Saturday, May 8, 2010

ನೀ ಬರುವ ದಾರಿಯಲಿ....

ಪ್ರೀತಿ ಏಕೆ ಭೂಮಿ ಮೇಲಿದೆ? ಇದು ನನ್ನವಳು ನನ್ನನ್ನು ಮೊದಲ ಬಾರಿ ಭೇಟಿಯಾದಾಗ ಕೇಳಿದ ಪ್ರಶ್ನೆ. ಬಹುಷಃ ನಾನವಳನ್ನು ಪ್ರೀತಿಸುವುದಕ್ಕಾಗಿಯೇ ಪ್ರೀತಿ ಈ ಭೂಮಿ ಮೇಲಿರಬಹುದು.
ಮಲೆನಾಡು ಕಾಫಿಗೆ ಹೆಸರುವಾಸಿ. ಜೊತೆಗೆ ಮಲೆನಾಡ ಚಳಿ ಎಂದರೆ ಬೆಚ್ಚಗಿನ ಭಾವ ಮನದಲ್ಲಿ ಮೂಡುತ್ತದೆ. ಚಳಿ ಜೊತೆಗೆ ಬೆಚ್ಚಗಿನ ಕಾಫಿ ಹೀರೋದೆಂದರೆ ನನಗೆ ಪಂಚಪ್ರಾಣ. ನನ್ನವಳೂ ಮಲೆನಾಡಿವಳು. ಮಲೆನಾಡಿನ ಮಳೆ ಬೀಡಿನ ಆಕೆ ನನ್ನ ಮನದಲ್ಲಿ ಮನೆ ಮಾಡಿ ನಾಲ್ಕು ವರ್ಷಗಳೇ ಕಳೆದಿದೆ. ನನ್ನ ಈ ಬ್ಯೂಸಿ ಲೈಫ್ನಲ್ಲಿ ಆಕೆ ಜೊತೆಗೆ ಗಂಟೆಗಟ್ಟಲೇ ಫೋನ್ನಲ್ಲೆ ಪ್ರೇಮ ನಿವೇದನೆ ಮಾಡುತ್ತೇನಾದರೂ ಆಕೆಯೊಂದಿಗೆ ಬೆರೆಯುವ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಖುಲ್ಲಾಂ ಖುಲ್ಲಾಂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿರುವ ನಮ್ಮಂತಹಾ ಪ್ರೇಮಿಗಳ ಪರಿಸ್ಥಿತಿಯೂ ಇದೆ.
ಅಂದು ನನಗೆ ರಜಾ ದಿನ. ವೀಕೆಂಡ್ ಬೇರೆ. ನಾಳೆ ನಮ್ಮಿಬ್ಬರ ಭೇಟಿ ಎಂದು ಮೇಘ ಸಂದೇಶವೂ ನನ್ನ 'ನಿಶಾ'ಚರಿಯಿಂದ ಬಂದಿತ್ತು. ಮುಂಚಿನ ದಿನ ಆಫೀಸಿಂದ ಬಂದವನೇ ನಾಳೆಗಾಗಿ ತಯಾರಾಗತೊಡಗಿದೆ. ಬೆಳಿಗ್ಗೆ 8 ಗಂಟೆಯಾದರೂ ಬೆಡ್ನಿಂದ ಏಳದ ನಾನು ಅಂದು ಮಾತ್ರ 4 ಗಂಟೆಗೆ ಎದ್ದು ಕುಳಿತಿದ್ದೆ. ನನ್ನ ಮನದೊಡತಿಯನ್ನು ಭೇಟಿಯಾಗುವ ತವಕದಿಂದ ಮುಂಜಾವಿನಲ್ಲೇ ನನ್ನ ಪ್ರೀತಿಯ ಬೈಕ್ ಏರಿ ಪ್ರೇಮಯಾನದ ಮೊದಲ ಹೆಜ್ಜೆ ಇಟ್ಟೆ. ಚಾರ್ಮಾಡಿ ಘಾಟ್ ನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಾ ಮೊದಲ ಬಾರಿಗೆ ಸೂರ್ಯೋಡ್ಯ ಕಂಡೆ! ನಾನು ಮಲೆನಾಡ ಗಡಿ ತಲುಪಿದಾಗ ಮಂಜು ಈಗಷ್ಟೆ ತಿಳಿಯಾಗುತ್ತಿತ್ತು.
ರತ್ನಗಿರಿ ಬೋರೆಗೆ ಹೋಗಿ ನನ್ನವಳವಳ ಗುಂಗಿನಲ್ಲೆ ಸಮಯ ಕಳೆಯತೊಡಗಿದೆ. ಜೀವನದಲ್ಲಿ ಯಾವ ಕ್ಷಣ ಗಳಿಗೆಗೆ ಬೇಕಾದ್ರೂ ಕಾಯಬಹುದು. ಆದರೆ ಪ್ರೀಯತಮೆಗಾಗಿ ಒಂದು ನಿಮಿಷ ಕಾಯುವುದು ಎಂದರೆ ಅಬ್ಬಬ್ಬಾ ಬಹಳ ಕಷ್ಟ. ಒಂದು ನಿಮಿಷವೂ ಒಂದು ದಿನದ ರೀತಿ ಆಗುವಾಗ ಅದು ಸಹಜ.
ನೀರಿನಲ್ಲಿ ಮೀನು ಮೇಲೆ ಬರುವುದನ್ನೇ ಕಾದು ಕುಳಿತ ಪಕ್ಷಿಯಂತಾಗಿತ್ತು ನನ್ನ ಸ್ಥಿತಿ. ಅತ್ತಿತ್ತ ಕಣ್ಣಾಡಿಸುತ್ತಾ ಅವಳನ್ನು ಹುಡುಕತೊಡಗಿದೆ. ಅಂತೂ ಬಂದೇ ಬಿಟ್ಟಳು ನನ್ನವಳು. ಅವಳಿಗಾಗಿ ಕಾದಿದ್ದ ಆಯಾಸವೆಲ್ಲಾ ಅವಳ ಮೊಗದಲ್ಲಿ ಮೂಡಿದ ಸಂತಸದ ನಗುವಿನಿಂದ ಮಾಯವಾಗಿ ಹೋಯ್ತು. ಆಕೆ ತೊಟ್ಟಿದ್ದ ಗುಲಾಬಿ ಬಣ್ಣದ ಉಡುಪು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿತು. ತಭ್ಬಿಕೊಳ್ಳೋ ಮನಸಾಯಿತು. ಆದರೆ ಇದು ಪಾರ್ಕ್ ಎಂದು ಮನದಲ್ಲಿ ಎಚ್ಚರಿಕೆ ಮೂಡಿದ್ದರಿಂದ ಸುಮ್ಮನಾದೆ. ಆಕೆಯ ಕೈ ಹಿಡಿದು ಸಪ್ತಪದಿ ತುಳಿದಂತೆ ಆ ಉದ್ಯಾನವನದೊಳಗೆ ಸುತ್ತಾಡಿದೆ. ಅವಳು ಗಟ್ಟಿಯಾಗಿ ಕೈ ಹಿಡಿದಿದ್ದು ಜೀವನಪೂರ್ತಿ ನಿಂಜೊತೆಗೇನೇ ಹೀಗೇ ಹೆಜ್ಜೆ ಹಾಕುತ್ತೇನೆ ಎಂಬಂತಿತ್ತು.
ಅಲ್ಲೇ ಸುತ್ತಾಡುತ್ತಾ ಮನಸಿನ ಪಿಸು ಮಾತುಗಳನ್ನು ಹಂಚಿಕೊಳ್ಳುತ್ತಿದ್ದ ನಮಗೆ ಸಮಯದ ಪರಿವೇ ಇರಲಿಲ್ಲ. ಆಕೆ ನನ್ನಲ್ಲೊಂದು ಮಾತು ಕೇಳಿದಳು. ನನಗೆ ನಿನ್ನ ಜೊತೆ ಬೈಕ್ ನಲ್ಲಿ ತಬ್ಬಿಕೊಂಡು ಒಂದು ರೈಡ್ ಹೋಗಬೇಕು ಎಂದು ಆಕೆ ಹೇಳಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಆಕೆ ನನ್ನಲ್ಲಿ ಕೇಳಿದ್ದೇ ಪ್ರಥಮ ಬಾರಿಯಾದ್ದರಿಂದ ಇಲ್ಲವೆನ್ನಲು ಮನಸೊಪ್ಪಲಿಲ್ಲ. ಆ ಚಳಿಯ ವಾತಾವರಣದಲ್ಲಿ ಆಕೆಯ ಬೆಚ್ಚಗಿನ ಅಪ್ಪುಗೆಯ್ ಜೊತೆ ರೌಂಡ್ ಹೊರಟ ನನಗೆ ಭೂಮಿಯಲ್ಲಿದ್ದೇನೆ ಎಂದೆನಿಸಲೇ ಇಲ್ಲ. ಬಾಬಾ ಬುಡಾನ್ ಗಿರಿ ತಿರುವಿನಲ್ಲಿ ಆಕೆಯ ಅಪ್ಪುಗೆಯ ಸವಿಯೊಂದಿಗೆ ರೈಡ್ ಮಾಡಿದ್ದು ನಾನೆಂದೂ ಮರೆಯಲು ಸಾಧ್ಯವಿಲ್ಲ.
ಸಮಯ ನಮ್ಮನ್ನು ಬಿಟ್ಟು ದೂರ ಹೋಗಿತ್ತು. ಸೂರ್ಯ ಆಗ ನೆತ್ತಿಯ ಮೇಲಿದ್ದ. ನಮ್ಮಿಬ್ಬರ ವಿರಹದ ವಿದಾಯದ ಸಮಯ ಬಂದಿತ್ತು. ಯಾಕೋ ಮನಸ್ಸು ಭಾರವಾಯಿತು. ಇನ್ನೂ ಸ್ವಲ್ಪ ಹೊತ್ತು ಇರೋಣವೆಂದರೆ ಕಷ್ಟ. ಆಕೆಯನ್ನು ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟು ನನ್ನೂರ ದಾರಿ ಹಿಡಿಯುವುದು ಅನಿವಾರ್ಯವಾಯ್ತು. ಆಕೆಯಿಂದ ಬೀಳ್ಕೊಟ್ಟು ಮುಂದಿನ ಭೇಟಿಗಾಗಿ ಕಾಯುತ್ತಿದ್ದೇನೆ. ಮನೆಗೆ ಬಂದಾಗ ನನ್ನ ಭೇಟಿಯ ವಿಚಾರ ಅಮ್ಮನಿಗೆ ನನ್ನ ಆಪ್ತಮಿತ್ರನಿಂದ ತಿಳಿದಿತ್ತು. ಮನಸ್ಸಿಗೇಕೋ ದುಗುಡವೆನಿಸಿತು. ಆದರೆ ಈ ಬಾರಿ ಮಾತ್ರ ನಾನು ಗೆದ್ದಿದ್ದೆ. ನನ್ನ ಅಮ್ಮ ಗ್ರೀನ್ ಸಿಗ್ನಲ್ ನೀಡಿದ್ದರು. ನನ್ನ ಸೊಸೆಯನ್ನು ಕ್ರ್ಕೊಂಡು ಬಾರೋ ನನಗೆ ಮಾತಾಡ್ಬೇಕು ಎಂದಾಗ ಇದು ನಿಜಾನ ಎಂದು ಒಮ್ಮೆ ಕೈಯನ್ನು ಚಿವುಟಿ ನೋಡಿದೆ! ಈಗ ಏನಿದ್ದರೂ ನನ್ನವಳು ಮನೆಗೆ ಬರುವುದು ಮಾತ್ರ ಬಾಕಿ. ಆಕೆಗಾಗಿ ಜೀವನ ಪೂರ್ತಿ ಬೇಕಾದರೂ ಕಾಯುತ್ತಾ ಒಂಟಿ ಕಾಲಿನಲ್ಲಿ ನಿಂತು ಕಾಯಲು ನಾನು ಸಿದ್ಧ. ಆಕೆ ಬರುವ ಹಾದಿ ತುಂಬಾ ಹೂದಳ ಹರಿಸಿ ಕಾಯುತ್ತಿದ್ದೇನೆ...

No comments: