Tuesday, November 29, 2011

ಕೀಲಿಮಣೆಯಲಿ ಅಕ್ಷರ ಕಲಿತು ಹೃದಯದಲ್ಲಿ ಪ್ರೇಮಾಕ್ಷರ ಬರೆದವಳಿಗೆ...


ನನ್ನ ಆತ್ಮೀಯಳಿಗೆ,

ನಿನ್ನನ್ನು ಆತ್ಮೀಯಳು ಎನ್ನುವ ಬದಲು ಮೊದಲಿನ ಹಾಗೆ ಚಿನ್ನ... ಪುಟ್ಟ ಎಂದು ಕರೆಯುವ ಧೈರ್ಯ ನನಗಿಲ್ಲ. ನಾನು ಕರೆದರೆ ನಿನ್ನ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಊಹಿಸಲೂ ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ಆತ್ಮೀಯಳು ಎಂದಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಹೇಗಿದ್ದಿಯಾ? ನೀನು ಚೆನ್ನಾಗಿರುತ್ತಿ ಎಂದು ನನಗೆ ಗೊತ್ತು. ಆದರೂ ಕೇಳಬೇಕೆನ್ನಿಸಿತು. ನಾನು ಪ್ರೀತಿಸುವ, ಪ್ರೀತಿಸುತ್ತಿರುವ ಜೀವವಾದ್ದರಿಂದ ಕೇಳಿದೆ. ನಾನು ಯಾರು ಗೊತ್ತಾ ಒಂದು ಕಾಲದಲ್ಲಿ ನಿನ್ನ ಚಿನ್ನ, ಪುಟ್ಟ ಆಗಿದ್ದವನು. ನಿನ್ನೊಂದಿಗೆ ನೂರುಕಾಲವೂ ಜೊತೆಗಿದ್ದು ಜಗತ್ತನ್ನೇ ಮರೆಯಬೇಕೆಂದು ಹಪಹಪಿಸುತ್ತಿದ್ದವನು. ಈಗ ನನಗೆ ಸಿಕ್ಕಿರೋ ಹಣೆಪಟ್ಟಿ `ಭಗ್ನ ಪ್ರೇಮಿ'.

ಅದೇಕೋ ಗೊತ್ತಿಲ್ಲ. ಮೊದಲ ನೋಟ, ಮಾತಿನಲ್ಲೇ ನೀನು ನನ್ನ ಹೃದಯದ ಒಡತಿಯಾಗಿಬಿಟ್ಟಿದ್ದೆ. ಆದರೂ ನಿನ್ನ ಜೊತೆ ಹೇಳಲು ಏನೋ ಹಿಂಜರಿತ. ಕೊನೆಗೆ ಧೈರ್ಯ ಮಾಡಿ ಹೇಳಿದ್ದೆ. ಮನಸಲ್ಲಿಟ್ಟು ಕೊರಗುವುದಕ್ಕಿಂತ ಒಮ್ಮೆ ಹೇಳಿಬಿಡಬೇಕೆಂದು. ನೀನು ಮಾತ್ರ ಗೋಡೆಯ ಮೇಲೆ ದೀಪವಿಟ್ಟವರ ಹಾಗೆ ಆಡುತ್ತಿದ್ದೆ. ಕೊನೆಗೆ ಬಸ್ನಲ್ಲಿ ಒಂದೇ ಸೀಟ್ನಲ್ಲಿ ಕೂತಿದ್ದಾಗ 'ನೀನಂದ್ರೆ ನಂಗೆ ತುಂಬಾ ಇಷ್ಟ ಕಣೋ. ಆದ್ರೆ ಹೆದ್ರಿಕೆ ಆಗುತ್ತೆ. ಲವ್ ಯೂ. ಕೈ ಯಾವತ್ತೂ ಬಿಡಬೇಡ' ಎಂದು ನನ್ನ ಕೈ ಗಟ್ಟಿ ಹಿಡಿದು ಹೇಳಿದ್ದ ಮುಗ್ಧ ಹುಡುಗಿ ನೀನು. ನಾವು ಎಲ್ಲಿದ್ದರೂ ಜೊತೆಗೇ ಇರುತ್ತಿದ್ದವರು. ಕಾಲೇಜಿಗೆ ಬರುವಾಗಲೂ, ಹೋಗುವಾಗಲೂ. ಮಧ್ಯಾಹ್ನದ ಊಟವನ್ನು ಪರಸ್ಪರ ಕೈತುತ್ತು ನೀಡಿ ಉಣ್ಣುತ್ತಿದ್ದವರು. ಬಸ್ನಲ್ಲೂ ನಮ್ಮ ಸೀಟ್ ಒಂದೇ ಆಗಿರುತ್ತಿತ್ತು. 15 ಕಿ.ಮೀ. ಪ್ರಯಾಣದಲ್ಲಿ ಬಸ್ ಡ್ರೈವರ್ ಇಪ್ಪತ್ತು ನಿಮಿಷ ಮಾತ್ರ ತೆಗೆದುಕೊಳ್ಳುತ್ತಿದ್ದಾಗ ಅದೆಷ್ಟು ಬೇಗ ಬಂತು ಎಂದು ವಿದಾಯ ಗೀತೆ ಹಾಡುತ್ತಿದ್ದವು. ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಡುತ್ತಿದ್ದೆವು ಅಲ್ವಾ?

