Thursday, February 5, 2009

ನಾವು ಹುಡುಗರೇ ಹೀಗೆ!


ಹೌದು ನಮ್ಮ ಸ್ವಭಾವವೇ ಹಾಗೆ. ಜೀವನದಲ್ಲಿ ಏನೋ ಸಾಧಿಸಬೇಕು ಎಂಬ ಛಲದಿಂದ ಕಾಲೇಜಿಗೆ ಬರುತ್ತೇವೆ. ಆಸೆ-ಆಕಾಂಕ್ಷೆ-ಗುರಿ ಎಲ್ಲಾ ನಮ್ಮ ಸ್ನೇಹಿತರೇ ಆಗಿರುತ್ತವೆ. ವಿಪರ್ಯಾಸವೆಂಬತೆ ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಅದನ್ನೆಲ್ಲಾ ಮರೆತು ಬಿಡುತ್ತೇವೆ. ಕಾರಿಡಾರಿನಲ್ಲಿ ಅವಳ್ಯಾರೋ ನಕ್ಕು ಬಿಟ್ಟರೆ ನಾವು ಕ್ಲೀನ್ ಬೌಲ್ಡ್. ನಂತರ ಶುರು ಆಕೆಗಾಗಿ ಹುಡುಕಾಟ.
ನಾವು ಗುಣ ನೋಡಿ ಪ್ರೀತಿಸುವವರಲ್ಲ.ಬದಲಾಗಿ ಸೌಂದರ್ಯಕ್ಕೆ ಮಾರು ಹೋಗುವವರು. ಅದೇ ನಮ್ಮ ವೀಕ್ನೆಸ್. ‘ಆಕೆ’ಯನ್ನು ಹುಡುಕಾಡುತ್ತೇವೆ. ‘ಆಕೆ’ಯ ಸ್ನೇಹಿತರನ್ನು ಸಂಪರ್ಕಿಸುತ್ತೇವೆ. ‘ಆಕೆ’ಯ ಬಗ್ಗೆ ಅನಗತ್ಯವಾಗಿ ಎಲ್ಲವನ್ನೂ ಕೇಳುತ್ತೇವೆ. ಆಕೆಗೂ ಡೌಟ್ ಶುರುವಾಗಿರುತ್ತದೆ. ‘ಆಕೆ’ಯನ್ನು ಕೇಳಿದೆ ಎಂದು ಹೇಳಿ ಎಂದು ಆಕೆಯನ್ನು ‘ದಲ್ಲಾಳಿ’ಯಂತೆ ಬಳಸುತ್ತೇವೆ. ನಂತರ ನಿಧಾನವಾಗಿ ‘ಆಕೆ’ಯನ್ನು ಪ್ರೀತಿಸಿರುವುದಾಗಿ ‘ದಲ್ಲಾಳಿ’ಯಲ್ಲಿ ತಿಳಿಸುತ್ತೇವೆ. ಆದನ್ನು ತಿಳಿದುಕೊಂಡ ‘ಆಕೆ’ ನಮ್ಮನ್ನು ಚೆನ್ನಾಗಿ ಯಾಮಾರಿಸುತ್ತಾಳೆ. ಅವಳೆ ನಮ್ಮ ಸರ್ವಸ್ವ. ಆಕೆಗಾಗಿ ಏನು ಮಾಡಲೂ ನಾವು ತಯಾರಿರುತ್ತೇವೆ. ಪಾರ್ಕು ಕ್ಯಾಂಟೀನು ಎಂದು ಆಕೆಯ ಹಿಂದೆ ಸುತ್ತುತ್ತೇವೆ. ಒಂದು ದಿನ ಕಾಲೇಜಿನಲ್ಲಿ ಆಕೆ ಕಾಣದಿದ್ದರೂ ಏನೇನೋ ಕಳಕೊಂಡಂತೆ ಒದ್ದಾಡುತ್ತೇವೆ. ಆಕೆಯ ಜೊತೆ ಕಳೆಯುವ ಕ್ಷಣಗಳು ನಮಗೆ ತುಂಬಾ ಅಮೂಲ್ಯವಾಗಿ ಬಿಡುತ್ತವೆ. ಆಕೆ ಹೇಳಿದ್ದನ್ನೆಲ್ಲಾ ಮಾಡುತ್ತೇವೆ. ಆಕೆಗಾಗಿ ಹಪಹಪಿಸುತ್ತೇವೆ. ಆಕೆ ಕೇಳಿದ್ದನ್ನೆಲ್ಲಾ ತೆಗೆದು ಕೊಡುತ್ತೇವೆ. ಕಾಲೇಜಿನಿಂದ ಮನೆಗೆ ಬಂದರೂ ಆಕೆಯದ್ದೇ ಚಿಂತೆ. ವೆಲಂಟೈನ್ಸ್ ಡೇ, ಬರ್ತ್ ಡೇ, ನ್ಯೂ ಇಯರ್ ಬಂದಾಗ ಆಕೆಗೇನು ‘ಗಿಫ್ಟ್’ ಕೊಡುವುದು ಎಂದು ಚಿಂತಿಸುತ್ತೇವೆ. ಎಸ್ಸೆಮ್ಮೆಸ್ಸುಗಳ ಭರಾಟೆ ಮುಗಿಲು ಮುಟ್ಟಿರುತ್ತದೆ. ಕರೆ ಮಾಡಿದರೆ ಇಡಲು ಮನಸ್ಸೇ ಬರುವುದಿಲ್ಲ. ಯಾರಿಗೂ ಅದರ ಸುಳಿವೇ ಸಿಗದಂತೆ ‘ಪಿಸು ಪಿಸು ಗುಸು ಗುಸು...’ ಮಾತನಾಡುತ್ತೇವೆ. ಲೆಕ್ಕವಿಲ್ಲದಷ್ಟು ಹಣ ಮೊಬೈಲ್ ಗೆ ಸುರಿಯುತ್ತೇವೆ. ಒಂದೊಮ್ಮೆ ನಮ್ಮವಳ ಬಗ್ಗೆ ಎಲ್ಲರಲ್ಲೂ ಹೇಳಿ ಜಂಬ ಕೊಚ್ಚಿಕೊಳ್ಳುತ್ತೇವೆ.ದಿನ-ತಿಂಗಳುಗಳು ಉರುಳಿದ್ದೇ ಗೊತ್ತಾಗುವುದಿಲ್ಲ.ವರ್ಷಗಳು ಕಳೇದಿರುತ್ತವೆ.ಆಕೆ ನಮ್ಮಿಂದ ದೂರ ಸರಿಯ ತೊಡಗುತ್ತಾಳೆ. ಏನಾದರೂ ಕಾರಣಗಳು ನಮ್ಮನ್ನು ದೂರ ಮಾಡುತ್ತವೆ. ಆಕೆಯ ನೆನಪಿನಲ್ಲೇ ಕೊರಗುತ್ತೇವೆ. ಜೀವನದುದ್ದಕ್ಕೂ ಆಕೆಗಾಗಿ ಕಾಯುತ್ತೇವೆ. ಕಾಯುತ್ತಲೇ ಇರುತ್ತೇವೆ! ಒಮ್ಮೆಲೇ ‘ದೇವ್ ದಾಸ್’ ಆಗುತ್ತೇವೆ. ನುಣುಪಾಗಿ ಶೇವ್ ಮಾಡುತ್ತಿದ್ದುದೆಲ್ಲಾ ಮರೆತು ಹೋಗಿರುತ್ತದೆ. ಎಷ್ಟೇ ಹೊತ್ತಿಗೂ ಆಕೆಯನ್ನೇ ನೆನಪಿಸುತ್ತಿರುತ್ತೇವೆ. ಆಕೆಯ ಜೊತೆಗಿದ್ದ ಆ ಕ್ಷಣಗಳನ್ನು ನೆನೆಸಿ, ಕೊರಗಿ ಕೊರಗಿ ದಿನಾ ಸಾಯುತ್ತಿರುತ್ತೇವೆ. ಪ್ರೀತಿ ಮಾಡಬಾರದಿತ್ತು ಎಂದೆಲ್ಲಾ ಹೇಳುತ್ತೇವೆ.ನಮ್ಮ ಅನುಭವಗಳನ್ನು ಎಲ್ಲರಲ್ಲ್ಲೂ ಹೇಳಿ ಭಾವುಕರಾಗುತ್ತೇವೆ.
ಇನ್ನು ಕೆಲವೊಮ್ಮೆ ಯಾರನ್ನೋ ಇಷ್ಟಪಟ್ಟಿರುತ್ತೇವೆ. ಆವರ ಜೊತೆ ಆತ್ಮೀಯತೆಯಿಂದ ‘ನಟಿಸು’ತ್ತೇವೆ. ಅವರೆಂದರೆ ಜೀವ ಎನ್ನುವಷ್ಟರ ಮಟ್ಟಿಗೆ ‘ಸ್ನೇಹ’ವಿರುತ್ತದೆ. ಮನಸಾರೆ ಅವರನ್ನು ಪ್ರೀತಿಸುತ್ತಿರುತ್ತೇವೆ. ಅವರಿಗೆ ಅದರ ಸುಳಿವೂ ಸಿಗದಂತೆ ಮುಂಜಾಗ್ರತೆ ವಹಿಸುತ್ತೇವೆ. ಅವರೆದುರಿಗೆ ದೊಡ್ಡವರಾಗುತ್ತೇವೆ. ಅವರೂ ನಮ್ಮನ್ನು ಪ್ರೀತಿಸಲಿ ಎಂದು ಬಯಸುತ್ತೇವೆ. ಅವರೇ ಅದನ್ನು ಬಂದು ಹೇಳಲಿ ಎಂದು ಕಾಯುತ್ತೇವೆ. ಅವರೊಂದಿಗೆ ಹೆಚ್ಚು ಹೊತ್ತು ಕಳೆಯಲು ಬಯಸುತ್ತೇವೆ. ಸಿಕ್ಕಿದಾಗಲೆಲ್ಲಾ ಮಾತಾಡುತ್ತೇವೆ. ಅವರಿಗೆ ಅನೇಕ ರೀತಿಯಲ್ಲಿ ಉದಾರವಾದ ತೋರಿಸುತ್ತೇವೆ. ದಿನಗಳುರಿಳಿದಂತೆ ಆಕೆ ನಮ್ಮವರಲ್ಲಿ ಒಬ್ಬಳಗಿರುತ್ತಾಳೆ. ಆಕೆ ನಮ್ಮ ಪ್ರೀತಿಯನ್ನು ಅರ್ಥೈಸಿಕೊಳ್ಳಲು ವಿಫಲವಾಗುತ್ತಾಳೆ. ನಮ್ಮವಳಾಗಬೇಕಿದ್ದವಳು ಯಾರದೋ ತೆಕ್ಕೆಯಲ್ಲಿರುತ್ತಾಳೆ. ಮದುವೆಯಾಗಿರುತ್ತಾಳೆ! ಕೊನೆ ಕ್ಷಣದಲ್ಲಾದರೂ ನಾವು ಪ್ರೀತಿಸಿದ್ದನ್ನು ಹೇಳಬೇಕು ಎಂದೆಲ್ಲಾ ಭಾವಿಸುತ್ತೇವೆ. ಆದರೆ ಮನಸ್ಸೊಪ್ಪದೇ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತೆವೆ. ಜೀವನವಿಡೀ ಆ ನೆನಪುಗಳೇ ನಮ್ಮ ಪಾಲಿನ ಸವಿ ನೆನಪುಗಳಾಗಿರುತ್ತವೆ. ಹೌದು ‘ನಾವು ಹುಡುಗರೇ ಹೀಗೆ..’!

2 comments:

Harisha - ಹರೀಶ said...

ಹ್ಮ್ಮ್... ಅನುಭವದ ಸಾರವೆಲ್ಲವನ್ನೂ ಒಂದೇ ಲೇಖನದಲ್ಲಿ ಬರೆದು ಮುಗಿಸಿದಂತಿದೆ?!

ಭೂಮಿ said...

neevu hudugare ege........bannada chittena preetili bandi madlikke agata?