Friday, December 3, 2010

ಎಷ್ಟು ದಿನ ಕಾಯ್ಬೇಕು ಪುಟ್ಟಾ?


ಹಾಯ್ ಸ್ವೀಟ್ ಹಾರ್ಟ್,
ಹೀಗೆ ಕರೆದ್ರೆ ನಿಂಗೆ ಕೋಪ ಬರುತ್ತೆ ಅನ್ನೋದು ನಂಗೆ ಗೊತ್ತು. ಅದೇ ಕೋಪದಲ್ಲಿ ಕಣ್ಣು ದೊಡ್ಡದು ಮಾಡಿ ನನ್ನತ್ತ ತಿರುಗಿ ನೋಡಿ ಮನಸ್ಸಲ್ಲೆ ನಗುತ್ತಿ ಅಲ್ವಾ ಅವಾಗ ನೀನು ಚಂದ ಕಾಣ್ತಿ ಕಣೆ. ಅದಕ್ಕೆ ಕರೆದೆ ಸ್ವೀಟ್ ಹಾಹಾರ್ಟ್ ಅಂತ. ಪುಟ್ಟ ಮತ್ತೆ ಹೇಗಿದ್ದಿಯಾ? ಮೊನ್ನೆ ನಿನ್ ಮನೆಗೆ ನನ್ನ ಕರೆದಿದ್ದೆ ಅಲ್ವಾ? ಅದೇ ಫಂಕ್ಷನ್ ಗೆ. ಖುಷಿಯಿಂದ ಬಂದಿದ್ದೆ ಕಣೆ ನಿನ್ನ ನೋಡಲು. ಜೊತೆಗೆ ಪುಟ್ಟ ಕಾಣಿಕೆಯನ್ನೂ ತಂದಿದ್ದೆ. ಸಿಂಗಲ್ ಆಗಿ ಬೈಕ್ ರೈಡ್ ಮಾಡಿಕೊಂಡು ಅಷ್ಟು ದೂರ ಬರುವಾಗ ಸುಸ್ತಾಗಿ ಹೋಗಿತ್ತು. ಆದರೂ ನಿನ್ನ ನೋಡುವ ತವಕಕ್ಕೆ ಮನಸ್ಸು ತುದಿಗಾಲಲ್ಲಿ ನಿಂತಿತ್ತು. ಆದರೂ ನೀನು, ನಿನ್ನ ಮನೆ ಸದಸ್ಯರು ಎಲ್ಲ ನನ್ಜೊತೆ ಮಾತಾಡ್ತಾರಾ ಅಂತ ಅಂಜಿಕೆಯೂ ಇತ್ತು.
ಮನೆಗೆ ಬಂದು ನಿನ್ನ ಅಣ್ಣನ್ ಕೈಯ್ಯಲ್ಲಿ ಗಿಫ್ಟ್ ಕೊಟ್ಟು ಸೋಫಾದಲ್ಲಿ ಕುಳಿತುಕೊಂಡೆ ನೋಡು. ಆವಾಗ್ಲೆ ಹುಡುಕುತ್ತಿತ್ತು ನನ್ನ ಕಣ್ಣುಗಳು ನಿನ್ನನ್ನು. ನಿನ್ನ ಅಣ್ಣ, ಮಾವ ಎಲ್ಲರೂ ನನ್ ಜೊತೆ ಮಾತಾಡುತ್ತದ್ದರೆ ಪರ್ಡಾ ಹಾಕಿದ ಬಾಗಿಲನ್ನೂ ದಾಟಿ ನನ್ನ ಕಣ್ಣುಗಳು ನಿನ್ನನ್ನು ಅರಸುತ್ತಿದ್ದವು. ಆಗ್ಲೆ ಬಂದೆ ನೋಡು ನೀನಲ್ಲಿ. ನಿನ್ನ ಆ ಖುಷಿಯ ತುಂಟ ನಗೆ ನೋಡಿ ಅದೆಷ್ಟು ಖುಷಿಯಾಯ್ತು ಗೊತ್ತಾ? ಅವತ್ತು ನಿನ್ನ ಜೋರಾಗಿ ಅಪ್ಪಿಕೊಂಡಾಗ ಆದಷ್ಟು ಖುಷಿಯಾಗಿತ್ತು ನೋಡು. ನಿನ್ನನ್ನು ಹಾಗೇ ನೋಡ್ತಾ ಇರಬೇಕು ಎಂದೆನಿಸಿತ್ತು. ಆದರೂ ಮನದಲ್ಲೇಕೋ ಒಂದು ತಳಮಳ ನೀನು ನನ್ನ ಬಾಳ ಸಂಗಾತಿ ಆಗ್ತಿಯಾ ಇಲ್ವಾ ಅಂತ.
ನೀನು ಇದು ನನ್ ಅಮ್ಮ, ಅತ್ತೆ, ಅಜ್ಜಿ ಎಂದು ಎಲ್ಲರನ್ನೂ ಪರಿಚಯಿಸಿದಾಗ ನಿಜ್ವಾಗ್ಲೂ ಖುಷಿಯಾಗಿತ್ತು. ನಿನ್ ತಂಗಿ ಬಂದು ಹಾಯ್ ಹೇಳಿದಾಗ ನಾದಿನಿ ಬಲು ಚೂಟಿ ಅಂದ್ಕೊಂಡೆ. ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಟ್ಟು ಮನೆ ಕಡೆ ಪ್ರಯಾಣ ಬೆಳೆಸಿದಾಗ ಮನಸ್ಸು ಭಾರವಾಗಿತ್ತು. ಹಾಗೆ ಬರುತ್ತಿರುವಾಗ ನನ್ ಮೊಬೈಲ್ ರಿಂಗೆಣಿಸಿದ್ದು ಕೇಳಿತು. ನೋಡಿದರೆ ನಿನ್ ತಂಗಿ ನಂಬರ್. ಹೇ... ನಿಂಗೊಂದು ಹುಡುಗಿ ನೋಡಿದ್ದಾರೆ ಕಣೋ ನಮ್ ಅತ್ತೆಯರು ಎಂದು ಮಾತು ಶುರು ಮಾಡಿದ್ದಳು. ಹೌದಾ ಯಾರು ಆ ಹುಡುಗಿ ಎಂದೆ. ಅದೇ ನನ್ ದೀದಿ ಎಂದಾಗ, ನನ್ನ ತುಟಿಯಂಚಿನಲ್ಲಿ ನಗುವಿತ್ತು. ಅದೆಷ್ಟು ಖುಷಿಪಟ್ಟೆ ಎಂದರೆ ಬೈಕ್ ನಿಲ್ಲಿಸಿ ಅಲ್ಲೇ ಕುಣಿಯಬೇಕು ಎನಿಸಿತು. ಆದರೂ ಹೌದಾ ಎಂದು ಮಾತ್ರ ಅವಳಲ್ಲಿ ಹೇಳಿ ಫೋನಿಟ್ಟೆ.
ಪುಟ್ಟಾ ಅವಳು ನಿಜಕ್ಕೂ ಹೇಳಿದ್ದಾ ಅಥವಾ ನಿನ್ ಅತ್ತೆಯರು ತಮಾಷೆ ಮಾಡಿದ್ದ ಅದೆಲ್ಲಾ ನನಗೆ ಗೊತ್ತಿಲ್ಲ. ಆದರೆ ಅದು ನಿಜವಾಗ್ಲಿ ಅಂತ ಮಾತ್ರ ಆಶಿಸ್ತೇನೆ. ನಿನ್ ಜೊತೆ ನನ್ ಇಡೀ ಜೀವನ ಕಳೆಯುವುದಕ್ಕಿಂತ ದೊಡ್ಡ ಖುಷಿ ನನಗೆ ಬೇರೆ ಯಾವುದೂ ಇಲ್ಲ. ನಿನ್ ತೊಡೆ ಮೇಲೆ ತಲೆಯಿಟ್ಟು ಮಲಗಬೇಕು. ನಿನ್ ತುಟಿಗೆ ತುಟಿಯಿಟ್ಟು ಈ ಜಗವನ್ನೇ ಮರಿಬೇಕು ಕಣೇ. ಪ್ರತೀ ದಿನ ನಾವಿಬ್ಬರೂ ಲೈವ್ ಎಟ್ ಫಸ್ಟ್ ಸೈಟ್ ಆದವರಂತಿರಬೇಕು ಕಣೇ. ಪ್ಲೀಸ್ ಬಾ ನನ್ನ ಜೀವನ ಸಂಗಾತಿಯಾಗಿ. ನಿನಗಾಗಿ ಕಾಯುತ್ತಿರುತ್ತೇನೆ. ಆ ದಿನ ಬೇಗ ಬರಲಿ. ಬರ್ತಿ ಅಲ್ವಾ ಪುಟ್ಟಾ? ಬರ್ಲಾ...
ಇತೀ ನಿನ್ನ ಪ್ರೀತಿಯ,
ಹುಚ್ಚು ಹುಡುಗ

Saturday, May 8, 2010

ನೀ ಬರುವ ದಾರಿಯಲಿ....

ಪ್ರೀತಿ ಏಕೆ ಭೂಮಿ ಮೇಲಿದೆ? ಇದು ನನ್ನವಳು ನನ್ನನ್ನು ಮೊದಲ ಬಾರಿ ಭೇಟಿಯಾದಾಗ ಕೇಳಿದ ಪ್ರಶ್ನೆ. ಬಹುಷಃ ನಾನವಳನ್ನು ಪ್ರೀತಿಸುವುದಕ್ಕಾಗಿಯೇ ಪ್ರೀತಿ ಈ ಭೂಮಿ ಮೇಲಿರಬಹುದು.
ಮಲೆನಾಡು ಕಾಫಿಗೆ ಹೆಸರುವಾಸಿ. ಜೊತೆಗೆ ಮಲೆನಾಡ ಚಳಿ ಎಂದರೆ ಬೆಚ್ಚಗಿನ ಭಾವ ಮನದಲ್ಲಿ ಮೂಡುತ್ತದೆ. ಚಳಿ ಜೊತೆಗೆ ಬೆಚ್ಚಗಿನ ಕಾಫಿ ಹೀರೋದೆಂದರೆ ನನಗೆ ಪಂಚಪ್ರಾಣ. ನನ್ನವಳೂ ಮಲೆನಾಡಿವಳು. ಮಲೆನಾಡಿನ ಮಳೆ ಬೀಡಿನ ಆಕೆ ನನ್ನ ಮನದಲ್ಲಿ ಮನೆ ಮಾಡಿ ನಾಲ್ಕು ವರ್ಷಗಳೇ ಕಳೆದಿದೆ. ನನ್ನ ಈ ಬ್ಯೂಸಿ ಲೈಫ್ನಲ್ಲಿ ಆಕೆ ಜೊತೆಗೆ ಗಂಟೆಗಟ್ಟಲೇ ಫೋನ್ನಲ್ಲೆ ಪ್ರೇಮ ನಿವೇದನೆ ಮಾಡುತ್ತೇನಾದರೂ ಆಕೆಯೊಂದಿಗೆ ಬೆರೆಯುವ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಖುಲ್ಲಾಂ ಖುಲ್ಲಾಂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿರುವ ನಮ್ಮಂತಹಾ ಪ್ರೇಮಿಗಳ ಪರಿಸ್ಥಿತಿಯೂ ಇದೆ.
ಅಂದು ನನಗೆ ರಜಾ ದಿನ. ವೀಕೆಂಡ್ ಬೇರೆ. ನಾಳೆ ನಮ್ಮಿಬ್ಬರ ಭೇಟಿ ಎಂದು ಮೇಘ ಸಂದೇಶವೂ ನನ್ನ 'ನಿಶಾ'ಚರಿಯಿಂದ ಬಂದಿತ್ತು. ಮುಂಚಿನ ದಿನ ಆಫೀಸಿಂದ ಬಂದವನೇ ನಾಳೆಗಾಗಿ ತಯಾರಾಗತೊಡಗಿದೆ. ಬೆಳಿಗ್ಗೆ 8 ಗಂಟೆಯಾದರೂ ಬೆಡ್ನಿಂದ ಏಳದ ನಾನು ಅಂದು ಮಾತ್ರ 4 ಗಂಟೆಗೆ ಎದ್ದು ಕುಳಿತಿದ್ದೆ. ನನ್ನ ಮನದೊಡತಿಯನ್ನು ಭೇಟಿಯಾಗುವ ತವಕದಿಂದ ಮುಂಜಾವಿನಲ್ಲೇ ನನ್ನ ಪ್ರೀತಿಯ ಬೈಕ್ ಏರಿ ಪ್ರೇಮಯಾನದ ಮೊದಲ ಹೆಜ್ಜೆ ಇಟ್ಟೆ. ಚಾರ್ಮಾಡಿ ಘಾಟ್ ನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಾ ಮೊದಲ ಬಾರಿಗೆ ಸೂರ್ಯೋಡ್ಯ ಕಂಡೆ! ನಾನು ಮಲೆನಾಡ ಗಡಿ ತಲುಪಿದಾಗ ಮಂಜು ಈಗಷ್ಟೆ ತಿಳಿಯಾಗುತ್ತಿತ್ತು.
ರತ್ನಗಿರಿ ಬೋರೆಗೆ ಹೋಗಿ ನನ್ನವಳವಳ ಗುಂಗಿನಲ್ಲೆ ಸಮಯ ಕಳೆಯತೊಡಗಿದೆ. ಜೀವನದಲ್ಲಿ ಯಾವ ಕ್ಷಣ ಗಳಿಗೆಗೆ ಬೇಕಾದ್ರೂ ಕಾಯಬಹುದು. ಆದರೆ ಪ್ರೀಯತಮೆಗಾಗಿ ಒಂದು ನಿಮಿಷ ಕಾಯುವುದು ಎಂದರೆ ಅಬ್ಬಬ್ಬಾ ಬಹಳ ಕಷ್ಟ. ಒಂದು ನಿಮಿಷವೂ ಒಂದು ದಿನದ ರೀತಿ ಆಗುವಾಗ ಅದು ಸಹಜ.
ನೀರಿನಲ್ಲಿ ಮೀನು ಮೇಲೆ ಬರುವುದನ್ನೇ ಕಾದು ಕುಳಿತ ಪಕ್ಷಿಯಂತಾಗಿತ್ತು ನನ್ನ ಸ್ಥಿತಿ. ಅತ್ತಿತ್ತ ಕಣ್ಣಾಡಿಸುತ್ತಾ ಅವಳನ್ನು ಹುಡುಕತೊಡಗಿದೆ. ಅಂತೂ ಬಂದೇ ಬಿಟ್ಟಳು ನನ್ನವಳು. ಅವಳಿಗಾಗಿ ಕಾದಿದ್ದ ಆಯಾಸವೆಲ್ಲಾ ಅವಳ ಮೊಗದಲ್ಲಿ ಮೂಡಿದ ಸಂತಸದ ನಗುವಿನಿಂದ ಮಾಯವಾಗಿ ಹೋಯ್ತು. ಆಕೆ ತೊಟ್ಟಿದ್ದ ಗುಲಾಬಿ ಬಣ್ಣದ ಉಡುಪು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿತು. ತಭ್ಬಿಕೊಳ್ಳೋ ಮನಸಾಯಿತು. ಆದರೆ ಇದು ಪಾರ್ಕ್ ಎಂದು ಮನದಲ್ಲಿ ಎಚ್ಚರಿಕೆ ಮೂಡಿದ್ದರಿಂದ ಸುಮ್ಮನಾದೆ. ಆಕೆಯ ಕೈ ಹಿಡಿದು ಸಪ್ತಪದಿ ತುಳಿದಂತೆ ಆ ಉದ್ಯಾನವನದೊಳಗೆ ಸುತ್ತಾಡಿದೆ. ಅವಳು ಗಟ್ಟಿಯಾಗಿ ಕೈ ಹಿಡಿದಿದ್ದು ಜೀವನಪೂರ್ತಿ ನಿಂಜೊತೆಗೇನೇ ಹೀಗೇ ಹೆಜ್ಜೆ ಹಾಕುತ್ತೇನೆ ಎಂಬಂತಿತ್ತು.
ಅಲ್ಲೇ ಸುತ್ತಾಡುತ್ತಾ ಮನಸಿನ ಪಿಸು ಮಾತುಗಳನ್ನು ಹಂಚಿಕೊಳ್ಳುತ್ತಿದ್ದ ನಮಗೆ ಸಮಯದ ಪರಿವೇ ಇರಲಿಲ್ಲ. ಆಕೆ ನನ್ನಲ್ಲೊಂದು ಮಾತು ಕೇಳಿದಳು. ನನಗೆ ನಿನ್ನ ಜೊತೆ ಬೈಕ್ ನಲ್ಲಿ ತಬ್ಬಿಕೊಂಡು ಒಂದು ರೈಡ್ ಹೋಗಬೇಕು ಎಂದು ಆಕೆ ಹೇಳಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಆಕೆ ನನ್ನಲ್ಲಿ ಕೇಳಿದ್ದೇ ಪ್ರಥಮ ಬಾರಿಯಾದ್ದರಿಂದ ಇಲ್ಲವೆನ್ನಲು ಮನಸೊಪ್ಪಲಿಲ್ಲ. ಆ ಚಳಿಯ ವಾತಾವರಣದಲ್ಲಿ ಆಕೆಯ ಬೆಚ್ಚಗಿನ ಅಪ್ಪುಗೆಯ್ ಜೊತೆ ರೌಂಡ್ ಹೊರಟ ನನಗೆ ಭೂಮಿಯಲ್ಲಿದ್ದೇನೆ ಎಂದೆನಿಸಲೇ ಇಲ್ಲ. ಬಾಬಾ ಬುಡಾನ್ ಗಿರಿ ತಿರುವಿನಲ್ಲಿ ಆಕೆಯ ಅಪ್ಪುಗೆಯ ಸವಿಯೊಂದಿಗೆ ರೈಡ್ ಮಾಡಿದ್ದು ನಾನೆಂದೂ ಮರೆಯಲು ಸಾಧ್ಯವಿಲ್ಲ.
ಸಮಯ ನಮ್ಮನ್ನು ಬಿಟ್ಟು ದೂರ ಹೋಗಿತ್ತು. ಸೂರ್ಯ ಆಗ ನೆತ್ತಿಯ ಮೇಲಿದ್ದ. ನಮ್ಮಿಬ್ಬರ ವಿರಹದ ವಿದಾಯದ ಸಮಯ ಬಂದಿತ್ತು. ಯಾಕೋ ಮನಸ್ಸು ಭಾರವಾಯಿತು. ಇನ್ನೂ ಸ್ವಲ್ಪ ಹೊತ್ತು ಇರೋಣವೆಂದರೆ ಕಷ್ಟ. ಆಕೆಯನ್ನು ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟು ನನ್ನೂರ ದಾರಿ ಹಿಡಿಯುವುದು ಅನಿವಾರ್ಯವಾಯ್ತು. ಆಕೆಯಿಂದ ಬೀಳ್ಕೊಟ್ಟು ಮುಂದಿನ ಭೇಟಿಗಾಗಿ ಕಾಯುತ್ತಿದ್ದೇನೆ. ಮನೆಗೆ ಬಂದಾಗ ನನ್ನ ಭೇಟಿಯ ವಿಚಾರ ಅಮ್ಮನಿಗೆ ನನ್ನ ಆಪ್ತಮಿತ್ರನಿಂದ ತಿಳಿದಿತ್ತು. ಮನಸ್ಸಿಗೇಕೋ ದುಗುಡವೆನಿಸಿತು. ಆದರೆ ಈ ಬಾರಿ ಮಾತ್ರ ನಾನು ಗೆದ್ದಿದ್ದೆ. ನನ್ನ ಅಮ್ಮ ಗ್ರೀನ್ ಸಿಗ್ನಲ್ ನೀಡಿದ್ದರು. ನನ್ನ ಸೊಸೆಯನ್ನು ಕ್ರ್ಕೊಂಡು ಬಾರೋ ನನಗೆ ಮಾತಾಡ್ಬೇಕು ಎಂದಾಗ ಇದು ನಿಜಾನ ಎಂದು ಒಮ್ಮೆ ಕೈಯನ್ನು ಚಿವುಟಿ ನೋಡಿದೆ! ಈಗ ಏನಿದ್ದರೂ ನನ್ನವಳು ಮನೆಗೆ ಬರುವುದು ಮಾತ್ರ ಬಾಕಿ. ಆಕೆಗಾಗಿ ಜೀವನ ಪೂರ್ತಿ ಬೇಕಾದರೂ ಕಾಯುತ್ತಾ ಒಂಟಿ ಕಾಲಿನಲ್ಲಿ ನಿಂತು ಕಾಯಲು ನಾನು ಸಿದ್ಧ. ಆಕೆ ಬರುವ ಹಾದಿ ತುಂಬಾ ಹೂದಳ ಹರಿಸಿ ಕಾಯುತ್ತಿದ್ದೇನೆ...

Saturday, January 16, 2010

I Love You ಅಂತ ಹೇಳೋ....


ಹಾಯ್ ಚಿನ್ನಾ....
ನನ್ ಮೇಲೆ ಕೋಪಾನ? ನನ್ನ ನಂಗೇ ಅರ್ಥ ಮಾಡ್ಕೋಳ್ಳೋಕೆ ಆಗಿಲ್ಲ. ಇನ್ನು ನೀನು ಹೇಗೆ ಅರ್ಥ ಮಾಡ್ಕೋತಿಯ? ನನ್ನ ವರ್ತನೆ ನಂಗೇ ಇಷ್ಟ ಆಗ್ಲಿಲ್ಲ ಕಣೋ... ಆದ್ರೆ ಏನ್ ಮಾಡ್ಲೋ ಸಂದರ್ಭಕ್ಕೆ ತಕ್ಕಂತೆ ವರ್ತಿಸೋಕೆ ನಂಗೆ ಬರಲ್ಲ. Please ಚಿನ್ನ, ನನ್ ಮೇಲೆ ಕೋಪ ಮಾಡ್ಕೋಬೇಡ. I really love you darling...
ನೀನು ನನ್ನ ಎಷ್ಟು ಬೇಕಾದ್ರೂ ತಮಾಷೆ ಮಾಡು. ಆದ್ರೆ ಬೇರೆಯವರ ಮುಂದೆ ಮಾತ್ರ ತಮಾಷೆ ಮಾಡ್ಬೇಡ Please. ನಿಂಗೆ ತುಂಬಾ ಬೇಜಾರಾಗಿದೆ ಅಂತ ನಂಗೊತ್ತು. ಆದ್ರೆ ನಾನು ಒಂದು ಮಾತು ಹೇಳ್ಳಾ? ನಂಗೆ ಯಾರಿಗೂ ಹೊರೆಯಾಗೋಕೆ / ಕಷ್ಟ ಕೊಡೋಕೆ ಇಷ್ಟ ಇಲ್ಲ. ನನ್ ಜೊತೆ ಬಾಳೋದು ತುಂಬಾ ಕಷ್ಟ ಇದೆ ಅಂದೆಯಲ್ಲಾ? ಅದು ನೀನು ತಮಾಷೆಗೆ ಅಂದಿರಬಹುದು. ಆದರೆ ಆ ಮಾತು ನಿಜವಾಗ್ಲೂ ನಂಗೆ ತುಂಬಾನೇ hurt ಮಾಡಿದೆ. ಅದಕ್ಕೆ ನಾನು ನಿಂಗೆ ಹೇಳದೇ ಕೋಪಿಸಿಕೊಂಡು ಬಂದಿದ್ದು. Sorry......
ಕೋಪ ಮಾಡ್ಕೊಂಡು ಬಂದಿದ್ದೇನೋ ನಿಜ. ಆದ್ರೆ ಬರಬೇಕಾದ್ರೆ ನನ್ ಮನಸ್ಸು, ನೀನು ನಂಜೊತೆ ಬಂದ್ರೆ ಸಾಕು ಅಂತ ಹೇಳುತ್ತಿತ್ತು. ನನ್ನ ಹಿಂದೆ ನೀನಿರೋದನ್ನು ನೋಡಿ ಎಷ್ಟು ಖುಷಿಯಾಯ್ತು ಗೊತ್ತ? ಓಡ್ ಬಂದು ನಿನ್ನ ತಬ್ಕೋಬೇಕು ಅಂತ ಅನಿಸ್ತು. ಆದ್ರೂ ನಾನು ನಿನ್ನ ಜೊತೆ ಮಾತಾಡಲ್ಲ ಅಂದೆ. ನಿಜ ಹೇಳ್ಳ? ನಂಗೆ ನಿನ್ನ ನೋಯಿಸ್ಬೇಕು ಅನ್ನೋ ಉದ್ದೇಶ ಇಲ್ಲ ಕಣೋ... ಆದ್ರೆ ಏನ್ ಮಾಡ್ಲಿ? ನಿನ್ನ ವರ್ತನೆ, ಮಾತು, ನಂಗೇ ಒಂದೊಂದು ಸಾರಿ ಕೋಪ ತರಿಸುತ್ತೆ.
Sorry...... Sorry...... Sorry...... ಇನ್ನು ಮುಂದೆ ನನ್ನ ನಾನೇ ತಿದ್ದಿಕೊಳ್ಳೋಕೆ try ಮಾಡ್ತೇನೆ. ಒಂದು ಮಾತು ಹೇಳ್ಳ? ನಿನಗೆ ನನ್ನ ಮೇಲೆ ಕೋಪ ಬಂದ್ರೆ Please ಬೈದುಬಿಡು. ಆಗ ನನ್ನ ತಪ್ಪೇನು ಎಂದು ನನಗೆ ಅರ್ಥ ಆಗುತ್ತೆ. ಅದು ಬಿಟ್ಟು ನಾನು ಏನ್ ಮಾಡಿದ್ರೂ ನೀನೇ ಸೋಲ್ತಿದ್ರೆ ಏನು ಚಂದ ಹೇಳು? ನನ್ನೂ ಸೋಲೋಕೆ ಬಿಡು. ಆಗ ಸೋಲು ಎಂದರೇನು ಎಂದು ನನಗೂ ಅರ್ಥ ಆಗುತ್ತೆ.
ನಂಗೊತ್ತು ಕಣೋ ನನ್ನಿಂದ ನೀನು ತುಂಬಾನೇ ಕಷ್ಟ ಅನುಭವಿಸುತ್ತಿದ್ದಿಯ ಅಂತ. ಈಗ ಹೇಳ್ತಿದ್ದೀನಿ ಕೇಳು ನೀನು ನಿಂಗೆ ಹೇಗ್ ಬೇಕೋ ಹಾಗಿರು. ನಾನು ನಿನ್ನವಳಾಗುವ ಮುಂಚೆ ಯಾವ ತರ ಸ್ನೇಹಿತರ ಜೊತೆ ಬೆರೆಯುತ್ತಿದ್ದಿಯೋ ಹಾಗೇ ಬೆರೆಯುತ್ತಿರು. ನಾನ್ಯಾವತ್ತೂ ನನ್ ಜೊತೆ ಮಾತ್ನಾಡಿಲ್ಲ ಅಂತಾಗಲಿ, ನನ್ನ neglect ಮಾಡ್ತಿದ್ದಿಯಾ ಅಂತಾಗ್ಲಿ ನಿನ್ ಜೊತೆ ಕೋಪ ಮಾಡ್ಕೊಳೋಲ್ಲ. ಸರೀನಾ?
ನಿಂಗೇನು ಇಷ್ಟಾಂತ ನೀನು ಯಾವತ್ತೂ ನನ್ನಲ್ಲಿ ಕೇಳುತ್ತಿರುತ್ತೀ ಅಲ್ವಾ? ಈಗ ಹೇಳುತ್ತಿದ್ದೇನೆ ಕೇಳು. ಯಾವಾಗ್ಲೂ ನಾವಿಬ್ಬರೂ I Love You ಹೇಳ್ತಾನೇ ಇರ್ಬೇಕು. ನಾನು ಬೆಳಿಗ್ಗೆ ಎದ್ದ ಕೂಡ್ಲೇ ನಿನ್ನ ಮುಖ ನೋಡಿ ನಿಂಗೊತ್ತು ಸಿಹಿ ಮುತ್ತು ಕೊಡ್ಬೇಕು. ನಿನ್ನ ಎಬ್ಬಿಸಿ ಬ್ರೆಶ್ ಮಾಡೋಕೆ ಕಳಿಸ್ಬೇಕು. ನಾನೇ ನಿನ್ನ ಮುಖ ತೊಳಿಬೇಕು. ನಿನ್ನಿಷ್ಟದ ಬ್ರೇಕ್ಫಾಸ್ಟ್ ಮಾಡಿ ನನ್ನ ಕೈಯ್ಯಾರೆ ನಿನಗೆ ತಿನ್ನಿಸಬೇಕು. ನಿನ್ನ ಕೈಯಿಂದ ನಾನು ತಿನ್ಬೇಕು. ನಾವಿಬ್ರೂ ಒಟ್ಟಿಗೆ ಆಫೀಸ್ ಗೆ ಹೋಗ್ಬೇಕು. ಪ್ರತಿ ದಿನ, ಪ್ರತಿ ಕ್ಷಣ ಒಳ್ಳೆ ಸ್ನೇಹಿತರಂತೆ, ಹೊಸ ಪ್ರೇಮಿಗಳಂತೆ ಇರಬೇಕು. ಕೆಲಸ ಮುಗಿಸಿ ಜೊತೆಯಾಗಿಯೇ ಮನೆಗೆ ಬರಬೇಕು. ಯಾವತ್ತೂ ನಾನು ನಿನಗಿಷ್ಟವಾದ ಅಡುಗೆಯನ್ನೇ ಮಾಡೋದು. ನಾನು ಯಾವತ್ತೂ ನಿನ್ನ ಬಾಹುಗಳಲ್ಲಿ ಬಂಧಿಯಾಗಿರಬೇಕು. ನಮ್ಮಿಬ್ಬರ ಮಧ್ಯೆ ಗಾಳಿ ಹೋಗೋಕೂ ಜಾಗ ಇರ್ಬಾರ್ದು.. ಆ ಥರ ನಿನ್ನ ತಬ್ಕೋಬೇಕು. ನಿನ್ನ ಎದೆ ಮೇಲೆ ನಾನು ಮಲಗ್ಬೇಕು ಕಣೋ. ನೀನು ಏನು ಬೇಕಾದ್ರೂ ಮಾಡು. ಆದ್ರೆ ನಿನ್ನ ಪ್ರೀತಿ ಮಾತ್ರ ಯಾವತ್ತೂ ಬದಲಾಗಬಾರದು. ನಿನ್ನ ಪ್ರೀತೀಲಿ ನಾನೆಲ್ಲಾ ನೋವುಗಳನ್ನೂ ಮರಿಬೇಕು ಕಣೋ.
ಅಯ್ಯೋ ಎಲ್ಲೆಲ್ಲಿಗೋ ಹೋದೆ ಅನ್ಸುತ್ತೆ. ಎಲ್ಲಾನೂ ಈಗ್ಲೇ ಹೇಳಿದ್ರೆ ನಿಂಗೆ ಮುಂದೆ ಬೋರಾಗುತ್ತೆ! ನಾನು ಮುಂದೆ ಏನು ಮಾಡ್ತೇನೆ ಅನ್ನೋದನ್ನು wait and see chinna.
ಪುನಃ ಹೇಳುತ್ತಿದ್ದೇನೆ. ನನ್ನಿಂದ ನಿನಗೆ ತುಂಬಾ ಬೇಜಾರಾಗಿದ್ರೆ Please ಬೈದುಬಿಡು. ಅದು ಬಿಟ್ಟು ನನ್ನನ್ನೇ support ಮಾಡ್ಬೇಡ. ನೀನಾಗಿ ಸೋಲ್ಬೇಡ. ನನ್ನೂ ಸೋಲೋಕೆ ಬಿಡು. ಇಲ್ಲೀವರೆಗೆ ನಾನು ಮಾಡಿದ ಬೇಸರಗಳನ್ನೆಲ್ಲಾ ಬದಿಗೊತ್ತಿ ನನ್ನನ್ನು ಮನಸಾರೆ ಕ್ಷಮಿಸಿ I Love You ಅಂತ ಹೇಳೋ....
Your sweet heart