Thursday, February 14, 2008

ಕೈ ಬಿಡಲಾರೆ ಗೆಳತಿ ಎಂದಿಗೂ...



ಫೋನ್ ನಲ್ಲಿ ನನ್ನ ಸ್ನೇಹಿತೆಯೆಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಾ ಆಕೆ ನನ್ನ ನಿದ್ದೆ ಕೆಡಿಸಿದ್ದಳು.ಅದು ನನ್ನ ಸ್ನೇಹಿತೆಯಲ್ಲಾ ಎಂದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.ಆದರೂ ಅದು ಯಾರಾಗಿರಬಹುದೆಂಬ ಚಿಂತೆ ನನ್ನನ್ನು ಕಾಡಿತ್ತು.ಅದೊಂದು ದಿನ ನಾನು ಇಂಟರ್ವ್ಯೂವ್ ನಲ್ಲಿ ಫೇಲ್ ಆಗಿದ್ದೆ.ಆ ಹೊತ್ತಿನಲ್ಲಿ ಆಕೆಯ ಕರೆ ಬಂದಾಗ ನನ್ನ ಚಿಂತೆ ಮತ್ತಷ್ಟು ಜಾಸ್ತಿಯಾಯಿತು.ಆ ಸಮಯದಲ್ಲಿ ನನಗೆ ಗರ ಬಡಿದಂತಾದ್ದರಿಂದ ನನ್ನ ಚಿಂತೆ ದಃಖವನ್ನೆಲ್ಲಾ ಆಕೆಯಲ್ಲಿ ಹೇಳಿ ನನ್ನೊಡನೆ ಆಟವಾಡಬೇಡವೆಂದಾಗಿ ವಿನಂತಿಸಿದ್ದೆ.ಆಕೆಯ ಮನ ಕರಗಿತು.ಕ್ಷಮಿಸುವಂತೆ ಕೇಳಿದಳು.ಕ್ಷಮಿಸುವಂತಹಾ ದೊಡ್ಡವನು ನಾನಾಗಿಲ್ಲವೆಂದು ಹೇಳಿ ಆಕೆಯ ಮನಸ್ಸಿನಲ್ಲಿ ದೊಡ್ಡವನಾದೆ !

ಅಂದಿನಿಂದ ಶುರುವಾಗಿತ್ತು ನಮ್ಮಿಬ್ಬರ ಸ್ನೇಹ.ನಾನೆಂದೂ ಕಂಡಿರದ ಆ 'ಮಲೆನಾಡಿನ ಹುಡುಗಿ'ಯ ದನಿ ನನ್ನನ್ನು ಸೆಳೆಯತೊಡಗಿತು.ಅದಾಗಲೇ ನಮ್ಮ ಸ್ನೇಹದ ಕೂಸು ಒಂದು ವರ್ಷ ಪೂರೈಸಿತ್ತು.ನಾವಿಬ್ಬರೂ ಪರಸ್ಪರ ಅರಿತುಕೊಂಡಿದ್ದೆವು.ಆಕೆಯನ್ನು ನನ್ನ ಸಂಗಾತಿಯಾಗಿ ಸ್ವೀಕರಿಸಲು ಮನಸ್ಸೊಪ್ಪಿತು.ನನ್ನಿಚ್ಛೆಯನ್ನು ವ್ಯಕ್ತಪಡಿಸಿದೆ.ಆಕೆಯೂ ಸಮ್ಮತಿಸಿದಳು.ನನಗೆ ಆಕಾಶಕ್ಕೆ ಮೂರು ಗೇಣು ಇದ್ದಷ್ಟೇ ಸಂತಸವಾಗಿತ್ತು.ಸಾಗಿದಷ್ಟು ಮುಗಿಯದ ಬದುಕೆಂಬ ಸಾಗರದ ನೌಕೆಯಲ್ಲಿ ನಾನು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾಗ ಆಕೆ ನೀಡಿದ್ದ ‘ಸಾಥ್’ ಹೊಸ ಚೈತನ್ಯವನ್ನೇ ಒದಗಿಸಿತ್ತು.ಆಕೆ ತುಂಬಿದ ಸ್ಪೂರ್ತಿಗಳಿಂದ ಇಂಟರ್ವ್ಯೂವ್ ನಲ್ಲಿ ಮೊದಲಿಗನಾಗಿ ಪಾಸಾಗಿ ಕೆಲಸ ಗಿಟ್ಟಿಸಿಕೊಂಡು ಖುಷಿ ಪಟ್ಟಿದ್ದೆ.ಹೀಗೆ ಮುಂದುವರಿಯುತ್ತಾ ನನ್ನವಳೊಂದಿಗೆ ದಿನಾಲೂ ಮೂರುಗಂಟೆಗಿಂತ ಹೆಚ್ಚಿನ ಸಮಯ ಫೋನ್ ನಲ್ಲಿ ಕಳೆಯುತ್ತಿದ್ದೆ.

ಆಕೆಯನ್ನು ನೋಡಬೇಕೆಂಬ ಉದ್ದೇಶದಿಂದ ಮಲೆನಾಡಿಗೆ ಹೆಜ್ಜೆಯಿಟ್ಟಿದ್ದೆ.ನನ್ನ ವ್ಯಕ್ತಿತ್ವವಕ್ಕೆ ತಕ್ಕುದಾದ ಸಂಗಾತಿಯನ್ನು ಕರುಣಿಸಿದ್ದಕ್ಕಾಗಿ ಭಗವಂತನ್ನ್ನು ಸ್ತುತಿಸಿದ್ದೆ.ನನ್ನ ಹುಟ್ಟುಹಬ್ಬವನ್ನು ಮೊದಲಬಾರಿ ಆಚರಿಸಿಕೊಂಡಾಗ ‘ನನಗೇನು ಗಿಫ್ಟ್ ಕೊಡುತ್ತಿಯಾ?’ ಎಂದು ಕೇಳಿದ್ದಕ್ಕೆ, ‘ನಿನ್ನ ಮಗುವನ್ನು ಹೆತ್ತುಕೊಡುವೆ’ ಎಂದಿದ್ದ ಆಕೆಯ ಬಹು ದೊಡ್ಡ ಮಾತುಗಳಿಂದ ಆಕೆ ನನ್ನ ಹೃದಯದ ಒಡತಿಯಾಗಿದ್ದಳು.

ಕಾಲಚಕ್ರ ಉರುಳಿದಂತೆ ಆಕೆಯ ಸಂಬಂದಿಯೋರ್ವಳು ‘ಶಕುನಿ’ಯಾಗಿ ಕಾಡಿ, ಮನೆಯಲ್ಲಿ ರಾದ್ದಾಂತಾನೆ ಮಾಡಿದ್ದಳು.ಆಕೆ ಮರೆಯದಿದ್ದರೆ ನನ್ನನ್ನು ಕೊಲ್ಲುವುದಾಗಿ ಆಕೆಯ ಅಪ್ಪ ಬೆದರಿಕೆ ಹಾಕಿದಾಗ, ಕತ್ತರಿಯ ನಡುವೆ ಸಿಕ್ಕಿ ಹಾಕಿಕೊಂಡ ಹಕ್ಕಿಯ ರೆಕ್ಕೆಯಂತಾಗಿ ಆಕೆ ಮರೆಯುವ ನಾಟಕವಾಡಿದಳು.ಕಾರಣ ಆಕೆಯವನಾಗಿರುವ ನನ್ನನ್ನು ಉಳಿಸಲು.ನನ್ನ ಪ್ರೀತಿಯ ‘ನಿಶಾ...’ ನಾನೆಂದಿಗೂ ನಿನ್ನವನೇ. ಈ ಜನ್ಮದಲ್ಲಿ ನಿನ್ನನ್ನಲ್ಲದೇ ಇನ್ಯಾರನ್ನೂ ತಲೆಯೆತ್ತಿ ನೋಡಲ್ಲಾ.ನಿನ್ನನ್ನೆಂದಿಗೂ ಮರೆಯಲ್ಲಾ. ನಮ್ಮೀ ಪ್ರೀತಿ ಶಾಶ್ವತ..ನೆನಪಿರಲಿ...

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ...


ಯಾವಾಗಲೂ ನನ್ನನ್ನೇ ನೋಡುತ್ತಾ, ನನ್ನ ಜೊತೆ ಮಾತನಾಡುತ್ತಾ,ನಾನೇನು ಬೈದರೂ ಜಗಳವಾಡಿದರೂ ಮನಸ್ಸಿಗೆ ಹಚ್ಚಿಕೊಳ್ಳದೇ, ನಾನು ಅತ್ತಾಗ ಅವನೂ ಅಳುತ್ತಾ,ಬೇಸರ ಪಟ್ಟಾಗ ಅವನೂ ಬೇಸರಪಡುತ್ತಾ ನನಗೆ ‘ಸಾಥ್’ ನೀಡುತ್ತಿದ್ದಾತ ಈಗ ನನ್ನ ಮುಂದಿಲ್ಲ.ಇತ್ತೀಚಿಗೆ ನಡೆದ ಬೈಕ್ ಅಫಘಾತದಲ್ಲಿ ಆತ ಇಹಲೋಕ ತ್ಯಜಿಸಿದನೆಂಬ ಸುದ್ದಿ ನನ್ನ ಅರ್ಧ ಜೀವವನ್ನೇ ಇಹಲೋಕ ತ್ಯಜಿಸಿಸಿತ್ತು!
ಆವನ ಜೊತೆ ಕಳೆದ ಕ್ಷಣಗಳೆಲ್ಲಾ ನನ್ನ ಕಣ್ಣಿಗೆ ಕಟ್ಟುತ್ತಿದೆ.ಅನೇಕ ದೇವಸ್ಥಾನ ಪಾರ್ಕನ್ನು ಕೈ-ಕೈ ಹಿಡಿದು ‘ಸಪ್ತಪದಿ’ಯೆಂದು ತಿಳಿದು ಸುತ್ತಾಡಿದ್ದು, ನನ್ನನ್ನು ನೋಡಲು ಬಿಸಿಲು-ಮಳೆ-ಗಾಳಿಯನ್ನು ಲೆಕ್ಕಿಸದೇ ಆತ ಬೈಕ್ ನಲ್ಲಿ ಬರುತ್ತಿದ್ದುದು,ಪಾರ್ಕ್ ನಲ್ಲಿ ಆತ ಕೊಟ್ಟಿದ್ದ ಪ್ರಿತಿಯ ಅಪ್ಪುಗೆಯ ಮುತ್ತು, ನನ್ನ ಗಲ್ಲವನ್ನು ಕೈಯಿಂದ ಹಿಡಿದು ಮಾತನಾಡುತ್ತಿದ್ದ ಆತನ ಮಾತುಗಳು ಕನಸಿನಲ್ಲಿ ಪುನರಾವರ್ತನೆಯಾಗಿ ಕಳೆದು ಹೋದ ಕ್ಷಣಗಳನ್ನು ನೆನಪಿಸುತ್ತದೆ.
ಆತ ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಗುತ್ತಿದ್ದುದರಿಂದ ಮನೆಯಲ್ಲಿ ಫೋನಿದ್ದರೂ ಮನೆಯವರ ಕಣ್ಣು ತಪ್ಪಿಸಿ ದಿನಾಲೂ ಕಾಯಿನ್ ಬಾಕ್ಸ್ ಗೆ ಹೋಗಿ ಫೋನ್ ಮಾಡಿ ಆತನನ್ನು ಎಬ್ಬಿಸಿ ‘ಗುಡ್ ಮಾರ್ನಿಂಗ್’ ಹೇಳುತ್ತಿದ್ದುದು ಈಗ ಬರೀ ನೆನಪಷ್ಟೇ ! ಆ ಕಾಯಿನ್ ಬಾಕ್ಸ್ ನನ್ನ ಕಣ್ಣೆದುರಿಗೆ ಬಿದ್ದಾಗ ಬಿಕ್ಕಿ-ಬಿಕ್ಕಿ ಅಳುತ್ತೇನೆ. ನಮ್ಮಿಬ್ಬರ ದಾಂಪತ್ಯ ಹೀಗೇ ಇರಬೇಕು, ನಮ್ಮ ಮಕ್ಕಳನ್ನು ಹೀಗೇ ಬೆಳೆಸಬೇಕು ಎಂದು ಕಂಡಿದ್ದ ಕನಸೆಲ್ಲಾ ಈಗ ಕನಸಾಗಿಯೇ ಉಳಿದಿದೆ. ‘ನಿನಗೆ ನನ್ನ ಮೇಲೇ ಪ್ರೀತೀನೆ ಇಲ್ಲಾ’ ಎಂದು ನಾನು ಸುಮ್ ಸುಮ್ನೆ ರೇಗಾಡುತ್ತಿದ್ದಾಗ ‘ನಾನು ಸತ್ತ ಮೇಲೆ ನಿನಗೆ ನನ್ನ ಪ್ರೀತಿ ಅರ್ಥವಾಗುತ್ತೆ’ ಅನ್ನುತ್ತಿದ್ದ ಆತನ ಮಾತು ಈಗ ನಿಜವಾಗಿದೆ.
ನನ್ನ ಪ್ರೀತಿಯ ‘ದಿನ್ನು’...ಈ ಲೋಖದಲ್ಲಿ ನಿನ್ನ ಕೈ ಹಿಡಿಯುವ ಅದೃಷ್ಟಕ್ಕೆ ಆ ಭಗವಂತ ಕಲ್ಲು ಹಾಕಿದ.ಮುಂದಿನ ಜನ್ಮದಲ್ಲಾದರೂ ನಿನ್ನವಳಾಗಿರುತ್ತೇನೆ.ನನ್ನ ನಿನ್ನ ಪ್ರೀತಿ ಅಮರ-ಶಾಶ್ವತವಾಗಿರಲಿ...

ಹೇಳದೇ ಬಂದು ಕೇಳದೇ ಹೋದವಳ ನೆನೆಯುತ...

‘ನಿಜವಾದ ಪ್ರೀತಿಗೆ ಜಯ ಸಿಗುತ್ತೆ ಅನ್ನೋದು ಶೇಕ್ಸ್ ಪಿಯರ್ ನ ನಾಟಕ ಅಥವಾ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದೆ.ನಿಜ ಜೀವನದಲ್ಲಿ ಇಲ್ಲಾಂತ ಕಾಣುತ್ತಿದೆ’.ಇದು ನನ್ನ ಬಾಯಲ್ಲಿ ಬರುವ ಮಾತುಗಳೇ ಎಂದು ನನಗೇ ಸಂಶಯವಾಗುತ್ತಿದೆ.ಕಾರಣ ನಾನೂ ಒಬ್ಬಳನ್ನು ಪ್ರೀತಿಸಿದ್ದೆ.
‘ಟೈಂ ಪಾಸ್’ ಗಾಗಿರದೇ, ಜೀವನ ಸಂಗಾತಿಯಾಗಿ ಪ್ರೀತಿಸಿದ್ದೆ.ಎಲ್ಲಾ ಹುಡುಗರಂತೆ ನಾನೆಂದೂ ಹುಡುಗಿಯರ ಹಿಂದೆ ಸುತ್ತಿದವನಲ್ಲಾ.ನಾನವಳನ್ನು ಚಿಕ್ಕಂದಿನಿಂದಲೇ ನೋಡುತ್ತಿದ್ದೆ.ಎರಡು ವರ್ಷಗಳ ಹಿಂದೆ ಅವಳ ಕಣ್ಣೋಟಗಳು ಅದಲು ಬದಲಾದಾಗ ನನಗೆ ತಿಳಿದಿತ್ತು ಆಕೆ ನನ್ನನ್ನು ಪ್ರೀತಿಸುತ್ತಿರುವಳೆಂದು.ಆ ಮಾತುಗಳು ಆಕೆಯ ಬಾಯಲ್ಲೇ ಬರಲಿ ಎಂದು ಸುಮ್ಮನಾದೆ.ಅದರ ಕರೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.ಕಾರಣ ನನಗೆ ಪ್ರೀತಿಗಿಂತ ಸ್ನೇಹ ಮುಖ್ಯ.ಅದಲ್ಲದೇ ಪ್ರೀತಿ ಪ್ರೇಮಗಳಲ್ಲಿ ನಂಬಿಕೆ ಇಲ್ಲದವ ನಾನು.
ಆ ಸುದಿನ ಬಂದೇ ಬಿಟ್ಟಿತು. ಆಕೆ ನನ್ನಲ್ಲಿ ಬಂದು ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ.ನೀನೆಂದಿಗೂ ನನ್ನವನೇ’ ಅಂದಳು. ‘ಈಗೆಲ್ಲಾ ನನಗದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಇಷ್ಟವಿಇಲ್ಲಾ’ ಎಂದು ಅವಳಿಗೆ ಬುದ್ದಿವಾದ ಹೇಳಿದೆ.ಆದರೂ ಹಠಾಮಾರಿಯಾದ ಆಕೆ ಬಿಡಲಿಲ್ಲಾ.ನನ್ನ ಮನಸ್ಸು ಕದಿಯುವಲ್ಲಿ ಯಶಸ್ವಿಯಾದಳು.ನನಗರಿವಿಲ್ಲದಂತೆ ಪ್ರೀತಿಯೆಂಬ ಕಡಲಲ್ಲಿ ಪಯಣಿಗನಾಗಿ ನಾನವಳಿಗೆ ಸಾಥ್ ನೀಡಿದ್ದೆ. ನಾನವಳನ್ನು ಮುಗ್ದ ಮನಸ್ಸಿನಿಂದ ನಿಜವಾದ ಪ್ರೀತಿಯಿಂದ ಪ್ರೀತಿಸತೊಡಗಿದೆ.ಅವಳಿಲ್ಲದೇ ನಾನಿಲ್ಲಾ ಎಂಬಂತಿದ್ದೆ.ಅವಳನ್ನು ನೋಡಡಿದ್ದರೆ ಏನನ್ನೋ ಕಳಕೊಂಡಂತೆ ಚಡಪಡಿಸುವ ಸ್ಥಿತಿ ನನ್ನದಾಗಿತ್ತು.
ಹೀಗೆ ‘ರೋಮಿಯೋ-ಜೂಲಿಯೆಟ್’ ನಂತೆ ಸಂತಸದ ಅಲೆಯಲ್ಲಿ ತೇಲುತ್ತಿದ್ದಾಗ, ಇದ್ದಕ್ಕಿದ್ದಂತೆ ಆಕೆ ನನ್ನಿಂದ ದೂರ ಸರಿಯ ತೊಡಗಿದಳು.ನನಿಗೆ ಕಾಲ್ ಮಾಡಿ ಮಾತಾಡೂವುದಂತೂ ಕನಸಿನ ಮಾತಾಯ್ತು !ನನಗ್ಯಾಕೋ ಇದು ಅರ್ಥಾನೇ ಆಗ್ಲಿಲ್ಲಾ.ನಾನೆಂದೂ ನಕಾರಾತ್ಮಕವಾಗಿ ಯೋಚಿಸಲಿಲ್ಲ.ದೌರ್ಭಾಗ್ಯವೆಂಬಂತೆ ನನ್ನ ಸಿಮ್ ಕಾರ್ಡ್ ಕಳೆದು ಹೋದಾಗ ಅವಳಿಗೆ ನನ್ನನ್ನು ಸಂಪರ್ಕಿಸಲು ತೊಂದರೆಯಾಗಬಾರದೆಂದು, ಏನೆಲ್ಲಾ ಮಾಡಿ ಅದೇ ನಂಬರಿನ ಸಿಮ್ ಕಾರ್ಡ್ ದುಬಾರಿ ಹಣ ತೆತ್ತು ತೆಗೆದಿದ್ದೆ.ಎಲ್ಲಾ ಅವಳಿಗಾಗಿ ! ಆದರೆ ಇದುವರೆಗೂ ಆಕೆಯಿಂದ ಒಂದೇ ಒಂದು ಕರೆ ನನ್ನತ್ತ ಸುಳಿದಿಲ್ಲಾ ಎಂಬುವುದು ಬೇರೆ ವಿಚಾರ.
ಅವಳು ಎಲ್ಲಾದರೂ ಕಾಣ ಸಿಗುತ್ತಾಳೆಯೇ ಎಂದು ಆಶಾವಾದಿಯಾಗಿ ಹುಡುಕುತ್ತಿದ್ದೆ.ಒಂದು ವರ್ಷವೇ ಕಳೆದಿತ್ತು ನಾನವಳನ್ನು ನೋಡದೇ.ನನ್ನ ಮನಸ್ಸಿನಲ್ಲಿರೋ ಆಕೆಯ ಫೋಟೋ ಅಸ್ಪಷ್ಟವಾಗತೊಡಗಿದ್ದರಿಂದ ಬೇಸರವಾಗಿತ್ತು.ಇತ್ತೀಚಿಗೆ ಕಾಣ ಸಿಕ್ಕಳು.ನನಗೆ ಸಂತಸ ತಡೆಯಲಾಗಲಿಲ್ಲ.ಅಪ್ಪಿಕೊಳ್ಳೋನಾಂತ ಅನಿಸಿತು. ಆದರೆ ಅನಿಸಿದ್ದೆಲ್ಲಾ ಮಾಡಕ್ಕಾಗಲ್ಲಾ ಅಲ್ವಾ...?
ಮಾತನಾಡಿಸಲು ಹತ್ತಿರ ಹೋದೆ.ನನ್ನನ್ನು ಕಂಡೂ ಕಾಣದವಳಂತೆ ಸುಮ್ಮನಿದ್ದಳು.ಬೇಸರವಾಯ್ತಾದರೂ ಸಹಿಸಿಕೊಂಡೆ.ಕೆಲದಿನಗಳ ನಂತರ ಮತ್ತೊಮ್ಮೆ ಕಾಣ ಸಿಕ್ಕಳು.ಹತ್ತಿರ ಹೋದೆ.ಅಪರಿಚಿತರಂತೆ ಅಸಹ್ಯವಾಗಿ ನಡೆಸಿಕೊಂಡಳು.ಅಂದೇ ನನಗೆ ಗೊತ್ತಾಯ್ತು ಆಕೆ ನನ್ನನ್ನು ಮರೆತಿದ್ದಾಳೆಂದು.
ನಿಸ್ವಾರ್ಥಿಯಾಗಿ ನಿಜವಾದ ಪ್ರೀತಿ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ ಕಂಡು ಮನ ಕರಗಿತು.ಇನ್ನು ಕೂತು ಅವಳನ್ನೇ ಜಪಿಸುವುದರಲ್ಲಿ ಅರ್ಥವಿಲ್ಲಾಂತ ಅರಿವಾಯಿತು.ಅದಕ್ಕಾಗಿ ಅವಳನ್ನೂ, ಆ ಸವಿ ನೆನಪುಗಳನ್ನು ಚಿವುಟಿ ಹಾಕಲು ಅದನ್ನೆಲ್ಲಾ ಕೆಟ್ಟ ಕನಸೆಂಬಂತೆ ಮರೆಯಲು ಪ್ರಯತ್ನಿಸುತ್ತಿದ್ದೇನೆ.ಆ ಸವಿ ನೆನಪುಗಳನ್ನೆಲ್ಲಾ ಮರೆಯಲು ಸಾದ್ಯವೇ...?