Thursday, February 5, 2009

‘ವಾನರ ಸೇನೆ’ಯಿಂದ ಸಿಂಪಲಾಗಿ ‘ಮದುವೆಯಾಗೋಣ ಬಾ…’


ಹಲೋ ಹಾಯ್ ಹೇಗಿದ್ದಿಯಾ? ಶೀರ್ಷಿಕೆ ನೋಡ್ಬಿಟ್ಟು ಶಾಕಾಯ್ತಾ? ಪ್ರೇಮಿಗಳ ದಿನ ಹತ್ತಿರ ಬಂತು, ಅದಿಕ್ಕೆ ವಿಶ್ ಮಾಡೋದು ಬಿಟ್ಟು ಏನಿವ್ನ ಹುಚ್ಚಾಟ ಅನ್ಕೊಂಡ್ಯಾ? ಆರಾಮವಾಗಿ ಜೋಡಿ ಹಕ್ಕಿಗಳಾಗಿ ವಿಹರಿಸೋಣ ಎಂದಿದ್ದ ಸಂದರ್ಭದಲ್ಲಿ ಕುತ್ತಿಗೆಗೆ 3 ಗಂಟು ಬಿಗಿದು ‘ಗಂಟು’ ಮೊರೆ ಜೀವನ ಈಗ್ಲೇ ಶುರು ಮಾಡೋಕೆ ಹೊರಟ್ನಲ್ಲಾ? ಎಂದೇನಾದರೂ ಯೋಚಿಸಿದಿಯಾ? ಅದೇನೋ ಜೋಕ್ ಇದೆಯಲ್ಲಾ ಫೆಬ್ರವರಿ 14 ಪ್ರೇಮಿಗಳ ದಿನ ಬಂದು ಸರಿಯಾಗಿ ಒಂಬತ್ತು ತಿಂಗಳ ಬಳಿಕ ನವೆಂಬರ್ 14 ‘ಮಕ್ಕಳ ದಿನ’ ಬರತ್ತೆ ಅಂತ.ಅದಕ್ಕೇನಾದರೂ ‘ಫ್ಯಾಮಿಲಿ ಪ್ಲಾನಿಂಗ್’ ಸ್ಕೆಚ್ ಹಾಕಿದ್ನಾ ಅಂತ ಚಿಂತಿಸಿದಿಯಾ?
ಇಲ್ಲಾ ಕಣೆ ಹಾಗೇನೂ ಇಲ್ಲ. ಆದರೂ ನಾನು ನಿನ್ನನ್ನು ಪ್ರೇಮಿಗಳ ದಿನ ಮದುವೆಯಾಗ್ಬೇಕು ಅಂತ ತೀರ್ಮಾನಿಸಿದ್ದೀನಿ. ಅಯ್ಯೋ ಯಾಕಷ್ಟು ಬೇಸರ ಮಾಡ್ಕೋತಿಯಾ, ನಾವಿಬ್ಬರೂ ನಂತ್ರಾನೂ ಜೋಡಿ ಹಕ್ಕಿಗಳಾಗಿಯೇ ವಿಹರಿಸಬಹುದು. ನಾನು ನಿನಗೆ ಕೊಟ್ಟ ಮಾತಿನಂತೆ ತಪ್ಪದೇ ನಡ್ಕೋತೇನೆ ಕಣೇ. ಹೆದರಬೇಡ. ಸುಂದರವಾದ ಪ್ರೇಮ ಜೀವನ ಜೀವಿಸೋಣ. ನಿನ್ನ ಕೈ ಹಿಡಿದು ಏಳು ಜನ್ಮಗಳಲ್ಲಿಯೂ ನಿನ್ನ ಪತಿಯಾಗಿರ್ತೀನಿ. ಆದಿರಲಿ ಯಾಕಿಷ್ಟೊಂದು ಅರ್ಜೆಂಟ್, ಕಾಲೇಜು ಲೈಫೇ ಮುಗಿಲಿಲ್ಲ. ಅದರ ಮಧ್ಯೆ ಇದೊಂದೇನಪ್ಪಾ, ಇವ್ನು ಬೇರೆ ನಾನು ಜೀವನದಲ್ಲಿ ಅದು ಸಾಧಿಸ್ತೀನಿ ಇದು ಸಾಧಿಸ್ತೀನಿ, ಆ ಮೇಲೆ ನನ್ನ ಮದುವೆಯಾಗ್ತೀನಿ ಅಂತಿದ್ದಾ. ಈಗ ಏಕಾ ಏಕಿ ನಿರ್ಧಾರಕ್ಕೆ ಕಾರಣವೇನು? ಮೊದ್ಲೆ ಅಪ್ಪ ಅಮ್ಮ ಅಂತ ಹೆಸ್ರು ಕೇಳಿದ್ರೆ ನನ್ನ ಎದುರಲ್ಲಿ ಹುಲಿಯಾಗಿದ್ದವನು ಇಲಿಯಾಗಿಬಿಡುತ್ತಿದ್ದ. ಹೇಗಪ್ಪ ಇವ್ನಿಗಿಷ್ಟು ಧೈರ್ಯ ಬಂತು ಅಂತ ಗೊಂದಲವಾಯ್ತಾ? ಇಷ್ಟೆಲ್ಲಾ ಧೈರ್ಯಕ್ಕೆ ಕಾರಣವೇನು ಗೊತ್ತಾ?
‘ವಾನರ ಸೇನೆ’ ಗೊತ್ತಾ ನಿನಗೆ? ಮೊನ್ನೆ ಮಂಗಳೂರಿನಲ್ಲಿ ಪಬ್ ಗಳ ಮೇಲೆ ದಾಳಿ ಮಾಡಿದವರು. ಅದೇ ಅಲ್ಲಿ ಕುಡಿದು ಕುಣಿಯುತ್ತಿದ್ದ ಯುವಕ ಯುವತಿಯರ ಮೇಲೆ ಅಧಿಕಾರ ಚಲಾಯಿಸಿದ ‘ವಾನರ ಸೇನೆ’! ಮಾವನ ಮನೆಗೆ ಹೋದಂತೆ ಜೈಲಿಗೆ ಹೋಗಿ ಬರುವ ಅದರ ಮುಖಂಡ ಪ್ರಮೋದ್ ಮುತಾಲಿಕ್ ಇದ್ದಾರಲ್ಲ, ಅವ್ರು ನಿನ್ನೆ ಪ್ರೇಮಿಗಳಿಗೆ ಒಂದು ‘ಆಶ್ವಾಸನೆ’ ನೀಡಿದ್ದಾರೆ. ಅದೇನಂದರೆ ಫೆಬ್ರವರಿ 14 ಪ್ರೇಮಿಗಳ ದಿನ ಯಾರಾದರೂ ಪ್ರೇಮಿಗಳು ಪಾರ್ಕುಗಳಲ್ಲಿ ಕಂಡರೆ ಅವರಿಗೆ ಮದುವೆ ಮಾಡಿಬಿಡ್ತಾರಂತೆ! ಎಂತಹಾ ಒಳ್ಳೆ ಕೆಲ್ಸ ಅಲ್ವ. ಇದುವರೆಗೂ ನಾವು ಕೇವಲ ಆದಿನ ಕಬ್ಬನ್ ಪಾರ್ಕು, ಲಾಲ್ ಬಾಗೂ ಅಂತ ಕೈ ಕೈ ಹಿಡಿದು ‘ಸಪ್ತ ಪದಿ’ ತುಳಿಯುತ್ತಿದ್ದೆವು. ಆದರೆ ದಾಂಪತ್ಯದ ಪಥ ತುಳಿದಿರಲಿಲ್ಲ. ಅದಿಕ್ಕೆ ಅವ್ರಿಗೆ ಬೇಸರ್ವಾಗಿರಬೇಕು ಪಾಪ. ನಮಗೆ ಮದುವೆ ಮಾಡಿಸ್ತಾರಂತೆ. ಮತ್ತೂ ಒಂದು ವಿಶೇಷ ಗೊತ್ತ. ನಿನ್ನನ್ನು ನಾನೇ ಖುದ್ದಾಗಿ ಮದುವೆ ಮಾಡ್ಕೋಬೇಕೂಂತಿದ್ರೆ ಮಂಗಳ ಸೂತ್ರ, ಅರ್ಚಕರು ಅಂತೆಲ್ಲಾ ಒಡಾಡ್ಬೇಕಾಗುತ್ತಲ್ವ. ಆದರೆ ಅವ್ರು ಮಂಗಳ ಸೂತ್ರದ ಜೊತೆ ಅರ್ಚಕರನ್ನು ಕರ್ಕೊಂಡು ಬಂದು ನಮ್ಮ ಮದುವೆ ಮಾಡಿಸ್ತಾರಂತೆ. ಅದೂ ಫ್ರೀಯಾಗಿ. ‘ವಾನರ ಸೇನೆ’ಯವರೆಲ್ಲಾ ಅಲ್ಲಿದ್ದುಕೊಂಡು ಅಕ್ಷತೆ ಹಾಕಿ ಹರಸ್ತಾರಂತೆ! 'ಮಾಂಗಲ್ಯಂ ತಂತು ನಾನೇನಾ? ನಿಮ್ಮ ಜೀವನ ಎಷ್ಟು ದಿನ?' ಅಂತಾರಂತೆ! ಮೊನ್ನೆ ಝಮೀರ್ ಖಾನ್ ಕೊಟ್ಟ ಹಾಗೆ ಫ್ರೀಯಾಗಿ ‘ಹನಿಮೂನ್’ ಟಿಕೇಟು ಕೊಡ್ತಾರೋ ಅಂತ ಗೊತ್ತಿಲ್ಲ.ಅದೂ ಕೊಟ್ರೆ ಚೆನ್ನಾಗಿರ್ತಿತ್ತಲ್ವಾ? ಪ್ರೇಮಿಗಳ ಬಗ್ಗೆ ಕಾಳಜಿ ತೋರಿಸುವವವರು ಅಂದ್ರೆ ಹೀಗಿರ್ಬೇಕು ಅಲ್ವಾ? ಅದೂ ಇದು ಅಂತ ಆಶ್ವಾಸನೆ ಕೊಡೋದನ್ನು ಬಿಟ್ಟು ಇಂತಹಾ ‘ಘನ’ ಕಾರ್ಯ ಮಾಡಿ ನಮ್ಮಂಥವರನ್ನೆಲ್ಲಾ ಒಂದಾಗಿಸಬೇಕು.ಏನಂತಿಯಾ?
ನಮ್ಮ ‘ವಾನರ ಸೇನೆ’ಯ ಮುಖಂಡರಿದ್ದಾರಲ್ಲ.ಅವ್ರು ‘ಬ್ರಹ್ಮ ಚಾರಿ’ ಕಣೇ. ಪಾಪ. ಅವ್ರು ಯಾರಿಗೂ ಕಾಳು ಹಾಕಿಲ್ಲ ಅಂತೆ. ಮುಂದಿನ ಜನ್ಮದಲ್ಲಾದರೂ ಇಂತಹಾ ‘ಒಳ್ಳೆಯ ಕೆಲಸ’ ಮಾಡಿದ್ದಕ್ಕೆ ಅವ್ರಿಗೆ ಯಾರಾದ್ರು ಕಾಳು ಹಾಕ್ಲಿ ಅಲ್ವಾ? ಅದೆಲ್ಲಾ ಇರಲಿ. ಅವ್ರು ಸೀರೆ ಎಲ್ಲಾ ಕೊಡಲ್ಲ ಅಂತೆ. ಅದಿಕ್ಕೆ ನಂದೊಂದು ಐಡಿಯಾ. ನೀನು ಚೆನ್ನಾಗಿ ಸಿಂಗರಿಸಿಕೊಂಡು ಮದುವಣಗಿತ್ತಿಯಂತೆ ಸೀರೆ ಉಟ್ಕೊಂಡು ಬಾ. ಮನೆಯಲ್ಲಿ ಯಾರಾದ್ರೂ ಕೇಳಿದ್ರೆ ‘ಕಾಲೇಜಿನಲ್ಲಿ ಇವತ್ತು ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಇದೆ’ ಅನ್ನು! ಆಯ್ತಾ.
ನಮ್ಮಿಬ್ಬರ ಪ್ರೀತಿಗೆ ಇನ್ನ್ನು ಯಾರಕಡೆಯಿಂದಲೂ ಅಡಚಣೆಗಳಿಲ್ಲ ಅಲ್ಲಾ. ನಂಗೂ ತುಂಬಾ ಭಯ ಆಗಿತ್ತು ಅಪ್ಪನನ್ನು ಎದುರು ಹಾಕಿಕೊಳ್ಳೋದು ಹೇಗೆ ಅಂತ. ನನ್ನ ಚಿಂತೆಯನ್ನು ಅವ್ರೆಲ್ಲಾ ಸೇರಿ ದೂರ ಮಾಡಿದ್ರು. ಇರಲಿ ಬಿಡು. ಪತ್ರ ದೀರ್ಘ ಆಯ್ತು ಅಂತ ಕಾಣುತ್ತೆ. ಆ ದಿನ ಕಬ್ಬನ್ ಪಾರ್ಕಿನಲ್ಲಿ ಮೀಟ್ ಮಾಡೋಣ ಅಥವಾ ಲಾಲ್ ಬಾಗ್ ನಲ್ಲಿ ಮೀಟ್ ಮಾಡೋಣ ಅಂತ ತಿಳಿಸು. ಸಾಧ್ಯವಾದರೆ ನಾನು ಜೋತಿಷಿಗಳನ್ನೊಮ್ಮೆ ಭೇಟಿಯಾಗಿ ಎರಡೂ ಸ್ಥಳಗಳ 'ಮಹಿಮೆ' ತಿಳಿದುಕೊಳ್ಳುತ್ತೇನೆ. ಆ ದಿನ ಮರಿಬೇಡಾ ತಪ್ಪದೇ ಬಾ. ‘ವಾನರ ಸೇನೆ’ಯಿಂದ ಸಿಂಪಲ್ ಆಗಿ ಮದುವೆಯಾಗೋಣ.ನಿನ್ನ ಪತ್ರದ ನಿರೀಕ್ಷೆಯಲ್ಲಿದ್ದೇನೆ.
ಇತೀ ನಿನ್ನ ಪ್ರೀತಿಯ
‘ಭಾವೀ’ ಪತಿ

ನಾವು ಹುಡುಗರೇ ಹೀಗೆ!


ಹೌದು ನಮ್ಮ ಸ್ವಭಾವವೇ ಹಾಗೆ. ಜೀವನದಲ್ಲಿ ಏನೋ ಸಾಧಿಸಬೇಕು ಎಂಬ ಛಲದಿಂದ ಕಾಲೇಜಿಗೆ ಬರುತ್ತೇವೆ. ಆಸೆ-ಆಕಾಂಕ್ಷೆ-ಗುರಿ ಎಲ್ಲಾ ನಮ್ಮ ಸ್ನೇಹಿತರೇ ಆಗಿರುತ್ತವೆ. ವಿಪರ್ಯಾಸವೆಂಬತೆ ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಅದನ್ನೆಲ್ಲಾ ಮರೆತು ಬಿಡುತ್ತೇವೆ. ಕಾರಿಡಾರಿನಲ್ಲಿ ಅವಳ್ಯಾರೋ ನಕ್ಕು ಬಿಟ್ಟರೆ ನಾವು ಕ್ಲೀನ್ ಬೌಲ್ಡ್. ನಂತರ ಶುರು ಆಕೆಗಾಗಿ ಹುಡುಕಾಟ.
ನಾವು ಗುಣ ನೋಡಿ ಪ್ರೀತಿಸುವವರಲ್ಲ.ಬದಲಾಗಿ ಸೌಂದರ್ಯಕ್ಕೆ ಮಾರು ಹೋಗುವವರು. ಅದೇ ನಮ್ಮ ವೀಕ್ನೆಸ್. ‘ಆಕೆ’ಯನ್ನು ಹುಡುಕಾಡುತ್ತೇವೆ. ‘ಆಕೆ’ಯ ಸ್ನೇಹಿತರನ್ನು ಸಂಪರ್ಕಿಸುತ್ತೇವೆ. ‘ಆಕೆ’ಯ ಬಗ್ಗೆ ಅನಗತ್ಯವಾಗಿ ಎಲ್ಲವನ್ನೂ ಕೇಳುತ್ತೇವೆ. ಆಕೆಗೂ ಡೌಟ್ ಶುರುವಾಗಿರುತ್ತದೆ. ‘ಆಕೆ’ಯನ್ನು ಕೇಳಿದೆ ಎಂದು ಹೇಳಿ ಎಂದು ಆಕೆಯನ್ನು ‘ದಲ್ಲಾಳಿ’ಯಂತೆ ಬಳಸುತ್ತೇವೆ. ನಂತರ ನಿಧಾನವಾಗಿ ‘ಆಕೆ’ಯನ್ನು ಪ್ರೀತಿಸಿರುವುದಾಗಿ ‘ದಲ್ಲಾಳಿ’ಯಲ್ಲಿ ತಿಳಿಸುತ್ತೇವೆ. ಆದನ್ನು ತಿಳಿದುಕೊಂಡ ‘ಆಕೆ’ ನಮ್ಮನ್ನು ಚೆನ್ನಾಗಿ ಯಾಮಾರಿಸುತ್ತಾಳೆ. ಅವಳೆ ನಮ್ಮ ಸರ್ವಸ್ವ. ಆಕೆಗಾಗಿ ಏನು ಮಾಡಲೂ ನಾವು ತಯಾರಿರುತ್ತೇವೆ. ಪಾರ್ಕು ಕ್ಯಾಂಟೀನು ಎಂದು ಆಕೆಯ ಹಿಂದೆ ಸುತ್ತುತ್ತೇವೆ. ಒಂದು ದಿನ ಕಾಲೇಜಿನಲ್ಲಿ ಆಕೆ ಕಾಣದಿದ್ದರೂ ಏನೇನೋ ಕಳಕೊಂಡಂತೆ ಒದ್ದಾಡುತ್ತೇವೆ. ಆಕೆಯ ಜೊತೆ ಕಳೆಯುವ ಕ್ಷಣಗಳು ನಮಗೆ ತುಂಬಾ ಅಮೂಲ್ಯವಾಗಿ ಬಿಡುತ್ತವೆ. ಆಕೆ ಹೇಳಿದ್ದನ್ನೆಲ್ಲಾ ಮಾಡುತ್ತೇವೆ. ಆಕೆಗಾಗಿ ಹಪಹಪಿಸುತ್ತೇವೆ. ಆಕೆ ಕೇಳಿದ್ದನ್ನೆಲ್ಲಾ ತೆಗೆದು ಕೊಡುತ್ತೇವೆ. ಕಾಲೇಜಿನಿಂದ ಮನೆಗೆ ಬಂದರೂ ಆಕೆಯದ್ದೇ ಚಿಂತೆ. ವೆಲಂಟೈನ್ಸ್ ಡೇ, ಬರ್ತ್ ಡೇ, ನ್ಯೂ ಇಯರ್ ಬಂದಾಗ ಆಕೆಗೇನು ‘ಗಿಫ್ಟ್’ ಕೊಡುವುದು ಎಂದು ಚಿಂತಿಸುತ್ತೇವೆ. ಎಸ್ಸೆಮ್ಮೆಸ್ಸುಗಳ ಭರಾಟೆ ಮುಗಿಲು ಮುಟ್ಟಿರುತ್ತದೆ. ಕರೆ ಮಾಡಿದರೆ ಇಡಲು ಮನಸ್ಸೇ ಬರುವುದಿಲ್ಲ. ಯಾರಿಗೂ ಅದರ ಸುಳಿವೇ ಸಿಗದಂತೆ ‘ಪಿಸು ಪಿಸು ಗುಸು ಗುಸು...’ ಮಾತನಾಡುತ್ತೇವೆ. ಲೆಕ್ಕವಿಲ್ಲದಷ್ಟು ಹಣ ಮೊಬೈಲ್ ಗೆ ಸುರಿಯುತ್ತೇವೆ. ಒಂದೊಮ್ಮೆ ನಮ್ಮವಳ ಬಗ್ಗೆ ಎಲ್ಲರಲ್ಲೂ ಹೇಳಿ ಜಂಬ ಕೊಚ್ಚಿಕೊಳ್ಳುತ್ತೇವೆ.ದಿನ-ತಿಂಗಳುಗಳು ಉರುಳಿದ್ದೇ ಗೊತ್ತಾಗುವುದಿಲ್ಲ.ವರ್ಷಗಳು ಕಳೇದಿರುತ್ತವೆ.ಆಕೆ ನಮ್ಮಿಂದ ದೂರ ಸರಿಯ ತೊಡಗುತ್ತಾಳೆ. ಏನಾದರೂ ಕಾರಣಗಳು ನಮ್ಮನ್ನು ದೂರ ಮಾಡುತ್ತವೆ. ಆಕೆಯ ನೆನಪಿನಲ್ಲೇ ಕೊರಗುತ್ತೇವೆ. ಜೀವನದುದ್ದಕ್ಕೂ ಆಕೆಗಾಗಿ ಕಾಯುತ್ತೇವೆ. ಕಾಯುತ್ತಲೇ ಇರುತ್ತೇವೆ! ಒಮ್ಮೆಲೇ ‘ದೇವ್ ದಾಸ್’ ಆಗುತ್ತೇವೆ. ನುಣುಪಾಗಿ ಶೇವ್ ಮಾಡುತ್ತಿದ್ದುದೆಲ್ಲಾ ಮರೆತು ಹೋಗಿರುತ್ತದೆ. ಎಷ್ಟೇ ಹೊತ್ತಿಗೂ ಆಕೆಯನ್ನೇ ನೆನಪಿಸುತ್ತಿರುತ್ತೇವೆ. ಆಕೆಯ ಜೊತೆಗಿದ್ದ ಆ ಕ್ಷಣಗಳನ್ನು ನೆನೆಸಿ, ಕೊರಗಿ ಕೊರಗಿ ದಿನಾ ಸಾಯುತ್ತಿರುತ್ತೇವೆ. ಪ್ರೀತಿ ಮಾಡಬಾರದಿತ್ತು ಎಂದೆಲ್ಲಾ ಹೇಳುತ್ತೇವೆ.ನಮ್ಮ ಅನುಭವಗಳನ್ನು ಎಲ್ಲರಲ್ಲ್ಲೂ ಹೇಳಿ ಭಾವುಕರಾಗುತ್ತೇವೆ.
ಇನ್ನು ಕೆಲವೊಮ್ಮೆ ಯಾರನ್ನೋ ಇಷ್ಟಪಟ್ಟಿರುತ್ತೇವೆ. ಆವರ ಜೊತೆ ಆತ್ಮೀಯತೆಯಿಂದ ‘ನಟಿಸು’ತ್ತೇವೆ. ಅವರೆಂದರೆ ಜೀವ ಎನ್ನುವಷ್ಟರ ಮಟ್ಟಿಗೆ ‘ಸ್ನೇಹ’ವಿರುತ್ತದೆ. ಮನಸಾರೆ ಅವರನ್ನು ಪ್ರೀತಿಸುತ್ತಿರುತ್ತೇವೆ. ಅವರಿಗೆ ಅದರ ಸುಳಿವೂ ಸಿಗದಂತೆ ಮುಂಜಾಗ್ರತೆ ವಹಿಸುತ್ತೇವೆ. ಅವರೆದುರಿಗೆ ದೊಡ್ಡವರಾಗುತ್ತೇವೆ. ಅವರೂ ನಮ್ಮನ್ನು ಪ್ರೀತಿಸಲಿ ಎಂದು ಬಯಸುತ್ತೇವೆ. ಅವರೇ ಅದನ್ನು ಬಂದು ಹೇಳಲಿ ಎಂದು ಕಾಯುತ್ತೇವೆ. ಅವರೊಂದಿಗೆ ಹೆಚ್ಚು ಹೊತ್ತು ಕಳೆಯಲು ಬಯಸುತ್ತೇವೆ. ಸಿಕ್ಕಿದಾಗಲೆಲ್ಲಾ ಮಾತಾಡುತ್ತೇವೆ. ಅವರಿಗೆ ಅನೇಕ ರೀತಿಯಲ್ಲಿ ಉದಾರವಾದ ತೋರಿಸುತ್ತೇವೆ. ದಿನಗಳುರಿಳಿದಂತೆ ಆಕೆ ನಮ್ಮವರಲ್ಲಿ ಒಬ್ಬಳಗಿರುತ್ತಾಳೆ. ಆಕೆ ನಮ್ಮ ಪ್ರೀತಿಯನ್ನು ಅರ್ಥೈಸಿಕೊಳ್ಳಲು ವಿಫಲವಾಗುತ್ತಾಳೆ. ನಮ್ಮವಳಾಗಬೇಕಿದ್ದವಳು ಯಾರದೋ ತೆಕ್ಕೆಯಲ್ಲಿರುತ್ತಾಳೆ. ಮದುವೆಯಾಗಿರುತ್ತಾಳೆ! ಕೊನೆ ಕ್ಷಣದಲ್ಲಾದರೂ ನಾವು ಪ್ರೀತಿಸಿದ್ದನ್ನು ಹೇಳಬೇಕು ಎಂದೆಲ್ಲಾ ಭಾವಿಸುತ್ತೇವೆ. ಆದರೆ ಮನಸ್ಸೊಪ್ಪದೇ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತೆವೆ. ಜೀವನವಿಡೀ ಆ ನೆನಪುಗಳೇ ನಮ್ಮ ಪಾಲಿನ ಸವಿ ನೆನಪುಗಳಾಗಿರುತ್ತವೆ. ಹೌದು ‘ನಾವು ಹುಡುಗರೇ ಹೀಗೆ..’!