Friday, August 22, 2008

ಕಾಲ ಮಿಂಚಿ ಹೋದಾಗ

ಇತ್ತೀಚಿಗೆ ನನ್ನ ಮೊಬೈಲ್ ಗೊಂದು ಎಸ್ ಎಂ ಎಸ್ ಬಂದಿತ್ತು.ಅದು ಹೀಗಿತ್ತು.ಒಬ್ಬ ಹುಡುಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ.ವೈದ್ಯರ ಪ್ರಕಾರ ಆತ ಇನ್ನು ಕೇವಲ ಒಂದು ತಿಂಗಳ ಕಾಲ ಬದುಕುವವನಿದ್ದ.ಮನೆ ಪಕ್ಕದ ಸಿ ಡಿ ಸೆಂಟರ್ ನಲ್ಲಿದ್ದ ಹುಡುಗಿಯೋರ್ವಳನ್ನು ತುಂಬಾ ಇಷ್ಟಪಟ್ಟಿದ್ದ.ಆದರೆ ತನ್ನ ಪ್ರೀತಿಯನ್ನು ಆಕೆಯೊಂದಿಗೆ ಹೇಳಿಕೊಳ್ಳಲಾಗದೆ ಕೊರಗುತ್ತಿದ್ದ.ಪ್ರತಿ ದಿನ ಆಕೆಯೊಂದಿಗೆ ಮಾತನಾಡುವ ಸಲುವಾಗಿ ಆಕೆ ಕೆಲಸ ಮಾಡುವ ಸಿ ಡಿ ಸೆಂಟರ್ ಗೆ ಹೋಗುತ್ತಿದ್ದ.ಹೀಗೆ ಒಂದು ತಿಂಗಳ ನಂತರ ಆತ ಇಹಲೋಕ ತ್ಯಜಿಸಿದ.ಪ್ರತಿ ದಿನ ಬರುತ್ತಿದ್ದ ಹುಡುಗ ಇತ್ತೀಚಿಗೇಕೆ ಕಾಣುತ್ತಿಲ್ಲ ಎಂಬ ಚಿಂತೆಯಿಂದ ಈ ಹುಡುಗಿ ಆತನ ಮನೆಗೆ ಹೋದಳು.
ಅವನ ತಾಯಿಯಲ್ಲಿ ವಿಚಾರಿಸಿದಾಗ ಸಾವಿನ ಸುದ್ದಿ ತಿಳಿಯಿತು.ಈಕೆಯನ್ನೇಕೋ ಕಂಡು ಮರುಗಿದ ಅವನಮ್ಮ ಆತನ ರೂಮಿಗೆ ಕರೆದೊಯ್ದಳು.ಈ ಹುಡುಗಿ ಪ್ಯಾಕೇಟು ಒಡೆಯದೇ ಇಟ್ಟಿದ್ದ ಸಿ ಡಿ ಪ್ಯಾಕುಗಳನ್ನು ನೋಡಿ ಜೋರಾಗಿ ಅಳತೊಡಗಿದಳು.ಯಾಕೆ ಗೊತ್ತಾ ? ಅವಳು ಕೂಡ ಆತನನ್ನು ಗಾಡವಾಗಿ ಪ್ರೀತಿಸುತ್ತಿದ್ದಳು.ತನ್ನ ಪ್ರೇಮ ನಿವೇದನೆಯನ್ನು ಆತನೊಂದಿಗೆ ಪತ್ರದ ಮೂಲಕ ಹೇಳುವ ಸಲುವಾಗಿ ಪ್ರೇಮ ಪತ್ರಗಳನ್ನೆಲ್ಲಾ ಆ ಸಿ ಡಿ ಕವರ್ ನೊಳಗಿಟ್ಟು ಆತನಿಗೆ ಕೊಡುತ್ತಿದ್ದಳು ! ಆದರೆ ಆತ ಮಾತ್ರ ಆ ಕವರ್ ಗಳನ್ನು ತೆರೆದು ನೋಡಿಯೇ ಇರಲಿಲ್ಲ !
ಯಾಕೋ ಈ ಎಸ್ ಎಂ ಎಸ್ ನನ್ನ ಹೃದಯಕ್ಕೆ ಬಹಳಾ ಹತ್ತಿರವಾಗಿ ಬಿಟ್ಟಿತು. ಹೌದಲ್ಲಾ ಸ್ನೇಹಿತರೇ, ನಮ್ಮ ಜೀವನದಲ್ಲಿ ನಾವು ಕೂಡ ಹೀಗೇನೇ ಎಷ್ಟೋಂದು ಜನರನ್ನು ಇಷ್ಟಪಟ್ಟಿರ್ತೀವಿ.ನಮ್ಮನ್ನು ಅವರೂ ಕೂಡ.ಆದ್ರೆ ಅದನ್ನು ಅವರೊಂದಿಗೆ ಹೇಳಲಾರದೇ ನಾವು ಪಟ್ಟಿರುವ ಕಷ್ಟಗಳೆಷ್ಟು ? ನಮ್ಮ ಸಂಕೋಚಾನೇ ನಮ್ಮಿಬ್ಬರ ನಡುವಿನ ಆ ಆತ್ಮೀಯ ಬಂದನವನ್ನು ತೆಗೆದು ಹಾಕಿರುತ್ತೆ. ಇನ್ನೇನು ಹೇಳಬೇಕು ಎನ್ನುವಷ್ಟರಲ್ಲಿ ಇನ್ನೇನೋ ನಡೆದಿರುತ್ತೆ! ವಿಶಾಲವಾಗಿರೋ ಈ ಜಗತ್ತಿನಲ್ಲಿ ಇನ್ನೆಲ್ಲೋ ನಾವವರನ್ನು ಭೇಟಿಯಾದಾಗ ಹೃದಯದಲ್ಲಿರೋ ಆ ಪ್ರಿತಿಯ ದೊಡ್ಡ ಭಾರವನ್ನು ಹೇಳಿ ಹಗುರವಾಗಿಸಬೇಕೆಂದು ಹಂಚಿಕೊಂಡಾಗ ಕಳೆದು ಹೋದ ಕಾಲವೆಲ್ಲಾ ನೆನಪಾಗಿ ಬಿಡುತ್ತೆ.ಆದರೆ ಕಾಲ ಮಿಂಚಿರುತ್ತೆ !