Thursday, February 14, 2008

ಕೈ ಬಿಡಲಾರೆ ಗೆಳತಿ ಎಂದಿಗೂ...



ಫೋನ್ ನಲ್ಲಿ ನನ್ನ ಸ್ನೇಹಿತೆಯೆಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಾ ಆಕೆ ನನ್ನ ನಿದ್ದೆ ಕೆಡಿಸಿದ್ದಳು.ಅದು ನನ್ನ ಸ್ನೇಹಿತೆಯಲ್ಲಾ ಎಂದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.ಆದರೂ ಅದು ಯಾರಾಗಿರಬಹುದೆಂಬ ಚಿಂತೆ ನನ್ನನ್ನು ಕಾಡಿತ್ತು.ಅದೊಂದು ದಿನ ನಾನು ಇಂಟರ್ವ್ಯೂವ್ ನಲ್ಲಿ ಫೇಲ್ ಆಗಿದ್ದೆ.ಆ ಹೊತ್ತಿನಲ್ಲಿ ಆಕೆಯ ಕರೆ ಬಂದಾಗ ನನ್ನ ಚಿಂತೆ ಮತ್ತಷ್ಟು ಜಾಸ್ತಿಯಾಯಿತು.ಆ ಸಮಯದಲ್ಲಿ ನನಗೆ ಗರ ಬಡಿದಂತಾದ್ದರಿಂದ ನನ್ನ ಚಿಂತೆ ದಃಖವನ್ನೆಲ್ಲಾ ಆಕೆಯಲ್ಲಿ ಹೇಳಿ ನನ್ನೊಡನೆ ಆಟವಾಡಬೇಡವೆಂದಾಗಿ ವಿನಂತಿಸಿದ್ದೆ.ಆಕೆಯ ಮನ ಕರಗಿತು.ಕ್ಷಮಿಸುವಂತೆ ಕೇಳಿದಳು.ಕ್ಷಮಿಸುವಂತಹಾ ದೊಡ್ಡವನು ನಾನಾಗಿಲ್ಲವೆಂದು ಹೇಳಿ ಆಕೆಯ ಮನಸ್ಸಿನಲ್ಲಿ ದೊಡ್ಡವನಾದೆ !

ಅಂದಿನಿಂದ ಶುರುವಾಗಿತ್ತು ನಮ್ಮಿಬ್ಬರ ಸ್ನೇಹ.ನಾನೆಂದೂ ಕಂಡಿರದ ಆ 'ಮಲೆನಾಡಿನ ಹುಡುಗಿ'ಯ ದನಿ ನನ್ನನ್ನು ಸೆಳೆಯತೊಡಗಿತು.ಅದಾಗಲೇ ನಮ್ಮ ಸ್ನೇಹದ ಕೂಸು ಒಂದು ವರ್ಷ ಪೂರೈಸಿತ್ತು.ನಾವಿಬ್ಬರೂ ಪರಸ್ಪರ ಅರಿತುಕೊಂಡಿದ್ದೆವು.ಆಕೆಯನ್ನು ನನ್ನ ಸಂಗಾತಿಯಾಗಿ ಸ್ವೀಕರಿಸಲು ಮನಸ್ಸೊಪ್ಪಿತು.ನನ್ನಿಚ್ಛೆಯನ್ನು ವ್ಯಕ್ತಪಡಿಸಿದೆ.ಆಕೆಯೂ ಸಮ್ಮತಿಸಿದಳು.ನನಗೆ ಆಕಾಶಕ್ಕೆ ಮೂರು ಗೇಣು ಇದ್ದಷ್ಟೇ ಸಂತಸವಾಗಿತ್ತು.ಸಾಗಿದಷ್ಟು ಮುಗಿಯದ ಬದುಕೆಂಬ ಸಾಗರದ ನೌಕೆಯಲ್ಲಿ ನಾನು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾಗ ಆಕೆ ನೀಡಿದ್ದ ‘ಸಾಥ್’ ಹೊಸ ಚೈತನ್ಯವನ್ನೇ ಒದಗಿಸಿತ್ತು.ಆಕೆ ತುಂಬಿದ ಸ್ಪೂರ್ತಿಗಳಿಂದ ಇಂಟರ್ವ್ಯೂವ್ ನಲ್ಲಿ ಮೊದಲಿಗನಾಗಿ ಪಾಸಾಗಿ ಕೆಲಸ ಗಿಟ್ಟಿಸಿಕೊಂಡು ಖುಷಿ ಪಟ್ಟಿದ್ದೆ.ಹೀಗೆ ಮುಂದುವರಿಯುತ್ತಾ ನನ್ನವಳೊಂದಿಗೆ ದಿನಾಲೂ ಮೂರುಗಂಟೆಗಿಂತ ಹೆಚ್ಚಿನ ಸಮಯ ಫೋನ್ ನಲ್ಲಿ ಕಳೆಯುತ್ತಿದ್ದೆ.

ಆಕೆಯನ್ನು ನೋಡಬೇಕೆಂಬ ಉದ್ದೇಶದಿಂದ ಮಲೆನಾಡಿಗೆ ಹೆಜ್ಜೆಯಿಟ್ಟಿದ್ದೆ.ನನ್ನ ವ್ಯಕ್ತಿತ್ವವಕ್ಕೆ ತಕ್ಕುದಾದ ಸಂಗಾತಿಯನ್ನು ಕರುಣಿಸಿದ್ದಕ್ಕಾಗಿ ಭಗವಂತನ್ನ್ನು ಸ್ತುತಿಸಿದ್ದೆ.ನನ್ನ ಹುಟ್ಟುಹಬ್ಬವನ್ನು ಮೊದಲಬಾರಿ ಆಚರಿಸಿಕೊಂಡಾಗ ‘ನನಗೇನು ಗಿಫ್ಟ್ ಕೊಡುತ್ತಿಯಾ?’ ಎಂದು ಕೇಳಿದ್ದಕ್ಕೆ, ‘ನಿನ್ನ ಮಗುವನ್ನು ಹೆತ್ತುಕೊಡುವೆ’ ಎಂದಿದ್ದ ಆಕೆಯ ಬಹು ದೊಡ್ಡ ಮಾತುಗಳಿಂದ ಆಕೆ ನನ್ನ ಹೃದಯದ ಒಡತಿಯಾಗಿದ್ದಳು.

ಕಾಲಚಕ್ರ ಉರುಳಿದಂತೆ ಆಕೆಯ ಸಂಬಂದಿಯೋರ್ವಳು ‘ಶಕುನಿ’ಯಾಗಿ ಕಾಡಿ, ಮನೆಯಲ್ಲಿ ರಾದ್ದಾಂತಾನೆ ಮಾಡಿದ್ದಳು.ಆಕೆ ಮರೆಯದಿದ್ದರೆ ನನ್ನನ್ನು ಕೊಲ್ಲುವುದಾಗಿ ಆಕೆಯ ಅಪ್ಪ ಬೆದರಿಕೆ ಹಾಕಿದಾಗ, ಕತ್ತರಿಯ ನಡುವೆ ಸಿಕ್ಕಿ ಹಾಕಿಕೊಂಡ ಹಕ್ಕಿಯ ರೆಕ್ಕೆಯಂತಾಗಿ ಆಕೆ ಮರೆಯುವ ನಾಟಕವಾಡಿದಳು.ಕಾರಣ ಆಕೆಯವನಾಗಿರುವ ನನ್ನನ್ನು ಉಳಿಸಲು.ನನ್ನ ಪ್ರೀತಿಯ ‘ನಿಶಾ...’ ನಾನೆಂದಿಗೂ ನಿನ್ನವನೇ. ಈ ಜನ್ಮದಲ್ಲಿ ನಿನ್ನನ್ನಲ್ಲದೇ ಇನ್ಯಾರನ್ನೂ ತಲೆಯೆತ್ತಿ ನೋಡಲ್ಲಾ.ನಿನ್ನನ್ನೆಂದಿಗೂ ಮರೆಯಲ್ಲಾ. ನಮ್ಮೀ ಪ್ರೀತಿ ಶಾಶ್ವತ..ನೆನಪಿರಲಿ...

No comments: