದನೆ ನನ್ನನ್ನು ಕಾಡುತ್ತಿದೆ. ನೀನೆಲ್ಲೇ ಇದ್ದರೂ ಸುಖವಾಗಿರು ಎಂದು ಪ್ರಾರ್ಥಿಸುತ್ತೇನೆ.ನೀನೆಂದಿಗೂ ನನ್ನವನೇ.ಬಿಟ್ಟು ಹೋಗಬೇಡ ಗೆಳೆಯ...
ಇತೀ,
ನಿನ್ನ ಪ್ರೀತಿಯ ಹುಡುಗಿ…

Thursday, February 14, 2008

ಕೈ ಬಿಡಲಾರೆ ಗೆಳತಿ ಎಂದಿಗೂ...



ಫೋನ್ ನಲ್ಲಿ ನನ್ನ ಸ್ನೇಹಿತೆಯೆಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಾ ಆಕೆ ನನ್ನ ನಿದ್ದೆ ಕೆಡಿಸಿದ್ದಳು.ಅದು ನನ್ನ ಸ್ನೇಹಿತೆಯಲ್ಲಾ ಎಂದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.ಆದರೂ ಅದು ಯಾರಾಗಿರಬಹುದೆಂಬ ಚಿಂತೆ ನನ್ನನ್ನು ಕಾಡಿತ್ತು.ಅದೊಂದು ದಿನ ನಾನು ಇಂಟರ್ವ್ಯೂವ್ ನಲ್ಲಿ ಫೇಲ್ ಆಗಿದ್ದೆ.ಆ ಹೊತ್ತಿನಲ್ಲಿ ಆಕೆಯ ಕರೆ ಬಂದಾಗ ನನ್ನ ಚಿಂತೆ ಮತ್ತಷ್ಟು ಜಾಸ್ತಿಯಾಯಿತು.ಆ ಸಮಯದಲ್ಲಿ ನನಗೆ ಗರ ಬಡಿದಂತಾದ್ದರಿಂದ ನನ್ನ ಚಿಂತೆ ದಃಖವನ್ನೆಲ್ಲಾ ಆಕೆಯಲ್ಲಿ ಹೇಳಿ ನನ್ನೊಡನೆ ಆಟವಾಡಬೇಡವೆಂದಾಗಿ ವಿನಂತಿಸಿದ್ದೆ.ಆಕೆಯ ಮನ ಕರಗಿತು.ಕ್ಷಮಿಸುವಂತೆ ಕೇಳಿದಳು.ಕ್ಷಮಿಸುವಂತಹಾ ದೊಡ್ಡವನು ನಾನಾಗಿಲ್ಲವೆಂದು ಹೇಳಿ ಆಕೆಯ ಮನಸ್ಸಿನಲ್ಲಿ ದೊಡ್ಡವನಾದೆ !

ಅಂದಿನಿಂದ ಶುರುವಾಗಿತ್ತು ನಮ್ಮಿಬ್ಬರ ಸ್ನೇಹ.ನಾನೆಂದೂ ಕಂಡಿರದ ಆ 'ಮಲೆನಾಡಿನ ಹುಡುಗಿ'ಯ ದನಿ ನನ್ನನ್ನು ಸೆಳೆಯತೊಡಗಿತು.ಅದಾಗಲೇ ನಮ್ಮ ಸ್ನೇಹದ ಕೂಸು ಒಂದು ವರ್ಷ ಪೂರೈಸಿತ್ತು.ನಾವಿಬ್ಬರೂ ಪರಸ್ಪರ ಅರಿತುಕೊಂಡಿದ್ದೆವು.ಆಕೆಯನ್ನು ನನ್ನ ಸಂಗಾತಿಯಾಗಿ ಸ್ವೀಕರಿಸಲು ಮನಸ್ಸೊಪ್ಪಿತು.ನನ್ನಿಚ್ಛೆಯನ್ನು ವ್ಯಕ್ತಪಡಿಸಿದೆ.ಆಕೆಯೂ ಸಮ್ಮತಿಸಿದಳು.ನನಗೆ ಆಕಾಶಕ್ಕೆ ಮೂರು ಗೇಣು ಇದ್ದಷ್ಟೇ ಸಂತಸವಾಗಿತ್ತು.ಸಾಗಿದಷ್ಟು ಮುಗಿಯದ ಬದುಕೆಂಬ ಸಾಗರದ ನೌಕೆಯಲ್ಲಿ ನಾನು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾಗ ಆಕೆ ನೀಡಿದ್ದ ‘ಸಾಥ್’ ಹೊಸ ಚೈತನ್ಯವನ್ನೇ ಒದಗಿಸಿತ್ತು.ಆಕೆ ತುಂಬಿದ ಸ್ಪೂರ್ತಿಗಳಿಂದ ಇಂಟರ್ವ್ಯೂವ್ ನಲ್ಲಿ ಮೊದಲಿಗನಾಗಿ ಪಾಸಾಗಿ ಕೆಲಸ ಗಿಟ್ಟಿಸಿಕೊಂಡು ಖುಷಿ ಪಟ್ಟಿದ್ದೆ.ಹೀಗೆ ಮುಂದುವರಿಯುತ್ತಾ ನನ್ನವಳೊಂದಿಗೆ ದಿನಾಲೂ ಮೂರುಗಂಟೆಗಿಂತ ಹೆಚ್ಚಿನ ಸಮಯ ಫೋನ್ ನಲ್ಲಿ ಕಳೆಯುತ್ತಿದ್ದೆ.

ಆಕೆಯನ್ನು ನೋಡಬೇಕೆಂಬ ಉದ್ದೇಶದಿಂದ ಮಲೆನಾಡಿಗೆ ಹೆಜ್ಜೆಯಿಟ್ಟಿದ್ದೆ.ನನ್ನ ವ್ಯಕ್ತಿತ್ವವಕ್ಕೆ ತಕ್ಕುದಾದ ಸಂಗಾತಿಯನ್ನು ಕರುಣಿಸಿದ್ದಕ್ಕಾಗಿ ಭಗವಂತನ್ನ್ನು ಸ್ತುತಿಸಿದ್ದೆ.ನನ್ನ ಹುಟ್ಟುಹಬ್ಬವನ್ನು ಮೊದಲಬಾರಿ ಆಚರಿಸಿಕೊಂಡಾಗ ‘ನನಗೇನು ಗಿಫ್ಟ್ ಕೊಡುತ್ತಿಯಾ?’ ಎಂದು ಕೇಳಿದ್ದಕ್ಕೆ, ‘ನಿನ್ನ ಮಗುವನ್ನು ಹೆತ್ತುಕೊಡುವೆ’ ಎಂದಿದ್ದ ಆಕೆಯ ಬಹು ದೊಡ್ಡ ಮಾತುಗಳಿಂದ ಆಕೆ ನನ್ನ ಹೃದಯದ ಒಡತಿಯಾಗಿದ್ದಳು.

ಕಾಲಚಕ್ರ ಉರುಳಿದಂತೆ ಆಕೆಯ ಸಂಬಂದಿಯೋರ್ವಳು ‘ಶಕುನಿ’ಯಾಗಿ ಕಾಡಿ, ಮನೆಯಲ್ಲಿ ರಾದ್ದಾಂತಾನೆ ಮಾಡಿದ್ದಳು.ಆಕೆ ಮರೆಯದಿದ್ದರೆ ನನ್ನನ್ನು ಕೊಲ್ಲುವುದಾಗಿ ಆಕೆಯ ಅಪ್ಪ ಬೆದರಿಕೆ ಹಾಕಿದಾಗ, ಕತ್ತರಿಯ ನಡುವೆ ಸಿಕ್ಕಿ ಹಾಕಿಕೊಂಡ ಹಕ್ಕಿಯ ರೆಕ್ಕೆಯಂತಾಗಿ ಆಕೆ ಮರೆಯುವ ನಾಟಕವಾಡಿದಳು.ಕಾರಣ ಆಕೆಯವನಾಗಿರುವ ನನ್ನನ್ನು ಉಳಿಸಲು.ನನ್ನ ಪ್ರೀತಿಯ ‘ನಿಶಾ...’ ನಾನೆಂದಿಗೂ ನಿನ್ನವನೇ. ಈ ಜನ್ಮದಲ್ಲಿ ನಿನ್ನನ್ನಲ್ಲದೇ ಇನ್ಯಾರನ್ನೂ ತಲೆಯೆತ್ತಿ ನೋಡಲ್ಲಾ.ನಿನ್ನನ್ನೆಂದಿಗೂ ಮರೆಯಲ್ಲಾ. ನಮ್ಮೀ ಪ್ರೀತಿ ಶಾಶ್ವತ..ನೆನಪಿರಲಿ...

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ...


ಯಾವಾಗಲೂ ನನ್ನನ್ನೇ ನೋಡುತ್ತಾ, ನನ್ನ ಜೊತೆ ಮಾತನಾಡುತ್ತಾ,ನಾನೇನು ಬೈದರೂ ಜಗಳವಾಡಿದರೂ ಮನಸ್ಸಿಗೆ ಹಚ್ಚಿಕೊಳ್ಳದೇ, ನಾನು ಅತ್ತಾಗ ಅವನೂ ಅಳುತ್ತಾ,ಬೇಸರ ಪಟ್ಟಾಗ ಅವನೂ ಬೇಸರಪಡುತ್ತಾ ನನಗೆ ‘ಸಾಥ್’ ನೀಡುತ್ತಿದ್ದಾತ ಈಗ ನನ್ನ ಮುಂದಿಲ್ಲ.ಇತ್ತೀಚಿಗೆ ನಡೆದ ಬೈಕ್ ಅಫಘಾತದಲ್ಲಿ ಆತ ಇಹಲೋಕ ತ್ಯಜಿಸಿದನೆಂಬ ಸುದ್ದಿ ನನ್ನ ಅರ್ಧ ಜೀವವನ್ನೇ ಇಹಲೋಕ ತ್ಯಜಿಸಿಸಿತ್ತು!
ಆವನ ಜೊತೆ ಕಳೆದ ಕ್ಷಣಗಳೆಲ್ಲಾ ನನ್ನ ಕಣ್ಣಿಗೆ ಕಟ್ಟುತ್ತಿದೆ.ಅನೇಕ ದೇವಸ್ಥಾನ ಪಾರ್ಕನ್ನು ಕೈ-ಕೈ ಹಿಡಿದು ‘ಸಪ್ತಪದಿ’ಯೆಂದು ತಿಳಿದು ಸುತ್ತಾಡಿದ್ದು, ನನ್ನನ್ನು ನೋಡಲು ಬಿಸಿಲು-ಮಳೆ-ಗಾಳಿಯನ್ನು ಲೆಕ್ಕಿಸದೇ ಆತ ಬೈಕ್ ನಲ್ಲಿ ಬರುತ್ತಿದ್ದುದು,ಪಾರ್ಕ್ ನಲ್ಲಿ ಆತ ಕೊಟ್ಟಿದ್ದ ಪ್ರಿತಿಯ ಅಪ್ಪುಗೆಯ ಮುತ್ತು, ನನ್ನ ಗಲ್ಲವನ್ನು ಕೈಯಿಂದ ಹಿಡಿದು ಮಾತನಾಡುತ್ತಿದ್ದ ಆತನ ಮಾತುಗಳು ಕನಸಿನಲ್ಲಿ ಪುನರಾವರ್ತನೆಯಾಗಿ ಕಳೆದು ಹೋದ ಕ್ಷಣಗಳನ್ನು ನೆನಪಿಸುತ್ತದೆ.
ಆತ ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಗುತ್ತಿದ್ದುದರಿಂದ ಮನೆಯಲ್ಲಿ ಫೋನಿದ್ದರೂ ಮನೆಯವರ ಕಣ್ಣು ತಪ್ಪಿಸಿ ದಿನಾಲೂ ಕಾಯಿನ್ ಬಾಕ್ಸ್ ಗೆ ಹೋಗಿ ಫೋನ್ ಮಾಡಿ ಆತನನ್ನು ಎಬ್ಬಿಸಿ ‘ಗುಡ್ ಮಾರ್ನಿಂಗ್’ ಹೇಳುತ್ತಿದ್ದುದು ಈಗ ಬರೀ ನೆನಪಷ್ಟೇ ! ಆ ಕಾಯಿನ್ ಬಾಕ್ಸ್ ನನ್ನ ಕಣ್ಣೆದುರಿಗೆ ಬಿದ್ದಾಗ ಬಿಕ್ಕಿ-ಬಿಕ್ಕಿ ಅಳುತ್ತೇನೆ. ನಮ್ಮಿಬ್ಬರ ದಾಂಪತ್ಯ ಹೀಗೇ ಇರಬೇಕು, ನಮ್ಮ ಮಕ್ಕಳನ್ನು ಹೀಗೇ ಬೆಳೆಸಬೇಕು ಎಂದು ಕಂಡಿದ್ದ ಕನಸೆಲ್ಲಾ ಈಗ ಕನಸಾಗಿಯೇ ಉಳಿದಿದೆ. ‘ನಿನಗೆ ನನ್ನ ಮೇಲೇ ಪ್ರೀತೀನೆ ಇಲ್ಲಾ’ ಎಂದು ನಾನು ಸುಮ್ ಸುಮ್ನೆ ರೇಗಾಡುತ್ತಿದ್ದಾಗ ‘ನಾನು ಸತ್ತ ಮೇಲೆ ನಿನಗೆ ನನ್ನ ಪ್ರೀತಿ ಅರ್ಥವಾಗುತ್ತೆ’ ಅನ್ನುತ್ತಿದ್ದ ಆತನ ಮಾತು ಈಗ ನಿಜವಾಗಿದೆ.
ನನ್ನ ಪ್ರೀತಿಯ ‘ದಿನ್ನು’...ಈ ಲೋಖದಲ್ಲಿ ನಿನ್ನ ಕೈ ಹಿಡಿಯುವ ಅದೃಷ್ಟಕ್ಕೆ ಆ ಭಗವಂತ ಕಲ್ಲು ಹಾಕಿದ.ಮುಂದಿನ ಜನ್ಮದಲ್ಲಾದರೂ ನಿನ್ನವಳಾಗಿರುತ್ತೇನೆ.ನನ್ನ ನಿನ್ನ ಪ್ರೀತಿ ಅಮರ-ಶಾಶ್ವತವಾಗಿರಲಿ...

ಹೇಳದೇ ಬಂದು ಕೇಳದೇ ಹೋದವಳ ನೆನೆಯುತ...

‘ನಿಜವಾದ ಪ್ರೀತಿಗೆ ಜಯ ಸಿಗುತ್ತೆ ಅನ್ನೋದು ಶೇಕ್ಸ್ ಪಿಯರ್ ನ ನಾಟಕ ಅಥವಾ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದೆ.ನಿಜ ಜೀವನದಲ್ಲಿ ಇಲ್ಲಾಂತ ಕಾಣುತ್ತಿದೆ’.ಇದು ನನ್ನ ಬಾಯಲ್ಲಿ ಬರುವ ಮಾತುಗಳೇ ಎಂದು ನನಗೇ ಸಂಶಯವಾಗುತ್ತಿದೆ.ಕಾರಣ ನಾನೂ ಒಬ್ಬಳನ್ನು ಪ್ರೀತಿಸಿದ್ದೆ.
‘ಟೈಂ ಪಾಸ್’ ಗಾಗಿರದೇ, ಜೀವನ ಸಂಗಾತಿಯಾಗಿ ಪ್ರೀತಿಸಿದ್ದೆ.ಎಲ್ಲಾ ಹುಡುಗರಂತೆ ನಾನೆಂದೂ ಹುಡುಗಿಯರ ಹಿಂದೆ ಸುತ್ತಿದವನಲ್ಲಾ.ನಾನವಳನ್ನು ಚಿಕ್ಕಂದಿನಿಂದಲೇ ನೋಡುತ್ತಿದ್ದೆ.ಎರಡು ವರ್ಷಗಳ ಹಿಂದೆ ಅವಳ ಕಣ್ಣೋಟಗಳು ಅದಲು ಬದಲಾದಾಗ ನನಗೆ ತಿಳಿದಿತ್ತು ಆಕೆ ನನ್ನನ್ನು ಪ್ರೀತಿಸುತ್ತಿರುವಳೆಂದು.ಆ ಮಾತುಗಳು ಆಕೆಯ ಬಾಯಲ್ಲೇ ಬರಲಿ ಎಂದು ಸುಮ್ಮನಾದೆ.ಅದರ ಕರೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.ಕಾರಣ ನನಗೆ ಪ್ರೀತಿಗಿಂತ ಸ್ನೇಹ ಮುಖ್ಯ.ಅದಲ್ಲದೇ ಪ್ರೀತಿ ಪ್ರೇಮಗಳಲ್ಲಿ ನಂಬಿಕೆ ಇಲ್ಲದವ ನಾನು.
ಆ ಸುದಿನ ಬಂದೇ ಬಿಟ್ಟಿತು. ಆಕೆ ನನ್ನಲ್ಲಿ ಬಂದು ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ.ನೀನೆಂದಿಗೂ ನನ್ನವನೇ’ ಅಂದಳು. ‘ಈಗೆಲ್ಲಾ ನನಗದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಇಷ್ಟವಿಇಲ್ಲಾ’ ಎಂದು ಅವಳಿಗೆ ಬುದ್ದಿವಾದ ಹೇಳಿದೆ.ಆದರೂ ಹಠಾಮಾರಿಯಾದ ಆಕೆ ಬಿಡಲಿಲ್ಲಾ.ನನ್ನ ಮನಸ್ಸು ಕದಿಯುವಲ್ಲಿ ಯಶಸ್ವಿಯಾದಳು.ನನಗರಿವಿಲ್ಲದಂತೆ ಪ್ರೀತಿಯೆಂಬ ಕಡಲಲ್ಲಿ ಪಯಣಿಗನಾಗಿ ನಾನವಳಿಗೆ ಸಾಥ್ ನೀಡಿದ್ದೆ. ನಾನವಳನ್ನು ಮುಗ್ದ ಮನಸ್ಸಿನಿಂದ ನಿಜವಾದ ಪ್ರೀತಿಯಿಂದ ಪ್ರೀತಿಸತೊಡಗಿದೆ.ಅವಳಿಲ್ಲದೇ ನಾನಿಲ್ಲಾ ಎಂಬಂತಿದ್ದೆ.ಅವಳನ್ನು ನೋಡಡಿದ್ದರೆ ಏನನ್ನೋ ಕಳಕೊಂಡಂತೆ ಚಡಪಡಿಸುವ ಸ್ಥಿತಿ ನನ್ನದಾಗಿತ್ತು.
ಹೀಗೆ ‘ರೋಮಿಯೋ-ಜೂಲಿಯೆಟ್’ ನಂತೆ ಸಂತಸದ ಅಲೆಯಲ್ಲಿ ತೇಲುತ್ತಿದ್ದಾಗ, ಇದ್ದಕ್ಕಿದ್ದಂತೆ ಆಕೆ ನನ್ನಿಂದ ದೂರ ಸರಿಯ ತೊಡಗಿದಳು.ನನಿಗೆ ಕಾಲ್ ಮಾಡಿ ಮಾತಾಡೂವುದಂತೂ ಕನಸಿನ ಮಾತಾಯ್ತು !ನನಗ್ಯಾಕೋ ಇದು ಅರ್ಥಾನೇ ಆಗ್ಲಿಲ್ಲಾ.ನಾನೆಂದೂ ನಕಾರಾತ್ಮಕವಾಗಿ ಯೋಚಿಸಲಿಲ್ಲ.ದೌರ್ಭಾಗ್ಯವೆಂಬಂತೆ ನನ್ನ ಸಿಮ್ ಕಾರ್ಡ್ ಕಳೆದು ಹೋದಾಗ ಅವಳಿಗೆ ನನ್ನನ್ನು ಸಂಪರ್ಕಿಸಲು ತೊಂದರೆಯಾಗಬಾರದೆಂದು, ಏನೆಲ್ಲಾ ಮಾಡಿ ಅದೇ ನಂಬರಿನ ಸಿಮ್ ಕಾರ್ಡ್ ದುಬಾರಿ ಹಣ ತೆತ್ತು ತೆಗೆದಿದ್ದೆ.ಎಲ್ಲಾ ಅವಳಿಗಾಗಿ ! ಆದರೆ ಇದುವರೆಗೂ ಆಕೆಯಿಂದ ಒಂದೇ ಒಂದು ಕರೆ ನನ್ನತ್ತ ಸುಳಿದಿಲ್ಲಾ ಎಂಬುವುದು ಬೇರೆ ವಿಚಾರ.
ಅವಳು ಎಲ್ಲಾದರೂ ಕಾಣ ಸಿಗುತ್ತಾಳೆಯೇ ಎಂದು ಆಶಾವಾದಿಯಾಗಿ ಹುಡುಕುತ್ತಿದ್ದೆ.ಒಂದು ವರ್ಷವೇ ಕಳೆದಿತ್ತು ನಾನವಳನ್ನು ನೋಡದೇ.ನನ್ನ ಮನಸ್ಸಿನಲ್ಲಿರೋ ಆಕೆಯ ಫೋಟೋ ಅಸ್ಪಷ್ಟವಾಗತೊಡಗಿದ್ದರಿಂದ ಬೇಸರವಾಗಿತ್ತು.ಇತ್ತೀಚಿಗೆ ಕಾಣ ಸಿಕ್ಕಳು.ನನಗೆ ಸಂತಸ ತಡೆಯಲಾಗಲಿಲ್ಲ.ಅಪ್ಪಿಕೊಳ್ಳೋನಾಂತ ಅನಿಸಿತು. ಆದರೆ ಅನಿಸಿದ್ದೆಲ್ಲಾ ಮಾಡಕ್ಕಾಗಲ್ಲಾ ಅಲ್ವಾ...?
ಮಾತನಾಡಿಸಲು ಹತ್ತಿರ ಹೋದೆ.ನನ್ನನ್ನು ಕಂಡೂ ಕಾಣದವಳಂತೆ ಸುಮ್ಮನಿದ್ದಳು.ಬೇಸರವಾಯ್ತಾದರೂ ಸಹಿಸಿಕೊಂಡೆ.ಕೆಲದಿನಗಳ ನಂತರ ಮತ್ತೊಮ್ಮೆ ಕಾಣ ಸಿಕ್ಕಳು.ಹತ್ತಿರ ಹೋದೆ.ಅಪರಿಚಿತರಂತೆ ಅಸಹ್ಯವಾಗಿ ನಡೆಸಿಕೊಂಡಳು.ಅಂದೇ ನನಗೆ ಗೊತ್ತಾಯ್ತು ಆಕೆ ನನ್ನನ್ನು ಮರೆತಿದ್ದಾಳೆಂದು.
ನಿಸ್ವಾರ್ಥಿಯಾಗಿ ನಿಜವಾದ ಪ್ರೀತಿ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ ಕಂಡು ಮನ ಕರಗಿತು.ಇನ್ನು ಕೂತು ಅವಳನ್ನೇ ಜಪಿಸುವುದರಲ್ಲಿ ಅರ್ಥವಿಲ್ಲಾಂತ ಅರಿವಾಯಿತು.ಅದಕ್ಕಾಗಿ ಅವಳನ್ನೂ, ಆ ಸವಿ ನೆನಪುಗಳನ್ನು ಚಿವುಟಿ ಹಾಕಲು ಅದನ್ನೆಲ್ಲಾ ಕೆಟ್ಟ ಕನಸೆಂಬಂತೆ ಮರೆಯಲು ಪ್ರಯತ್ನಿಸುತ್ತಿದ್ದೇನೆ.ಆ ಸವಿ ನೆನಪುಗಳನ್ನೆಲ್ಲಾ ಮರೆಯಲು ಸಾದ್ಯವೇ...?