Friday, December 3, 2010

ಎಷ್ಟು ದಿನ ಕಾಯ್ಬೇಕು ಪುಟ್ಟಾ?


ಹಾಯ್ ಸ್ವೀಟ್ ಹಾರ್ಟ್,
ಹೀಗೆ ಕರೆದ್ರೆ ನಿಂಗೆ ಕೋಪ ಬರುತ್ತೆ ಅನ್ನೋದು ನಂಗೆ ಗೊತ್ತು. ಅದೇ ಕೋಪದಲ್ಲಿ ಕಣ್ಣು ದೊಡ್ಡದು ಮಾಡಿ ನನ್ನತ್ತ ತಿರುಗಿ ನೋಡಿ ಮನಸ್ಸಲ್ಲೆ ನಗುತ್ತಿ ಅಲ್ವಾ ಅವಾಗ ನೀನು ಚಂದ ಕಾಣ್ತಿ ಕಣೆ. ಅದಕ್ಕೆ ಕರೆದೆ ಸ್ವೀಟ್ ಹಾಹಾರ್ಟ್ ಅಂತ. ಪುಟ್ಟ ಮತ್ತೆ ಹೇಗಿದ್ದಿಯಾ? ಮೊನ್ನೆ ನಿನ್ ಮನೆಗೆ ನನ್ನ ಕರೆದಿದ್ದೆ ಅಲ್ವಾ? ಅದೇ ಫಂಕ್ಷನ್ ಗೆ. ಖುಷಿಯಿಂದ ಬಂದಿದ್ದೆ ಕಣೆ ನಿನ್ನ ನೋಡಲು. ಜೊತೆಗೆ ಪುಟ್ಟ ಕಾಣಿಕೆಯನ್ನೂ ತಂದಿದ್ದೆ. ಸಿಂಗಲ್ ಆಗಿ ಬೈಕ್ ರೈಡ್ ಮಾಡಿಕೊಂಡು ಅಷ್ಟು ದೂರ ಬರುವಾಗ ಸುಸ್ತಾಗಿ ಹೋಗಿತ್ತು. ಆದರೂ ನಿನ್ನ ನೋಡುವ ತವಕಕ್ಕೆ ಮನಸ್ಸು ತುದಿಗಾಲಲ್ಲಿ ನಿಂತಿತ್ತು. ಆದರೂ ನೀನು, ನಿನ್ನ ಮನೆ ಸದಸ್ಯರು ಎಲ್ಲ ನನ್ಜೊತೆ ಮಾತಾಡ್ತಾರಾ ಅಂತ ಅಂಜಿಕೆಯೂ ಇತ್ತು.
ಮನೆಗೆ ಬಂದು ನಿನ್ನ ಅಣ್ಣನ್ ಕೈಯ್ಯಲ್ಲಿ ಗಿಫ್ಟ್ ಕೊಟ್ಟು ಸೋಫಾದಲ್ಲಿ ಕುಳಿತುಕೊಂಡೆ ನೋಡು. ಆವಾಗ್ಲೆ ಹುಡುಕುತ್ತಿತ್ತು ನನ್ನ ಕಣ್ಣುಗಳು ನಿನ್ನನ್ನು. ನಿನ್ನ ಅಣ್ಣ, ಮಾವ ಎಲ್ಲರೂ ನನ್ ಜೊತೆ ಮಾತಾಡುತ್ತದ್ದರೆ ಪರ್ಡಾ ಹಾಕಿದ ಬಾಗಿಲನ್ನೂ ದಾಟಿ ನನ್ನ ಕಣ್ಣುಗಳು ನಿನ್ನನ್ನು ಅರಸುತ್ತಿದ್ದವು. ಆಗ್ಲೆ ಬಂದೆ ನೋಡು ನೀನಲ್ಲಿ. ನಿನ್ನ ಆ ಖುಷಿಯ ತುಂಟ ನಗೆ ನೋಡಿ ಅದೆಷ್ಟು ಖುಷಿಯಾಯ್ತು ಗೊತ್ತಾ? ಅವತ್ತು ನಿನ್ನ ಜೋರಾಗಿ ಅಪ್ಪಿಕೊಂಡಾಗ ಆದಷ್ಟು ಖುಷಿಯಾಗಿತ್ತು ನೋಡು. ನಿನ್ನನ್ನು ಹಾಗೇ ನೋಡ್ತಾ ಇರಬೇಕು ಎಂದೆನಿಸಿತ್ತು. ಆದರೂ ಮನದಲ್ಲೇಕೋ ಒಂದು ತಳಮಳ ನೀನು ನನ್ನ ಬಾಳ ಸಂಗಾತಿ ಆಗ್ತಿಯಾ ಇಲ್ವಾ ಅಂತ.
ನೀನು ಇದು ನನ್ ಅಮ್ಮ, ಅತ್ತೆ, ಅಜ್ಜಿ ಎಂದು ಎಲ್ಲರನ್ನೂ ಪರಿಚಯಿಸಿದಾಗ ನಿಜ್ವಾಗ್ಲೂ ಖುಷಿಯಾಗಿತ್ತು. ನಿನ್ ತಂಗಿ ಬಂದು ಹಾಯ್ ಹೇಳಿದಾಗ ನಾದಿನಿ ಬಲು ಚೂಟಿ ಅಂದ್ಕೊಂಡೆ. ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಟ್ಟು ಮನೆ ಕಡೆ ಪ್ರಯಾಣ ಬೆಳೆಸಿದಾಗ ಮನಸ್ಸು ಭಾರವಾಗಿತ್ತು. ಹಾಗೆ ಬರುತ್ತಿರುವಾಗ ನನ್ ಮೊಬೈಲ್ ರಿಂಗೆಣಿಸಿದ್ದು ಕೇಳಿತು. ನೋಡಿದರೆ ನಿನ್ ತಂಗಿ ನಂಬರ್. ಹೇ... ನಿಂಗೊಂದು ಹುಡುಗಿ ನೋಡಿದ್ದಾರೆ ಕಣೋ ನಮ್ ಅತ್ತೆಯರು ಎಂದು ಮಾತು ಶುರು ಮಾಡಿದ್ದಳು. ಹೌದಾ ಯಾರು ಆ ಹುಡುಗಿ ಎಂದೆ. ಅದೇ ನನ್ ದೀದಿ ಎಂದಾಗ, ನನ್ನ ತುಟಿಯಂಚಿನಲ್ಲಿ ನಗುವಿತ್ತು. ಅದೆಷ್ಟು ಖುಷಿಪಟ್ಟೆ ಎಂದರೆ ಬೈಕ್ ನಿಲ್ಲಿಸಿ ಅಲ್ಲೇ ಕುಣಿಯಬೇಕು ಎನಿಸಿತು. ಆದರೂ ಹೌದಾ ಎಂದು ಮಾತ್ರ ಅವಳಲ್ಲಿ ಹೇಳಿ ಫೋನಿಟ್ಟೆ.
ಪುಟ್ಟಾ ಅವಳು ನಿಜಕ್ಕೂ ಹೇಳಿದ್ದಾ ಅಥವಾ ನಿನ್ ಅತ್ತೆಯರು ತಮಾಷೆ ಮಾಡಿದ್ದ ಅದೆಲ್ಲಾ ನನಗೆ ಗೊತ್ತಿಲ್ಲ. ಆದರೆ ಅದು ನಿಜವಾಗ್ಲಿ ಅಂತ ಮಾತ್ರ ಆಶಿಸ್ತೇನೆ. ನಿನ್ ಜೊತೆ ನನ್ ಇಡೀ ಜೀವನ ಕಳೆಯುವುದಕ್ಕಿಂತ ದೊಡ್ಡ ಖುಷಿ ನನಗೆ ಬೇರೆ ಯಾವುದೂ ಇಲ್ಲ. ನಿನ್ ತೊಡೆ ಮೇಲೆ ತಲೆಯಿಟ್ಟು ಮಲಗಬೇಕು. ನಿನ್ ತುಟಿಗೆ ತುಟಿಯಿಟ್ಟು ಈ ಜಗವನ್ನೇ ಮರಿಬೇಕು ಕಣೇ. ಪ್ರತೀ ದಿನ ನಾವಿಬ್ಬರೂ ಲೈವ್ ಎಟ್ ಫಸ್ಟ್ ಸೈಟ್ ಆದವರಂತಿರಬೇಕು ಕಣೇ. ಪ್ಲೀಸ್ ಬಾ ನನ್ನ ಜೀವನ ಸಂಗಾತಿಯಾಗಿ. ನಿನಗಾಗಿ ಕಾಯುತ್ತಿರುತ್ತೇನೆ. ಆ ದಿನ ಬೇಗ ಬರಲಿ. ಬರ್ತಿ ಅಲ್ವಾ ಪುಟ್ಟಾ? ಬರ್ಲಾ...
ಇತೀ ನಿನ್ನ ಪ್ರೀತಿಯ,
ಹುಚ್ಚು ಹುಡುಗ

No comments: