Sunday, June 8, 2008

ಹಣೆಯಲಿ ಬರೆಯದ ನಿನ್ನ ಹೆಸರ...

ಹೌದು ಕಣೇ, ನೀನು ನನ್ನನ್ನು ಮರೆತು ಒಂದು ವರ್ಷ ತುಂಬುತ್ತಾ ಬಂತು.ನೀನೇ ನನ್ನಲ್ಲಿ ಮಾಡಿದ್ದ ಯಾವುದೇ ಪ್ರಾಮಿಸ್ ಗಳೂ ನಿನಗೇ ನೆನಪಿಲ್ಲ! ನನ್ನನ್ನು ಎಲ್ಲಿಯಾದರೂ ಕಂಡರೆ ‘ಅಪರಿಚಿತ’ ಎಂಬಂತೆ ವರ್ತಿಸುತ್ತಿ ಅಲ್ವಾ! ನೀನೇ ಉಣಿಸಿದ ಮುತ್ತಿನ ರಸಡೌತಣಗಳನ್ನೇ ಮರೆತಿದ್ದೀ ಅಲ್ವಾ ? ನಂಗ್ಯಾಕೋ ನಿನ್ನನ್ನು ಮರೀಲಿಕ್ಕೇ ಆಗ್ತಿಲ್ಲಾ ಕಣೇ, ಎಷ್ಟೇ ಕಷ್ಟಪಟ್ರೂನೂ ಕೂಡ!
ನಿನ್ನನ್ನು ಮರೀಬೇಕೂಂತ ಏನೆಲ್ಲಾ ಮಾಡಿದೆ.ಆದರೆ ಅದೆಲ್ಲಾ ‘ನೀರಿನ ಮೇಲಿಟ್ಟ ಹೋಮ’ದಂತೆ ವ್ಯರ್ಥವಾಯ್ತು.ನಿನ್ನನ್ನು ದ್ವೇಷಿಸೋಣಾಂತ ‘ಕಷ್ಟಪಟ್ಟು’ ದ್ವೇಷಪಟ್ರೂ, ನಿನ್ನ ಪ್ರೀತೀನ ನಂಜೊತೆ ಹಂಚಿಕೊಳ್ಳಲು ಪಟ್ಟ ಕಷ್ಟ ನೆನಪಾಗಿ ಕಠೋರವಾಗಿರೋ ನನ್ನ ಹೃದಯ ಕರಗಿ ಕೆನ್ನೆಯಲ್ಲಿ ಗುಳಿ ಬೀಳುತ್ತೆ ! ಸುಮ್-ಸುಮ್ನೆ ಕೂತ್ಕೊಂಡಿರುವಾಗ ಬೇಡ ಅಂದರೂ ನಿಂಜೊತೆ ಆಡುತ್ತಿದ್ದ ಪ್ರೀತಿಯ ಚೆಲ್ಲಾಟ ನೆನಪಾಗುತ್ತೆ.ನೀನು ನನ್ನ ಕೈ ಹಿಡಿದುಕೊಂಡು ಬಿಸಿಯಪ್ಪುಗೆ ನೀಡುತ್ತಿದ್ದ ‘ಆ ದಿನಗಳು’ ನೆನಪಾಗಿ ಕಣ್ಣು ಮಂದವಾಗುತ್ತೆ.
ನನ್ನನ್ನು ಮರೀಬೇಡಾಂತ ನಿವೇದಿಸುತ್ತಿದ್ದ ನೀನೇ, ನನ್ನ ಮರೆತು ಬಿಟ್ಟಿ ಅಲ್ವಾಂತ ಮನಸ್ಸು ಚುಚ್ಚುತ್ತೆ!
ಒಂದು ಮಾತ್ರ ನೆನಪಿಟ್ಕೋ... ನಾನು ನಿನ್ನನ್ನು ಪ್ರೀತಿಸಿದಷ್ಟು ಈ ಜಗತ್ತಿನಲ್ಲಿ ನಿನ್ನ ಪ್ರೀತಿಸುವವರು ಯಾರೂ ಇಲ್ಲಾ ಕಣೇ.ನಾನು ಸತ್ತರೂ ನಿನ್ನ ಮೇಲಿರೋ ನನ್ನ ಪ್ರೀತಿ ಸಾಯಲ್ಲಾ ಕಣೇ! ಅದೆಂದಿಗೂ ಅಮರ,ಶಾಶ್ವತ.ನನ್ನ ಹಣೆಯಲಿ ಬರೆಯದ ನಿನ್ನ ಹೆಸರನ್ನು ಹೃದಯದಲ್ಲಿ ನಾನೇ ಕೊರೆದಿದ್ದೇನೆ.ನನ್ನ ಹೃದಯದಲ್ಲಿ ನಿನಗೆ ಮೀಸಲಾಗಿರೋ ಜಾಗದಲ್ಲಿ ಮತ್ತೋರ್ವಳಿಗೆ ಅವಕಾಶವಿಲ್ಲ.ನೀನೇ ನೆಟ್ಟಿರೋ ಪ್ರೀತಿಯೆಂಬ ಸಸ್ಯವನ್ನು ಕಿತ್ತೊಗೆಯಬೇಡ.ಅದೀಗಾಗಲೇ ಪ್ರೌಡಾವಸ್ಥೆಯಲ್ಲಿದೆ.ಪ್ಲೀಸ್.. ನಿನ್ನ ಮನಸ್ಸನ್ನು ಬದಲಾಯಿಸ್ಕೋ...
ಇತೀ,
ನಿನ್ನವನು