Wednesday, March 26, 2008

ನಿನಗಾಗಿಯೇ ಕಾಯುತಿರುವೆ ಗೆಳೆಯ


ಹಾಯ್...
ನನ್ನಿನಿಯಾ ಹೇಗಿದ್ದಿಯಾ ಕಣೋ? ಎಲ್ಲಿದ್ದಿಯಾ? ನಾನು ಯಾರೂಂತ ತಿಳಿತಾ? ನಾನು ಕಣೋ ನಿನ್ನ ಪ್ರೀತಿಯ ಹುಡುಗಿ.ನಿನ್ನನ್ನು ನೋಡಿ 6 ತಿಂಗಳುಗಳೇ ಕಳೆಯಿತು.ಒಂದೊಂದು ದಿನಾನೂ ಒಂದೊಂದು ವರ್ಷದ ಹಾಗಾಗ್ತಿದೆ.ನನ್ನ ಮನಸ್ಸಿನಲ್ಲಿರೋ ನಿನ್ನ ಫೊಟೋ ಅಸ್ಪಷ್ಟವಾಗತೊಡಗಿದ್ದರಿಂದ ಬೇಸರವಾಗ್ತಿದೆ.ಇದಕ್ಕೆಲ್ಲಾ ಕಾರಣವಾಗಿರೋ ನನ್ನ ಅಣ್ಣಂದಿರನ್ನು ಕಂಡರೆ ಅಸಹ್ಯವಾಗುತ್ತದೆ.ನಿನ್ನಿಂದ ಉಪಕಾರ ಪಡೆದುಕೊಂಡು ನಿನಗೆ ಕೃತಘ್ನತೆ ತೋರಿಸಿದ ಅವರಿಗೆ ಮನುಷ್ಯತ್ವಾನೇ ಇಲ್ಲಾ.ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಅನ್ನೋ ಜಾಯಮಾನ ಅವರದು.

ನೀನು ತುಂಬಾ ಒಳ್ಳೆಯವನು ಕಣೋ. ಮಕ್ಕಳ ಮನಸ್ಸಿನಂತಹಾ ಮುಗ್ದ ಮನಸ್ಸು ನಿನ್ನದು.ಯಾರನ್ನೂ ಬೇಗನೇ ನಂಬಿ ಬಿಡುತ್ತಿಯಾ ನೀನು.ಆದರೆ ಅವರು ಮಾತ್ರ ಕುತಂತ್ರಿಗಳಾಗುತ್ತಾರೆ ಅಲ್ವಾ ? ನಿನ್ನ ಈ ಗುಣಗಳೇ ನನಗೆ ಹಿಡಿಸಿದ್ದು. ನೀನು ಕಾಲೇಜಿನಲ್ಲಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದೆ. ಆಡಂಬರಕ್ಕೆ ಟಾಟಾ ಹೇಳಿದ್ದೆ.ಸರಳತೆ ನಿನ್ನಲ್ಲಿ ಎದ್ದು ಕಾಣುತ್ತಿತ್ತು.ಯಾವ ಹುಡ್ಗೀರನ್ನೂ ತಲೆ ಎತ್ತಿ ನೋಡುತ್ತಿರಲಿಲ್ಲ.
‘ಓ ಗುಣವಂತಾ ನೀ ನನಗಂತಾ ಬರೆದಾಯ್ತು ಭಗವಂತಾ’
ನಾನು ನಿನ್ನನ್ನು ಪ್ರೀತಿಸತೊಡಗಿದ್ದೆ.ನೀನು ನನ್ನ ಅಣ್ಣನ ಚಡ್ಡಿ ದೋಸ್ತು ಆಗಿದ್ದರಿಂದ ನಮ್ಮ ಮನೆಗೆ ಬರುತ್ತಿದ್ದೆ.ನಮ್ಮ ಮನೆಯ ಸದಸ್ಯನೆಂಬಂತಿದ್ದೆ.ಅಣ್ಣ-ನಾನೂ-ನೀನು ಒಂಥರಾ ಆತ್ಮೀಯರಾಗಿ ‘ತ್ರಿಮೂರ್ತಿ’ಗಳಂತಿದ್ದೆವು.ನೀನು ನನ್ನಲ್ಲಿ ಆತ್ಮೀಯವಾಗಿ ನಿನ್ನ ಸುಖ-ದುಃಖಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ.
ನನ್ನ ಪ್ರೀತೀನ ನಿನ್ಜೊತೆ ಹೇಳಿಕೊಳ್ಳಲು ಭಯವಾಗುತ್ತಿತ್ತು.ಆದರೂ,ನೀನು ನನ್ನ ಕಣ್ಣೋಟಗಳಿಗೊಂದು ಅರ್ಥ ಹುಡುಕಿ ನನ್ನ ಪ್ರೀತಿಯನ್ನು ಅರ್ಥೈಸಿಕೊಂಡಿದ್ದೆ.ಆಗಲೇ,‘ನಾನು ಉಂಡ ಮನೆಗೆ ಖನ್ನ ಹಾಕುವವನಲ್ಲಾ’ ಎಂದು ನನಗೆ ಬುದ್ದಿವಾದ ಹೇಳಿದ್ದೆ.ಆದರೂ ಸ್ವಾರ್ಥಿಯಾದ ನಾನು ನಿನ್ನಂತಹವನು ನನಗೆ ಬಿಟ್ಟು ಬೇರೆ ಯಾರಿಗೂ ಸಿಗಬಾರದೆಂದು ಹಠ ಹಿಡಿದು ನಿನ್ನ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದೆ.ದಿನಗರುಳಿದಂತೆ ನೀನು ಸಾಗರವೆಂಬ ಜೀವನದ ಪ್ರೀತಿಯೆಂಬ ದೋಣಿಯಲ್ಲಿ ಪಯಣಿಗನಾಗಿ ನನಗೆ ‘ಸಾಥ್’ ನೀಡಿದ್ದೆ.

ಒಬ್ಬರನ್ನೊಬ್ಬರು ನೋಡದಿದ್ದರೆ ಏನನ್ನೋ ಕಳಕೊಂಡಂತೆ ಚಡಪಡಿಸುವ ಸ್ಥಿತಿ ನಮ್ಮದಾಗಿತ್ತು.ನೀನು ನನ್ನನ್ನು ನೋಡಲಿಕ್ಕಾಗಿಯೇ ಅಣ್ಣನಲ್ಲಿ ಮಾತನಾಡುವ ನೆಪವೊಡ್ಡಿ ನಿನ್ನ ಬೈಕ್ ನಲ್ಲಿ ಸೂಪರ್ರಾಗಿ ಡ್ರೆಸ್ ಮಾಡಿಕೊಂಡು ನಮ್ಮನೆಗೆ ಬರುತ್ತಿದ್ದೆ.ನೀನು ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದೆ.
ನಿನ್ನನ್ನು ನೋಡಿದ ಕೂಡಲೇ ಮನಸ್ಸಿಗೆ ಖುಷಿಯಾಗಿ ಅಪ್ಪಿಕೊಂಡು ಮುತ್ತಿಕ್ಕೋಣಾಂತ ಅನಿಸುತ್ತಿತ್ತು.ಆದರೆ ಯಾರಾದ್ರೂ ನೋಡಿದ್ರೆ? ಭಯವಾಗುತ್ತಿತ್ತು.ನೀನು ಎಲ್ಲರ ಕಣ್ಣು ತಪ್ಪಿಸಿ ನನಗೆ ಕೊಡುತ್ತಿದ್ದ ಚಾಕಲೇಟ್ ಮದುರವಾಗಿರುತ್ತಿತ್ತು.ನೀನು ಮನೆಗೆ ಬಂದಾಗ ನನ್ನ ಅಣ್ಣಂದಿರು ನಿನ್ನ ಬೈಕ್ ನಲ್ಲಿ ಸುತ್ತಾಡುತ್ತಾ ಪೆಟ್ರೊಲ್ ಖಾಲಿ ಮಾಡಿ ಬಿಡುತ್ತಿದ್ದರು.ನಿನ್ನ ಮೊಬೈಲ್ ನಲ್ಲಿ ಕರೆನ್ಸಿ ಇದ್ದರೆ ಅದೂ ಖಾಲಿಯಾಗುತ್ತಿತ್ತು! ಆದರೂ ನೀನು ಎನೂ ಮಾತನಾಡುತ್ತಿರಲಿಲ್ಲ.ಅದೆಲ್ಲಾ ನನಗಾಗಿಯೇ ಅಲ್ಲವೇ?
ನಾನು ಎಸ್ ಎಸ್ ಎಲ್ ಸಿ ಪಾಸ್ ಮಾಡಿದ ನಂತರ ಕಾಲೇಜಿಗೆ ಕಳುಹಿಸಲ್ಲಾಂತ ಮನೆಯಲ್ಲಿ ಹೇಳಿದ್ದಕ್ಕೆ ನಾನು ಅತ್ತಿದ್ದೆ.ಇದರಿಂದ ಬೇಸರಗೊಂಡ ನೀನು ನನ್ನ ಅಪ್ಪ-ಅಮ್ಮನಲ್ಲಿ ಮಾತನಾಡಿ ಕಾಲೇಜಿನಿಂದ ಅಪ್ಲಿಕೇಶನ್ ತಂದು, ನನ್ನನ್ನು ಅಡ್ಮಿಶನ್ ಮಾಡಿಸಿ ಕಾಲೇಜಿನ ಫೀಸನ್ನೂ ಭರಿಸಿ, ಪುಸ್ತಕ,ಬ್ಯಾಗ್ ಎಲ್ಲಾ ತಂದು ಕೊಟ್ಟು ಕಾಲೇಜಿಗೆ ಕಳುಹಿಸಿದ್ದೆ.ಕಾಲೇಜಿಗೆ ಹೋಗುವಾಗ ಅಪರೂಪಕ್ಕೊಮ್ಮೆ ಬೈಕ್ ನಲ್ಲಿ ಬರುತ್ತಿದ್ದ ಬೀನು ಡ್ರಾಪ್ ಕೊಡುತ್ತೇನೆಂದು ನಿಲ್ಲಿಸುತ್ತಿದ್ದಾಗ ನಾನು ಬೇಡವೆಂದಾಗ ನೀನು ಹೊರಟರೆ ನಾನು ಅಳುತ್ತಾ ನಿಲ್ಲಿಸುತ್ತಿದ್ದೆ.
ನನ್ನ ಹುಟ್ಟು ಹಬ್ಬಾನ ಕೇಕ್ ಆರ್ಡರ್ ಮಾಡಿಸಿ, ನಿನ್ನ ಸ್ನೇಹಿತನ ಮನೆಯಲ್ಲಿ ನನ್ನಿಂದಲೇ ಕೇಕ್ ಕತ್ತರಿಸಿ ಆಚರಿಸಿದ್ದೆ.ಅದೇ ಮೊದಲಾಗಿ ನನ್ನ ಹುಟ್ಟು ಹಬ್ಬ ಆಚರಿಸಿದ್ದು.ನೀನವತ್ತು ಅಪ್ಪಿಕೊಂಡು ಕೂಟ್ಟಿದ್ದ ಮುತ್ತನ್ನು ಈಗಲೂ ನೆನಪಿಸಿಕೊಂಡರೆ ಸಮಯ ಕಳೆಯುವುದು ತಿಳಿಯೋದೇ ಇಲ್ಲಾ ! ನಿನ್ನ ಮೊಬೈಲ್ ಗೆ ನನಗೆ ನೀನು ಕರೆ ಮಾಡುವ ವರೆಗೆ ಮಿಸ್ಡ್ ಕಾಲ್ ಕೊಡುತ್ತಿದ್ದೆ.ಕಡೇ ಪಕ್ಷ ದಿನಕ್ಕೆ ಅರ್ದ ಗಂಟೆಯಾದರೂ ಮಾತನಾಡುತ್ತಿದ್ದೆ.ರಾತ್ರಿ ನಿನ್ನನ್ನು ನೆನಪಿಸದೇ ಮಲಗಿದ್ರೆ ನಿದ್ದೇನೇ ಬರುತ್ತಿರಲಿಲ್ಲ.

ಹೀಗೆ ನಿನ್ನ ಪ್ರೀತಿಯ ದೋಣಿಯಲಿ ತೇಲುತ್ತಿರುವಾಗ ‘ಖಳನಾಯಕ’ನೆಂಬಂತೆ ಪ್ರವೇಶಿಸಿದ್ದ ನನ್ನ ದೊಡ್ಡ ಅಣ್ಣ.ಆತ ನನ್ನ ನಿನ್ನ ಪ್ರೀತೀನ ತಪ್ಪಾಗಿ ಅರ್ಥೈಸಿಕೊಂಡು ರಾದ್ದಾಂತಾನೇ ಮಾಡಿದ್ದ.ನಿನ್ನನ್ನು ಅಪರಾಧಿಯೆಂಬಂತೆ ವಿಚಾರಣೆಯೂ ನಡೆಸಿದ್ದ.

ನನಗೆ ಕೊಟ್ಟ ಮಾತನ್ನು ನೀನುಳಿಸಿಕೊಂಡಿದ್ದೆ.ನೀನೇ ನನ್ನನ್ನು ಪ್ರಿತಿಸಿದ್ದೆಂದು ಹೇಳಿ ನನ್ನನ್ನು ಬಚಾವ್ ಮಾಡಿದ್ದೆ.ನಂತರದ ದಿನಗಳಲ್ಲಿ ಧರ್ಮ ಸಂಕಟದಲ್ಲಿ ಸಿಲುಕಿದ್ದರಿಂದ ನನ್ನನ್ನು ಸಂಪರ್ಕಿಸದೇ ದೂರವಾದೆ.ನನ್ನನ್ನು ಬಿಟ್ಟು ಬೇಯಾರನ್ನೂ ಮದುವೆಯಾಗಲ್ಲಾ ಎಂಬ ಮಾತನ್ನೂ ಕೊಟ್ಟಿದ್ದೆ.ಮೊದಲು ಕೊಟ್ಟಿದ್ದ ಮಾತನ್ನು ಉಳಿಸಿಕೊಂಡದ್ದರಿಂದ ಇದನ್ನೂ ಉಳಿಸಿಕೊಳ್ಳುವಿಯೆಂಬ ನಂಬಿಕೆಯಿಂದ ನಾನಿನ್ನೂ ಬದುಕಿದ್ದೇನೆ.ನಿನ್ನ ಮೇಲಿನ ಪ್ರೀತಿ ಕಡಿಮೆಯಾಗದೇ ಹೆಚ್ಚಾಗಿದೆ.ವಿರಹ ವೇದನೆ ನನ್ನನ್ನು ಕಾಡುತ್ತಿದೆ. ನೀನೆಲ್ಲೇ ಇದ್ದರೂ ಸುಖವಾಗಿರು ಎಂದು ಪ್ರಾರ್ಥಿಸುತ್ತೇನೆ.ನೀನೆಂದಿಗೂ ನನ್ನವನೇ.ಬಿಟ್ಟು ಹೋಗಬೇಡ ಗೆಳೆಯ...
ಇತೀ,
ನಿನ್ನ ಪ್ರೀತಿಯ ಹುಡುಗಿ…