ರಾತ್ರಿ ಮಲಗುವಾಗ ನೀನು ಕಾಲ್ ಮಾಡಿ ಗುಡ್ನೈಟ್ ಚಿನ್ನಾ.. ನನ್ನ ಕನಸಿನಲ್ಲಿ ಬರುತ್ತಿ ಅಲ್ವಾ? ಒಂದು ಮುತ್ತು ಕೊಡು ಪ್ಲೀಸ್ ಅನ್ನುತ್ತಿದ್ದೆ. ಬೆಳಿಗ್ಗೆ ಕಾಲ್ ಮುಖಾಂತರ ನನ್ನನ್ನು ಬೆಡ್ನಿಂದ ಎಬ್ಬಿಸಿ ಗುಡ್ ಮಾರ್ನಿಂಗ್ ಚಿನ್ನಾ ಅನ್ನುತ್ತಿದ್ದೆ. ಮತ್ತೆ ಅದೇ ಕಾಲೇಜು ಕಾರಿಡಾರ್ ಸುತ್ತಾಟ, ಮಧ್ಯಾಹ್ನ ಜೊತೆಗಿನ ಊಟ. ಬಸ್ ಪ್ರಯಾಣ. ಇದೆಲ್ಲವನ್ನೂ ನಿನಗೇಕೆ ಈಗ ನೆನಪಿಸುತ್ತಿದ್ದೇನೆ ಎಂದು ಕೋಪ ಬರುತ್ತಿದೆಯಾ? ನಿನಗೆ ಮರೆತು ಹೋದದ್ದನ್ನು ನೆನಪಿಸುವ ಸಣ್ಣ ಪ್ರಯತ್ನ ಕಣೇ ನೀನು. ಕಾಲೇಜು ಕಾರಿಡಾರಿನುದ್ದಕ್ಕೂ ಪ್ರೇಮಿಗಳೆಂದರೆ ಅವರ ತರಹ ಇರಬೇಕು, ಅವರಿಬ್ಬರೂ ಮೇಡ್ ಫಾರ್ ಈಚ್ ಅದರ್ ಅಂತೆಲ್ಲಾ ಹೇಳುತ್ತಿದ್ದ ಮಾತು ನನ್ನ ಕಿವಿಗೆ ಬಿದ್ದಿತ್ತು. ಆದರೆ ಇಂದು!

ನಮ್ಮ ಮಕ್ಕಳು ಹೀಗೆ ಇರಬೇಕು, ಅವರನ್ನು ಹೀಗೆ ಸಾಕಬೇಕು, ನಾನು ನೀನು ಒಂದೇ ಆಫೀಸ್ನಲ್ಲಿ ಕೆಲಸ ಮಾಡಬೇಕು, ಜೊತೆಯಾಗೇ ಮನೆಗೆ ಬರಬೇಕು, ನಿನಗಿಷ್ಟವಾದ ಅಡುಗೆ ಮಾಡಿ ನಾನೇ ನಿನಗೆ ಕೈಯ್ಯಾರೆ ತಿನ್ನಿಸಬೇಕು, ನಿನ್ನ ಮಡಿಲಲ್ಲಿ ಮಗುವಿನಂತೆ ಮಲಗಬೇಕು, ನಿನ್ನೊಂದಿಗೆ ಬೈಕ್ನಲ್ಲಿ ಬಿಗಿದಪ್ಪಿ ಲಾಂಗ್ ಡ್ರೈವ್ ಮಾಡಬೇಕು ಎಂದೆಲ್ಲಾ ಕಂಡಿದ್ದ ಕನಸು ಇಂದು ನನ್ನೆದುರೇ ನುಚ್ಚು ನೂರಾಗಿದೆ!

ಇಂದಿಗೂ ನಾವಿಬ್ಬರೂ ಅದೇ ಬಸ್ನಲ್ಲಿ ಓಡಾಡುತ್ತೇವೆ. ಆದರೆ ನಮ್ಮಿಬ್ಬರ ಸೀಟ್ ಮಾತ್ರ ಬೇರೆ ಬೇರೆ. ಏನು ವಿಚಿತ್ರ ಅಲ್ವಾ? ನೀನಂದ್ರೆ ನನಗಿಷ್ಟ ಕಣೋ. ಆದ್ರೆ ಹೆದ್ರಿಕೆ ಆಗುತ್ತೆ. ಲವ್ ಯೂ ಪುಟ್ಟಾ ಎಂದು ಕೈ ಗಟ್ಟ್ತಿ ಹಿಡಿದಿದ್ದ ಸ್ಥಳ ಬಂದಾಗ ಪ್ರತೀ ದಿನ ನಿನ್ನ ಮುಖ ನೋಡುತ್ತೇನೆ. ನನ್ನ ಹಾಗೆ ನಿನ್ನ ಕಣ್ಣಲ್ಲಿ ಹನಿಗಳೇನಾದರೂ ಜಿನುಗುತ್ತಿದೆಯಾ ಅಥವಾ ನನ್ ಕಡೆ ತಿರುಗಿ ನೋಡುತ್ತಿಯಾ ಎಂದು. ಆದರೆ ನಾನು ನಿನ್ನ ಬರ್ತ್ ಡೇಗೆ ಗಿಫ್ಟ್ ಕೊಟ್ಟ ಮೊಬೈಲ್ನಲ್ಲಿ ಇನ್ನಾರ ಜೊತೆಗೋ ಮಾತಾಡ್ತಾ ಇರ್ತೀ ಅಲ್ವಾ? ಏನೋ ಒಂಥರಾ ನೋವು ಕಣೇ.. ನನಗೀಗಲೂ ನೀನು ನನ್ನನ್ನು ಒಪ್ಪಿಕೊಂಡ ತಿರುವಿನ ರಸ್ತೆ ಬಂದಾಗ ಏನೋ ಒಂಥರಾ ಭಾವನೆ ಬರುತ್ತೆ ಗೊತ್ತಾ?

ನಿನಗೆ ನನ್ನ ಲ್ಯಾಪ್ ಟಾಪ್ ನಲ್ಲಿ ಕನ್ನಡ ಟೈಪಿಂಗ್ ಕಲಿಸಿದ್ದು ನೆನಪಿದೆಯಾ? ಸಣ್ಣ ಮಕ್ಕಳಿಗೆ ಕಲಿಸಿದ ಹಾಗೆ! ನಿನ್ನ ಕೈ ಹಿಡಿದುಕೊಂಡು, ಒಂದೊಂದು ಬೆರಳನ್ನು ಒಂದೊಂದೇ ಕೀಲಿಮಣೆ ಮೇಲೆ ಒತ್ತಿ ಒತ್ತಿ 'ಅರ್ಕ ಒತ್ತು ಕೊಡಲು ಇದು ಒತ್ತಬೇಕು ಚಿನ್ನಾ, ಮಹಾ ಪ್ರಾಣಾಕ್ಷರಕ್ಕೆ ಶಿಫ್ಟ್ ಒತ್ತಿ ಅಕ್ಷರ ಒತ್ತಬೇಕು ಪುಟ್ಟ' ಎಂದು. ನಿನ್ನ ಬೆನ್ನ ಹಿಂದೆ ನಾನು ಕೂತು ನಿನ್ನ ಮಡಿಲಲ್ಲಿ ಲ್ಯಾಪ್ ಟಾಪ್ ನಲ್ಲಿ ಇಟ್ಟು ನಿನಗೆ ಕನ್ನಡ ಟೈಪಿಂಗ್ ಕಲಿಸಿದ್ದು ಈಗಲೂ ನೆನಪಿಸಿಕೊಂಡರೆ ಮರುಭೂಮಿಯಲ್ಲಿರುವ ಓಯಸಿಸ್ನಂತೆ ನನ್ನ ತುಟಿಯಂಚಿನಲ್ಲಿ ನಗು ಮೂಡುತ್ತದೆ. ನನ್ನ ಪ್ರಯತ್ನದಂತೆ ನೀನು ಕನ್ನಡ ಟೈಪಿಂಗ್ ಕಲಿತಾಗ 'ನನಗೆ ಟೈಪಿಂಗ್ ಕಲಿಸಿದ ಕೈಗಳಿಗೆ ಮುತ್ತು ಕೊಡಬೇಕು' ಎಂದು ಹೇಳಿ ನನ್ನ ಕೈಗಳಿಗೆ ಮುತ್ತಿಕ್ಕಿದ್ದು ನೆನಪಿಸಿಕೊಂಡರೆ ಕಣ್ಣು ತೇವವಾಗುತ್ತದೆ ಕಣೇ. ಅದು ನೆನಪಾದಾಗ ಒಮ್ಮೆ ನಿನ್ನನ್ನು ನೆನಪಿಸಿಕೊಂಡು ಕೈಗಳನ್ನು ಎದೆಯ ಮೇಲೊತ್ತಿ ಕಣ್ಮುಚ್ಚಿಕೊಳ್ಳುತ್ತೇನೆ. ಸರ್ಪ್ರೈಸ್ ಆಗಿ ನಿನ್ನ ಹಣೆಗೆ ಮುತ್ತಿಟ್ಟು ನಿನಗೆ ಶಾಕ್ ನೀಡಿದ್ದು ನೆನಪಿಸಿಕೊಂಡರೆ...

ಅವತ್ತು ನಾವು ಬಸ್ಸ್ಟಾಂಡ್ಗೆ ಹೋಗುತ್ತಿದ್ದಾಗ ನಿನ್ನ ಕಾಲಿನ ಚಪ್ಪಲಿ ಕಿತ್ತು ಹೋಗಿತ್ತು. ನಡೆಯಲಾಗದೇ ನೀನು ಕುಂಟುತ್ತಿದ್ದೆ. ಕೂಡಲೇ ನಾನು ನಿನ್ನ ಚಪ್ಪಲಿ ಕೊಂಡು ಹೋಗಿ ಸ್ಟಿಚ್ ಮಾಡಿಸಿ ತಂದಿದ್ದು ನೆನಪಿದೆಯಾ? ಇತ್ತೀಚಿಗೆ ನನ್ನ ಸ್ನೇಹಿತೆಯರಲ್ಲೊಬ್ಬಳ ಚಪ್ಪಲಿ ಕಿತ್ತು ಹೋದಾಗ ಆಕೆ ನಾನು ನಿನ್ನ ಚಪ್ಪಲಿ ಹೊಲಿಸಿದ ವಿಚಾರ ನೆನಪಿಸಿ ನನ್ನ ಕಣ್ಣೀರ ಕಟ್ಟೆ ಒಡೆದಿದ್ದಳು. ಅವತ್ತು ಅಳಬೇಕು ಎಂದೆನಿಸಿದರೂ ಕಣ್ಣಲ್ಲಿ ಅಳುವುದಕ್ಕೆ ನೀರಿರಲಿಲ್ಲ.

ನಾವಿಬ್ಬರೂ ಬಸ್ಸ್ಟಾಂಡ್ನತ್ತ ಜೊತೆಗೇ ನಡೆದುಕೊಂಡು ಹೋಗುತ್ತಿದ್ದಾಗ ನಾನೊಂದು ಹಜ್ಜೆ ಮುಂದಿಟ್ಟರೆ ನನ್ನನ್ನು ಬಿಟ್ಟು ಹೋದಿ ಅಂತಾ ಸಣ್ಣ ಮಕ್ಕಳ ಹಾಗೆ ಅಲ್ಲೇ ನಿಂತು ಅಳುತ್ತಿದ್ದ ನೀನು ಇಂದು ನಾನಿಲ್ಲದೇ ಹೇಗೆ ಮುಂದೆ ಹೆಜ್ಜೆ ಇಡುತ್ತೀಯೋ... ನಾನು ನಿನ್ನ ಜೊತೆಗಿಲ್ಲದಿದ್ದರೂ ನನ್ನ ಮನಸ್ಸಿನ ಕಾಳಜಿ ಸದಾ ನಿನ್ನ ಜೊತೆ ಇರುತ್ತದೆ ಕಣೇ...

ಅಲ್ವೇ, ನಾನು ಮಾಡಿದ ತಪ್ಪಾದರೂ ಏನು? ನನಗಿಂದಿಗೂ ನಿಲುಕದ ಯಕ್ಷಪ್ರಶ್ನೆ ಅದು. ನಿನ್ನಲ್ಲಿ ಕೇಳುವ ಧೈರ್ಯ ಮಾತ್ರ ನನಗಿಲ್ಲ. ಕೇಳಿದರೂ ನೀನು ಉತ್ತರಿಸುತ್ತೀ ಎಂದು ನಾನು ಆಶಾಭಾವನೆಯೂ ಸತ್ತು ಹೋಗಿದೆ. ಆದರೆ ಏಕೋ ಮತ್ತೆ ಕೇಳಬೇಕೆನ್ನಿಸಿತು. ಈಗ ಕೇಳುತ್ತಿದ್ದೇನೆ. ನಿನ್ನಿಂದ ಉತ್ತರ ಸಿಗಬಹುದೆಂಬ ನಿರೀಕ್ಷೆಯಿಂದ. ಪ್ಲೀಸ್ ಹೇಳಿ ಹೋಗು ಕಾರಣ. ಅದರಿಂದ ನನಗೆ ಸ್ವಲ್ಪವಾದ್ರೂ ನೆಮ್ಮದಿ ಸಿಗಲಿ.

ನಿನಗೊಂದು ಮಾತು ಹೇಳಬೇಕು ಎಂದೆನಿಸುತ್ತದೆ. ಬಹುಶಃ ನಿನಗೆ ನನಗಿಂತ ರಿಚ್ ಲೈಫ್ ಪಾರ್ಟ್ ನರ್ ಸಿಗಬಹುದು. ಆದರೆ ನನ್ನಂತೆ ನೀನು ಎಂದು ಭಾವಿಸುವವನು, ನಿನ್ನನ್ನು ನನ್ನಷ್ಟು ಪ್ರೀತಿಸುವವನು ಸಿಗುವುದು ಕಷ್ಟ ಕಣೇ. ನೀನು ಇಂದು ಬಂದರೂ ನಿನ್ನನ್ನು ಅವತ್ತಿನಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇನೆ. ಅಂದಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಬಿಗಿದಪ್ಪಿ ಮುದ್ದಾಡುತ್ತೇನೆ. ಬರುತ್ತಿಯಾ? ನಿನ್ನ ಆಗಮನದ ನಿರೀಕ್ಷೆಯಲ್ಲಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದೇನೆ. ನೀನು ಎಲ್ಲೇ ಇದ್ದರೂ ನನ್ನೆದೆಯಲ್ಲಿ ಹಸಿರಾಗಿರುತ್ತಿ. ನೀನು ಸಿಗದಿದ್ದರೂ ಕೊನೆಯವರೆಗೂ ನಿನ್ನ ನೆನಪಲ್ಲೇ ಕಾಲ ಕಳೀಬೇಕು ಎಂದು ತೀರ್ಮಾನಿಸಿದ್ದೇನೆ. ಇನ್ನೂ ಬರೆಯಬೇಕು ಎಂದೆನಿಸುತ್ತಿದ್ದರೂ ಬರೆಯಲಾಗುತ್ತಿಲ್ಲ. ಅತ್ತೂ ಅತ್ತು ಕಣ್ಣುಗಳು ಮಂಜಾಗಿ ಬಿಟ್ಟಿವೆ. ಅಕ್ಷರಗಳೇ ಕಾಣುತ್ತಿಲ್ಲ. ಒಂದು ಸಾರಿ ನಿನ್ನನ್ನು ನನ್ ಪುಟ್ಟಾ ನನ್ನ ಚಿನ್ನ ಅಂತ ಕರೀಲಾ?

ಬರ್ಲಾ...

ಇಂದಿಗೂ, ಎಂದೆಂದೂ ನಿನ್ನನ್ನೇ ಪ್ರೀತಿಸುವ ನಿನ್ನ ಚಿನ್ನ, ಪುಟ್ಟ



No comments: